Gold Smuggling | ಚಿನ್ನ ಕಳ್ಳಸಾಗಣೆ: ʼಮಾಣಿಕ್ಯʼ ಸಿನಿಮಾ ನಟಿ ರನ್ಯಾ ಜೈಲು ಪಾಲು
x

ನಟಿ ರನ್ಯಾ

Gold Smuggling | ಚಿನ್ನ ಕಳ್ಳಸಾಗಣೆ: ʼಮಾಣಿಕ್ಯʼ ಸಿನಿಮಾ ನಟಿ ರನ್ಯಾ ಜೈಲು ಪಾಲು

ವಿಚಾರಣೆ ನಡೆಸಿದ ನ್ಯಾಯಾಧೀಶರು, ನಟಿಯನ್ನು ಮಾರ್ಚ್‌ 18ರವರೆಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.


ದುಬೈನಿಂದ 14.2 ಕೆ.ಜಿ ಚಿನ್ನವನ್ನು ಕದ್ದು ಇರಿಸಿಕೊಂಡು ಬಂದಿದ್ದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದೆಹಲಿ ಡಿಆರ್​ಐ ಅಧಿಕಾರಿಗಳು ಬಂಧಿಸಿದ್ದಾರೆ. ರನ್ಯಾ ರಾವ್ ಬಂಧನದ ಬಳಿಕ ಕೋಟಿ ಕೋಟಿ ಬೆಲೆಯ ಚಿನ್ನ ಕಳ್ಳಸಾಗಾಣಿಕೆ ಅಸಲಿಯತ್ತು ಹೊರಬಿದ್ದಿದೆ.

ರನ್ಯಾ ರಾವ್ (33) DGP ರಾಮಚಂದ್ರ ರಾವ್ 2ನೇ ಪತ್ನಿಯ ಮಗಳಾಗಿದ್ದಾರೆ. ರನ್ಯಾ ಅವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಡಿಆರ್‌ಐ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿತ್ತು. ಮಂಗಳವಾರ(ಮಾರ್ಚ್​ 04) ರನ್ಯಾ ರಾವ್​ಳನ್ನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ನಟಿಯನ್ನು ಮಾರ್ಚ್‌ 18ರವರೆಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಡಿಆರ್‌ಐ ತನಿಖೆ

ರನ್ಯಾ ಸ್ಪಲ್ಪ ಪ್ರಮಾಣದ ಬಂಗಾರವನ್ನು ಮೈಮೇಲೆ ಹಾಕಿಕೊಂಡಿದ್ದರು. ಹಾಗೂ ಉಳಿದ ಆಭರಣಗಳನ್ನು ತನ್ನ ಬಟ್ಟೆ ಮತ್ತು ಪರಿಕರಗಳಲ್ಲಿ ಚಿನ್ನದ ಬಾರ್‌ಗಳನ್ನು ಮರೆಮಾಡಿ ಕಳ್ಳಸಾಗಣೆ ಮಾಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಶೋಧದ ವೇಳೆ 2.06ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ನಗದು ಪತ್ತೆಯಾಗಿದೆ. 1962ರ ಕಸ್ಟಮ್ಸ್ ಕಾಯ್ದೆಯ ಪ್ರಕಾರ ನಟಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು ಜಪ್ತಿ ಮಾಡಿದ ವಸ್ತುಗಳ ಮೌಲ್ಯ 17.29 ಕೋಟಿಯಾಗಿದ್ದು, ಒಟ್ಟು 14.2 ಕೆಜಿಯಷ್ಟು ಭಾರೀ ಪ್ರಮಾಣದ ಚಿನ್ನವನ್ನು ಜಪ್ತಿ ಮಾಡಲಾಗಿದೆ.

15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಪ್ರಯಾಣಿಸಿರುವುದರಿಂದ ಅಧಿಕಾರಿಗಳಿಗೆ ರನ್ಯಾ ಮೇಲೆ ಅನುಮಾನ ವ್ಯಕ್ತವಾಗಿತ್ತು. ಅವರು ವರ್ಷದ ಆರಂಭದಿಂದ 10 ಬಾರಿ ಪ್ರವಾಸ ಮಾಡಿದ್ದಾರೆ. ರನ್ಯಾ ರಾವ್ ಸೋಮವಾರ ರಾತ್ರಿ ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಆಗಮಿಸಿದ್ದರು. ಆಗಾಗ ವಿದೇಶ ಪ್ರವಾಸಗಳಿಗಾಗಿ ಕಣ್ಗಾವಲಿನಲ್ಲಿದ್ದರು. ಇದನ್ನು ಗುರಿಯಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಡಿಆರ್‌ಐ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಹಿಡಿದು ಪರಿಶೀಲಿಸಿದಾಗ ಚಿನ್ನಾಭರಣಗಳು ಪತ್ತೆಯಾಗಿವೆ.

ನಾಲ್ಕು ಸದಸ್ಯರ ಡಿಆರ್‌ಐ ತಂಡವು ವಿಮಾನ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, ಆಕೆ ತನ್ನ ಎಲ್ಲಾ ಪ್ರವಾಸಗಳಲ್ಲಿ ಇದೇ ರೀತಿಯ ಬಟ್ಟೆಗಳನ್ನು ಧರಿಸಿರುವುದು ಪತ್ತೆಯಾಗಿದೆ. ದುಬೈ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ಚಿನ್ನದ ಕಳ್ಳಸಾಗಣೆ ಜಾಲದ ಭಾಗವಾಗಿದ್ದಾರೆಯೇ ಮತ್ತು ಅವರು ತಮ್ಮ ಹಿಂದಿನ ವಿದೇಶ ಪ್ರವಾಸದಲ್ಲೂ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆಯೇ ಎಂಬುವದರ ಬಗ್ಗೆ ತನಿಖೆ ನಡೆಯುತ್ತಿದೆ.

ತಪ್ಪಿಸಿಕೊಳ್ಳುವ ತಂತ್ರಗಳು

ಪ್ರಾಥಮಿಕ ತನಿಖೆಗಳ ಪ್ರಕಾರ, ನಟಿ ಕಸ್ಟಮ್ಸ್ ತಪಾಸಣೆಗಳನ್ನು ತಪ್ಪಿಸಲು ತನ್ನ ಸಂಪರ್ಕಗಳನ್ನು ಬಳಸಿಕೊಂಡಿದ್ದಾರೆ. ಅವರು ಡಿಜಿಪಿ ಮಗಳು ಎಂದು ಹೇಳಿಕೊಳ್ಳುವ ಮೂಲಕ ಮತ್ತು ಹಿರಿಯ ಅಧಿಕಾರಿಗಳು ಬಳಸುವ ಅಧಿಕೃತ ಶಿಷ್ಟಾಚಾರ ಸೇವೆಗಳನ್ನು ಬಳಸಿಕೊಳ್ಳುವ ಮೂಲಕ ಹಾಗೆ ಮಾಡುತ್ತಿದ್ದರು.

ಅದರಿಂದಾಗಿ ಕಸ್ಟಮ್ಸ್‌ನಲ್ಲಿ ತಪಾಸಣೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಶಿಷ್ಟಾಚಾರ ಅಧಿಕಾರಿಯೊಬ್ಬರು ಅವರನ್ನು ಟರ್ಮಿನಲ್‌ನಲ್ಲಿ ಭೇಟಿಯಾಗಿ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯುತ್ತಾರೆ. ಸರ್ಕಾರಿ ವಾಹನದ ಮೂಲಕ ಮನೆಗೂ ಕರೆದೊಯ್ಯಲಾಗುತ್ತದೆ. ಕಾನೂನು ಜಾರಿ ಅಧಿಕಾರಿಗಳಿಗೆ ಅವರ ಚಟುವಟಿಕೆಗಳ ಬಗ್ಗೆ ತಿಳಿದಿದೆಯೇ ಅಥವಾ ತಿಳಿಯದೆ ಅವರಿಗೆ ಸಹಾಯ ಮಾಡಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರನ್ಯಾ ರಾವ್ ಯಾರು?

ರನ್ಯಾ ರಾವ್‌ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಕನ್ನಡದ ಮಾಣಿಕ್ಯ (2014), ವಾಘಾ (2016) ಮತ್ತು ಪಟಾಕಿ (2017) ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ವಾಸ್ತುಶಿಲ್ಪಿ ಜತಿನ್ ಹುಕ್ಕೇರಿ ಅವರನ್ನು ವಿವಾಹವಾಗಿದ್ದಾರೆ.

"ಆಕೆ ಮದುವೆಯ ನಂತರ ಅವರ ತಾಯಿಯ ಮನೆಗೆ ಭೇಟಿ ನೀಡಿಲ್ಲ. ತಮ್ಮ ಮತ್ತು ಅವರ ಕುಟುಂಬದಿಂದ ಅವರ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅವರು ಅಥವಾ ಅವರ ಪತಿಯ ವ್ಯವಹಾರಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇದು ಭಾರಿ ಆಘಾತ ಮತ್ತು ನಿರಾಶೆಯನ್ನುಂಟುಮಾಡಿದೆ" ಎಂದು ಡಿಜಿಪಿ ರಾಮಚಂದ್ರ ರಾವ್ ಹೇಳಿದ್ದಾರೆ.

Read More
Next Story