Gold Smuggling | ನಟಿ ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾಗೆ  ಮುಂಬೈ ಸ್ಮಗ್ಲರ್‌ಗೆ ನಂಟು
x

ರನ್ಯಾ ರಾವ್‌ ಚಿನ್ನಕಳ್ಳಸಾಗಣಿಕೆ ಪ್ರಕರಣ

Gold Smuggling | ನಟಿ ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾಗೆ ಮುಂಬೈ ಸ್ಮಗ್ಲರ್‌ಗೆ ನಂಟು

ಮುಂಬೈನಲ್ಲಿ ಬಂಧಿತರಾಗಿರುವ ವಿದೇಶದ ಇಬ್ಬರು ವ್ಯಕ್ತಿಗಳಿಗೂ ರನ್ಯಾಗೂ ನಂಟಿದೆ ಎಂಬ ಅಂಶವನ್ನು ಡಿಆರ್‌ಐ ಬಯಲು ಮಾಡಿದೆ. ಪ್ರಕರಣ ಸಂಬಂಧ ಡಿಆರ್‌ಐ ಅಧಿಕಾರಿಗಳು ನೀಡಿರುವ ಮಾಹಿತಿ ಆಧರಿಸಿ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಚಿನ್ನದ ಮೇಲೆ ಸರ್ಕಾರ ವಿಧಿಸುವ ಸುಂಕ ತಪ್ಪಿಸಲು ದಂಧೆಕೋರರು ಕಳ್ಳಸಾಗಣೆಯ ಮಾರ್ಗ ಹಿಡಿಯುತ್ತಿದ್ದಾರೆ. ದೊಡ್ಡ ಪ್ರಮಾಣದ ಚಿನ್ನ ಅಕ್ರಮವಾಗಿ ದೇಶದೊಳಗೆ ಸಾಗಾಟವಾಗುವ ಹಲವು ಪ್ರಕರಣಗಳ ನಡುವೆಯೇ ಇತ್ತೀಚೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣಿಕೆ ಮಾಡಿ ಸಿಕ್ಕಿ ಬಿದ್ದಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ ಪ್ರಕರಣ ದೇಶಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಡಿಆರ್‌ಐ ಅಧಿಕಾರಿಗಳಿಗೆ ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. ರಾಜ್ಯ ಸೇರಿದಂತೆ ಕೇಂದ್ರದ ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್‌ಐ ಅಧಿಕಾರಿಗಳಿಗೆ ಕೆಲವೊಂದು ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ರನ್ಯಾ ರಾವ್‌ ಹಾಗೂ ಇತ್ತೀಚೆಗೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ವಿದೇಶದ ಇಬ್ಬರು ವ್ಯಕ್ತಿಗಳಿಗೂ ನಂಟಿದೆ ಎಂಬ ಅಂಶವನ್ನು ಡಿಆರ್‌ಐ ಬಯಲು ಮಾಡಿದೆ.

ಮುಂಬೈ ಬಂಧಿತ ಸ್ಮಗ್ಲರ್‌ಗೆ ರನ್ಯಾ ರಾವ್‌ ನಂಟು

ಚಿನ್ನ ಕಳ್ಳಸಾಗಣಿಕೆ ಪ್ರಕಣಕ್ಕೆ ಸಂಬಂಧಿಸಿದಂತೆ ಇದೇ ಜನವರಿಯಿಂದ ಈವರೆಗೆ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಭಾರಿ ಪ್ರಮಾಣದ ಕಳ್ಳಸಾಗಣೆಯ ಚಿನ್ನ ತಂದ ಪ್ರಕರಣಗಳಲ್ಲಿ ರನ್ಯಾ ರಾವ್ ಸೇರಿ ಒಟ್ಟು ನಾಲ್ವರನ್ನು ಡಿಆರ್‌ಐ ಬಂಧಿಸಿತ್ತು. ಇದೀಗ ಮುಂಬೈನಲ್ಲಿ ಬಂಧಿತರಾಗಿರುವ ವಿದೇಶದ ಇಬ್ಬರು ವ್ಯಕ್ತಿಗಳಿಗೂ ರನ್ಯಾಗೂ ನಂಟಿದೆ ಎಂಬ ಅಂಶವನ್ನು ಡಿಆರ್‌ಐ ಬಯಲು ಮಾಡಿದೆ. ಪ್ರಕರಣ ಸಂಬಂಧ ಡಿಆರ್‌ಐ ಅಧಿಕಾರಿಗಳು ನೀಡಿರುವ ಮಾಹಿತಿ ಆಧರಿಸಿ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಯಾವುದೇ ಹೆಸರು ಉಲ್ಲೇಖ ಮಾಡಿಲ್ಲವಾದರೂ, ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಎಂದು ಮಾತ್ರ ನಮೂದು ಮಾಡಲಾಗಿದೆ. ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಒಮಾನ್‌ ಮತ್ತು ಯುಎಇಯ ಇಬ್ಬರನ್ನು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ,18.92 ಕೋಟಿ ರೂ ಮೌಲ್ಯದ 21.28 ಕೆ.ಜಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.

ಕೇಂದ್ರದ ಅಧಿಕಾರಿಗಳ ಪಾತ್ರದ ತನಿಖೆ

ಚಿನ್ನ ಕಳ್ಳಸಾಗಣಿಕೆ ನಾಲ್ಕೂ ಪ್ರಕರಣಗಳಿಂದ ಒಟ್ಟು 38.98 ಕೆ.ಜಿ.ಯಷ್ಟು ಚಿನ್ನವನ್ನು ವಶಕ್ಕೆ ಪಡೆದಿದೆ. ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸಲು ಸಹಕಾರ ನೀಡಿ' ಎಂದು ಡಿಆರ್‌ಐ, ಸಿಬಿಐಗೆ ಪತ್ರ ಬರೆದಿತ್ತು. ಸಿಬಿಐ ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿದೆ. ಮುಂಬೈ ಮತ್ತು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟಮ್ಸ್ ಅಧಿಕಾರಿಗಳಿಗೆ ಸಮನ್ಸ್ ನೀಡಿ, ವಿಚಾರಣೆ ನಡೆಸಿದೆ.

ಕಡ್ಡಾಯ ರಜೆ ಮೇಲೆ ತೆರಳುವಂತೆ ಡಿಜಿಪಿ ರಾಮಚಂದ್ರರಾವ್ ಸೂಚಿಸಿದ ಸರ್ಕಾರ

ಈ ಪ್ರಕರಣದ ಬೆನ್ನಲ್ಲೇ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ತಮ್ಮ ಮಲ ಮಗಳಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಗುರುವಾರ ರಾಜ್ಯ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.

ಡಿಜಿಪಿ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೂಲಕ ಸರ್ಕಾರ ನಿರ್ದೇಶ ನೀಡಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಬೇಕಿದೆ. ಈ ಸೂಚನೆ ಬೆನ್ನಲ್ಲೇ ಮಧ್ಯಾಹ್ನ ಕಚೇರಿಯಿಂದ ಡಿಜಿಪಿ ರಾಮಚಂದ್ರರಾವ್ ತೆರಳಿದ್ದಾರೆ ಎನ್ನಲಾಗಿದೆ.

ಶಿಷ್ಟಾಚಾರ ಸೌಲಭ್ಯ ಮತ್ತು ಆರೋಪ

ನಟಿ ರನ್ಯಾ ರಾವ್‌ ದುಬೈನಿಂದ ವಾಪಸ್ಸಾದಾಗ, ಅವರಿಗಾಗಿ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಶಿಷ್ಟಾಚಾರ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಬಸವರಾಜು ನೀಡಿದ ಹೇಳಿಕೆಗಳು ಮಹತ್ವ ಪಡೆದಿವೆ. ಡಿಜಿಪಿ ರಾಮಚಂದ್ರರಾವ್ ಅವರ ಸೂಚನೆಯ ಮೇರೆಗೆ ನಟಿಗೆ ಶಿಷ್ಟಾಚಾರ ಸೌಲಭ್ಯ ಕಲ್ಪಿಸಲಾಗಿದೆ ಎಂದು ಎಂದು ಅವರು ಹೇಳಿಕೆ ನೀಡಿದ್ದಾರೆ.

ಬಸವರಾಜು ಹೇಳಿದ್ದೇನು?

“ನನಗೆ ದುಬೈನಿಂದಲೇ ರನ್ಯಾ ರಾವ್‌ ಕರೆ ಮಾಡಿ ಶಿಷ್ಟಾಚಾರ ಪ್ರಕಾರ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಡಿಜಿಪಿ ರಾಮಚಂದ್ರರಾವ್‌ ಅವರೇ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಶಿಷ್ಟಾಚಾರ ಸೌಲಭ್ಯ ಕಲ್ಪಿಸಲು ಸೂಚಿಸಿದ್ದರು. ನಾನು ಕೇವಲ ಅಧಿಕಾರಿಗಳ ಆದೇಶದ ಪ್ರಕಾರ ಕಾರ್ಯನಿರ್ವಹಿಸಿದ್ದೇನೆ ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಡಿಜಿಪಿ ವಿರುದ್ಧದ ಆರೋಪಗಳಿಗೆ ಮತ್ತಷ್ಟು ತೂಕ ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆಯನ್ನು ತೀವ್ರಗೊಳಿಸಲಾಗಿದೆ.

ರಾಮಚಂದ್ರರಾವ್‌ ಸೂಚನೆ

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಬಸವರಾಜು ಅಲಿಯಾಸ್ ಬಸಪ್ಪ ಐ.ಬಿಳ್ಳೂರು 2012ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಹೆಡ್‌ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಕುಟುಂಬದವರಿಗೆ ಶಿಷ್ಟಾಚಾರ ಸೌಲಭ್ಯ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಕೊಟ್ಟಿದ್ದರು. ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನೀಡುವಂತೆ ಬಸವರಾಜು ಅವರಿಗೆ ಖುದ್ದು ಡಿಜಿಪಿ ರಾಮಚಂದ್ರರಾವ್ ಕೂಡ ಸೂಚಿಸಿದ್ದರು. ಅದರಂತೆ ನಟಿ ರನ್ಯಾರಿಗೆ ಪೊಲೀಸರು ಶಿಷ್ಟಾಚಾರ ಕಲ್ಪಿಸಿದ್ದರು ಎಂದು ಡಿಆರ್‌ಐ ವಿಚಾರಣೆ ವೇಳೆ ಹೆಡ್‌ ಕಾನ್ಸ್‌ಸ್ಟೆಬಲ್‌ ಉಲ್ಲೇಖಿಸಿದ್ದಾರೆ.

ಬಸವರಾಜು ಜತೆ ಹೋಗಿದ್ದೆ ಧನುಷ್

ನನಗೆ ರನ್ಯಾ ರಾವ್‌ ಪರಿಚಯವಿರಲಿಲ್ಲ. ದುಬೈನಿಂದ ಬಂದಿಳಿದ್ದ ರನ್ಯಾರನ್ನು ಗ್ರೀನ್‌ ಚಾನೆಲ್‌ ಮೂಲಕ ಕರೆತರಲು ಸಹೋದ್ಯೋಗಿ ಬಸವರಾಜು ಜತೆ ಹೋಗಿದ್ದೆ. ನನಗೆ ಚಿನ್ನ ಕಳ್ಳ ಸಾಗಣೆ ಕುರಿತು ಗೊತ್ತಿರಲಿಲ್ಲ. ನಾನೇ ಅದೇ ಮೊದಲ ಬಾರಿ ಶಿಷ್ಟಾಚಾರ ಕೆಲಸ ಮಾಡಿದ್ದೇನೆ ಎಂದು ವಿಮಾನ ನಿಲ್ದಾಣದ ಗುಪ್ತದಳ ವಿಭಾಗದ ಕಾನ್‌ಸ್ಟೇಬಲ್‌ ಧನುಷ್ ಸಹ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಗೆ ಕಾನೂನು ಬಾಹಿರವಾಗಿ ಶಿಷ್ಟಾಚಾರ ಸೌಲಭ್ಯ ಸಿಕ್ಕಿದ್ದು ಬಯಲಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಕಾನೂನುಬಾಹಿರ ಶಿಷ್ಟಾಚಾರ ಪಡೆದ ಆರೋಪ ಸಂಬಂಧ ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸರ್ಕಾರ ರಚಿಸಿತ್ತು. ಈ ಮಧ್ಯೆ ಅವರ ರನ್ಯಾ ಮನೆ ಮೇಲೆ ಇ.ಡಿ ಕೂಡ ದಾಳಿ ನಡೆಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಜಿಪಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.

ಗೌರವ್ ಗುಪ್ತ ತಂಡಕ್ಕೆ ಕೃಷ್ಣವಂಶಿ ನಿಯೋಜನೆ

ರನ್ಯಾರಾವ್‌ ಅವರಿಗೆ ಕಾನೂನುಬಾಹಿರವಾಗಿ ಶಿಷ್ಟಾಚಾರ ಸೌಲಭ್ಯ ನೀಡಿದ ಪ್ರಕರಣ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡಕ್ಕೆ ಸಿಐಡಿ ಡಿಐಜಿ ಕೃಷ್ಣವಂಶಿ ಅವರನ್ನು ಸರ್ಕಾರ ನೇಮಿಸಿದೆ. ಎಸಿಎಸ್‌ ಗೌರವ ಗುಪ್ತಾ ಅವರಿಗೆ ಡಿಐಜಿ ಸಹಾಯಕ ತನಿಖಾಧಿಕಾರಿಯಾಗಿದ್ದಾರೆ.

ರನ್ಯಾ ರಾವ್‌ ಸಿಕ್ಕಿಬಿದ್ದಿದ್ದೇ ರೋಚಕ

ಮಾರ್ಚ್‌ 3ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿಳಿದ ರನ್ಯಾ ಕಪ್ಪು ಮತ್ತು ಕಂದು ಬಣ್ಣದ ಬ್ಯಾಗನ್ನು ಹೆಗಲ ಮೇಲೆ ಹಾಕಿಕೊಂಡಿದ್ದರು. ಅವರ ಶಿಷ್ಟಾಚಾರ ಅಧಿಕಾರಿ ಬಸವರಾಜ ಟ್ರಾಲಿಯೊಂದನ್ನು ಹಿಡಿದುಕೊಂಡಿದ್ದರು. ಅಧಿಕಾರಿಗಳಿಗೆ ಸಿಕ್ಕ ಸುಳಿವಿನ ಹಿನ್ನಲೆಯಲ್ಲಿ ರನ್ಯಾ ರಾವ್ ಅವರ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ಬ್ಯಾಗ್‌ನಲ್ಲಿ ಏನೂ ಪತ್ತೆಯಾಗಿರಲಿಲ್ಲ. ಬಳಿಕ ಮಹಿಳಾ ಅಧಿಕಾರಿಗಳು ರನ್ಯಾ ರಾವ್​ ಶರೀರದ ಪರಿಶೋಧನೆ ನಡೆಸಿದಾಗ 17 ಚಿನ್ನದ ಬಿಸ್ಕತ್ ಪತ್ತೆಯಾಗಿತ್ತು. ರನ್ಯಾ ರಾವ್ ಅವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದಾಗ ಸಾಕಷ್ಟು ಮಾಹಿತಿಗಳು ಹೊರ ಬಂದವು. ಮಾರ್ಚ್ 4 ರಂದು ರನ್ಯಾ ಹೇಳಿಕೆಯನ್ನು ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದರು. ಈ ವೇಳೆ ರನ್ಯಾ ಯುರೋಪ್, ಆಫ್ರಿಕಾ, ದುಬೈ, ಸೌದಿ ಅರೇಬಿಯಾಗೆ ಪ್ರವಾಸ ಹೋಗಿರುವುದು ಬಹಿರಂಗವಾಗಿದೆ.

ದುಬೈಯಲ್ಲಿ ಅನಾಮಿಕ ವ್ಯಕ್ತಿಯ ಭೇಟಿ

ರನ್ಯಾ ಅವರು ಹೇಳಿಕೆ ನೀಡಿರುವಂತೆ ರನ್ಯಾಗೆ ಮಾರ್ಚ್ 1ರಂದು ಅನಾಮಿಕನಿಂದ ಫೋನ್ ಕರೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಅವರು ದುಬೈಗೆ ತೆರಳುತ್ತಾರೆ. ಅಂದು ಕರೆ ಮಾಡಿದ್ದ ಆ ವ್ಯಕ್ತಿ ದುಬೈ ವಿಮಾನ ನಿಲ್ದಾಣ ಗೇಟ್ ಎ ಟರ್ಮಿನಲ್ 3ರಲ್ಲಿ ಚಿನ್ನದ ಬಿಸ್ಕತ್ ಸಂಗ್ರಹ ಮಾಡಲು ಸೂಚನೆ ನೀಡುತ್ತಾನೆ. ದುಬೈ ಏರ್ ಪೋರ್ಟ್ ನಲ್ಲಿ ರನ್ಯಾ ರಾವ್ ಅವರನ್ನು 6 ಅಡಿ ಉದ್ದದ ಹಾಗೂ ಕಟ್ಟುಮಸ್ತಿನ ವ್ಯಕ್ತಿಯೊಬ್ಬ ಭೇಟಿ ಮಾಡುತ್ತಾನೆ. ಅಲ್ಲಿ ಆಕೆಗೆ ಚಿನ್ನದ ಬಿಸ್ಕತ್‌ ಗಳನ್ನು ನೀಡುತ್ತಾನೆ. ಆದರೆ ಈ ವ್ಯಕ್ತಿ ಯಾರೆಂಬುದು ರನ್ಯಾಗೆ ತಿಳಿದಿಲ್ಲ. ಆತನನ್ನು ಈ ಮೊದಲು ಆತನನ್ನು ಭೇಟಿ ಆಗಲ್ಲ ಎಂದು ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಆಟೋ ರಿಕ್ಷಾದಲ್ಲಿ ಕಾಯುತ್ತಿದ್ದ ರಿಸೀವರ್

ದುಬೈನಿಂದ ಚಿನ್ನ ಸಂಗ್ರಹ ಮಾಡಿದ್ದ ರನ್ಯಾರಾವ್ ಗೆ ಅದನ್ನು ಯಾರ ಬಳಿ ಬೆಂಗಳೂರಿನಲ್ಲಿ ಕೊಡಬೇಕು ಎಂಬ ಸೂಚನೆಯನ್ನೂ ಅನಾಮಿಕ ವ್ಯಕ್ತಿ ನೀಡಿದ್ದ. ಏರ್ ಪೋರ್ಟ್ ಟೋಲ್ ಗೇಟ್ ನಿಂದ ಹೊರಬಂದು ಸರ್ವೀಸ್ ರಸ್ತೆಗೆ ತಲುಪಬೇಕು. ಅಲ್ಲಿಂದ ಟ್ರಾಫಿಕ್ ಸಿಗ್ನಲ್ ಕೊನೆಯಲ್ಲಿ ಒಂದು ಆಟೋ ರಿಕ್ಷಾ ನಿಂತಿರುತ್ತದೆ. ಅಲ್ಲಿ ತಲುಪಿದಾಗ ಆಟೋ ಚಾಲಕ ನಿಮಗೆ ಒಂದು ಸಿಗ್ನಲ್ ಕೊಡುತ್ತಾನೆ. ಆ ಸಿಗ್ನಲ್ ಸಿಕ್ಕ ಬಳಿಕ ತನ್ನಲ್ಲಿದ್ದ ಚಿನ್ನವನ್ನು ಆತನಿಗೆ ಕೊಡಬೇಕು ಎಂಬ ಸೂಚನೆಯನ್ನು ನೀಡಲಾಗಿತ್ತು.

ಮರುಕಳುಹಿಸಿದ ಕೇರಳ ಪ್ರಕರಣದ ನೆನಪು

2020ರಲ್ಲಿ ಕೇರಳದಲ್ಲಿ ನಡೆದ ಚಿನ್ನ ಕಳ್ಳಸಾಗಣಿಕೆ ಪ್ರಕರಣವನ್ನೇ ರನ್ಯಾ ಚಿನ್ನ ಕಳ್ಳಸಾಗಣಿಕೆ ಪ್ರಕರಣ ಹೋಲುತ್ತಿದೆ. 2020ರ ಜುಲೈ 5ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಚೀಲದಲ್ಲಿದ್ದ 30 ಕೆ.ಜಿ. 24 ಕ್ಯಾರಟ್ ಚಿನ್ನವನ್ನು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಅಧಿಕಾರಿಗಳು ಜಪ್ತಿ ಮಾಡಿದ್ದರು. ತಿರುವನಂತಪುರದ ಯುಎಇ ಕಾನ್ಸುಲೇಟ್ ಕಚೇರಿಗೆ ತಲುಪಿಸಬೇಕಾಗಿದ್ದ ಚೀಲದಲ್ಲಿ ಚಿನ್ನವನ್ನು ಇಡಲಾಗಿತ್ತು. ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ, ಕೇರಳ ಸರ್ಕಾರದ ಸಂಸ್ಥೆಯೊಂದರಲ್ಲಿ ಗುತ್ತಿಗೆ ಆಧಾರದ ಹುದ್ದೆಯಲ್ಲಿದ್ದ ಸ್ವಪ್ನಾ ಸುರೇಶ್ ಎಂಬುವವರು ಪ್ರಕರಣದ ಆರೋಪಿಯಾಗಿದ್ದರು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಿತ್ತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ. ಶಿವಶಂಕರ್ ಅವರಿಗೆ ಆರೋಪಿ ಸ್ವಪ್ನಾ ಸುರೇಶ್ ಅವರೊಂದಿಗೆ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಹಾಗಾಗಿ ಅವರನ್ನು ಆ ಹುದ್ದೆಯಿಂದ ತೆರವು ಮಾಡಲಾಗಿತ್ತಲ್ಲದೇ ಸೇವೆಯಿಂದ ಅಮಾನತು ಮಾಡಲಾಗಿತ್ತು. ಮುಖ್ಯಮಂತ್ರಿ ವಿಜಯನ್ ಅವರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಇದುವರೆಗೆ ಡಿಆರ್‌ ಐ ಜಪ್ತಿ ಮಾಡಿದ ಕಳ್ಳಸಾಗಣಿಕೆಯ ಚಿನ್ನಾಭರಣ

2021 -2022834kg

2022 -2023

1,452kg
2023 - 20241319kg

2024- 2025 ( ಮಾರ್ಚ್‌ವರೆಗೆ )

413kg

ವಿದೇಶದಿಂದ ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು 50 ಸಾವಿರ ರೂ ಮೌಲ್ಯದ ಹಾಗೂ ಮಹಿಳಾ ಪ್ರಯಾಣಿಕರು 1 ಲಕ್ಷ ರೂ ಮೌಲ್ಯದ ಯಾವುದೇ ತೆರಿಗೆ ಪಾವತಿಸದೆ ಚಿನ್ನ ತರಲು ಕಾನೂನು ಅವಕಾಶ ನೀಡಿದೆ.

Read More
Next Story