ಚಿಕ್ಕಮಗಳೂರಿನಲ್ಲಿ ಕೆಎಫ್‌ಡಿ ಆತಂಕ: 7 ಜನರಿಗೆ ಮಂಗನ ಕಾಯಿಲೆ ದೃಢ
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಎನ್ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಮಲೆನಾಡು ಭಾಗ ಚಿಕ್ಕಮಗಳೂರಿನಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಭೀತಿ ಎದುರಾಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಕೆಎಫ್‌ಡಿ ಕಾಣಿಸಿಕೊಂಡಿತ್ತು. ಆ ಬಳಿಕ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನಗೆ ಮಂಗನಕಾಯಿಲೆ ಸೋಂಕು ತಗುಲಿದೆ.
ಎನ್ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲೇ ಮೂರು ಜನರಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ವಾರ್ಡ್ ತೆರೆಯಲಾಗಿದೆ. ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕೆಎಫ್‌ಡಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗುವ ಮುನ್ನವೇ ಅರೋಗ್ಯ ಇಲಾಖೆ ಕೆಎಫ್‌ಡಿ ಅಲರ್ಟ್ ಘೋಷಣೆ ಮಾಡಿದೆ. ಮಂಗನ ಕಾಯಿಲೆ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದ್ದು, ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಎನ್ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಮಲೆನಾಡು ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಸೋಂಕು ವ್ಯಾಪಿಸುತ್ತಿದೆ. ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆ ಒಂದರಲ್ಲೇ 132 ಜನರಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ ನಾಲ್ವರು ಮೃತಪಟ್ಟಿದ್ದರು.
ಏನಿದು ಮಂಗನ ಕಾಯಿಲೆ?
ಕಾಡಿನಲ್ಲಿರುವ ಉಣುಗುಗಳ ಮೂಲಕ ಹರಡುವ 'ಮಂಗನ ಕಾಯಿಲೆ'ಯ ವೈದ್ಯಕೀಯ ಹೆಸರು ಕ್ಯಾಸನೂರು ಫಾರೆಸ್ಟ್ ಡಿಸೀಸ್. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಕಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಈ ಕಾಯಿಲೆಗೆ ಕಾರಣವಾದ ವೈರಾಣು ಗುರುತಿಸಿದ್ದರಿಂದ ಇದಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (Kyasanur Forest Disease) ಎಂಬ ಹೆಸರನ್ನು ಇಡಲಾಗಿದೆ.
ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈ ಕಾಯಿಲೆ ಬಳಿಕ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ಕಂಡು ಬಂದವು. 2012-13ರಲ್ಲಿ ನೆರೆರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಈ ಕಾಯಿಲೆಗಳು ಕಂಡು ಬಂದವು.
ಮಂಗನಕಾಯಿಲೆಯ ಲಕ್ಷಣಗಳು
• ಕೆಂಪು ಚಿಗಟದಿಂದ ಆವರಿಸಿಕೊಳ್ಳುವ ಈ ಕಾಯಿಲೆಯ ಮೊದಲ ಲಕ್ಷಣವೇ ತೀವ್ರ ಜ್ವರ. ಒಂದು ಬಾರಿ ವೈರಸ್ ದೇಹವನ್ನು ಸೇರಿದರೆ ಸತತ 10 ರಿಂದ 12 ದಿನಗಳವರೆಗೆ ಜ್ವರ ಕಾಡುತ್ತದೆ.
• ಇದರ ಜೊತೆಗೆ ತಲೆನೋವು, ಕೆಮ್ಮು, ವಾಂತಿ, ಅತಿಸಾರ ಕಾಣಿಸಿಕೊಳ್ಳುತ್ತದೆ. ಜ್ವರ ಹೆಚ್ಚಾದಂತೆ ದೇಹದಲ್ಲಿ ಅತಿಯಾದ ನಡುಕ, ತಲೆಸುತ್ತುವಿಕೆ, ಮಾನಸಿಕ ಅಸ್ವಸ್ಥೆಯೂ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ.
• ಇದ್ದಕ್ಕಿದ್ದಂತೆ ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ. ದೇಹದ ತಾಪಮಾನ ಒಂದೇ ಸಲಕ್ಕೆ ಏರುವುದನ್ನು ಗಮನಿಸಬಹುದಾಗಿದೆ.
• ಇನ್ನು ಎರಡನೆಯದಾಗಿ ತೀವ್ರವಾದ ತಲೆನೋವು. ಹಣೆ, ತಲೆಯ ಹಿಂಭಾಗದಲ್ಲಿ ಸಹಿಸಲಾರದಷ್ಟು ತಲೆನೋವು ಕಾಣಿಸಿಕೊಳ್ಳುತ್ತದೆ.
• ಮೂಗಿನ ಹೊಳ್ಳೆಗಳಲ್ಲಿ ಸಣ್ಣದಾಗಿ ರಕ್ತಸ್ರಾವ, ಗಂಟಲು ಮತ್ತು ವಸಡುಗಳಲ್ಲಿ ರಕ್ತ ಜಿನುಗುವಿಕೆ ಜೊತೆಗೆ ಮಲವಿಸರ್ಜನೆಯಲ್ಲಿಯೂ ರಕ್ತಸ್ರಾವವಾಗುವುದನ್ನು ಕಾಣಬಹುದಾಗಿದೆ.
• ಇಷ್ಟಕ್ಕೇ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ನಂತರದ ದಿನಗಳಲ್ಲಿ ಜ್ವರ ಮುಂದುವರೆಯುತ್ತದೆ. ಅದರೊಂದಿಗೆ ವಾಂತಿ, ಸ್ನಾಯುಗಳಲ್ಲಿ ನೋವು, ನಡುಕ, ಮಾನಸಿಕ ಹಿಂಸೆ, ಪ್ರತಿ ವರ್ತನೆ ನೀಡದಷ್ಟು ಮಾನಸಿಕ ಅಸ್ವಸ್ಥತೆಗಳು ಕಾಡುವ ಸಾಧ್ಯತೆಗಳಿವೆ.
ಮುನ್ನೆಚ್ಚರಿಕೆ ಕ್ರಮ
• ಮಂಗನ ಕಾಯಿಲೆ ಹೆಚ್ಚು ಕಾಡಿಗೆ ಹೋಗುವವರಲ್ಲಿ, ಕಾಡಿನ ಹತ್ತಿರ ಮನೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸರ್ಕಾರ ವಿತರಿಸುವ ಡೆಪಾ ಆಯಿಲ್ ಮೈಕೈಗೆ ಹಚ್ಚಿಕೊಂಡು ಕಾಡಿಗೆ ಹೋಗುವುದರಿಂದ ಉಣುಗು ಕಚ್ಚದಂತೆ ಪಾರಾಗಬಹುದು.
• ಇನ್ನು ಬೆಚ್ಚನೆಯ ಮತ್ತು ಇಡೀ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ಧರಿಸುವುದು. ಜೊತೆಗೆ ಯಾವುದೇ ಪ್ರಾಣಿಗಳನ್ನು ಮುಟ್ಟಿದ ನಂತರ ಸರಿಯಾಗಿ ಕೈಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಪ್ರಾಣಿಗಳಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆದಷ್ಟು ಜಾಗೃತರಾಗಿದ್ದರೆ ಒಳ್ಳೆಯದು.
ಚಿಕಿತ್ಸಾ ಕ್ರಮಗಳೇನು
• ಮಂಗನ ಕಾಯಿಲೆಗೆ ಎಂದೇ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹೀಗಾಗಿ ಈಗಾಗಲೇ ಸರ್ಕಾರ ನಿಗದಿಪಡಿಸಿ ನೀಡುತ್ತಿರುವ ಚುಚ್ಚುಮದ್ದುಗಳನ್ನು ಪಡೆಯಬೇಕು. ಅದು ಕೊರೋನಾ ಲಸಿಕೆಯಂತೆಯೇ, ರೋಗ ತಡೆಗೆ ದೇಹವನ್ನು ಸಿದ್ಧಗೊಳಿಸುತ್ತದೆ.
• ಒಂದು ವೇಳೆ ವೈರಸ್ ದೇಹ ಹೊಕ್ಕಿದರೆ ಮೊದಲು ಮಾಡಬೇಕಾದ ಕೆಲಸವೇ ವೈದ್ಯರ ಭೇಟಿ. ನಂತರ ಚೆನ್ನಾಗಿ ವಿಶ್ರಾಂತಿ ಪಡೆಯಬೇಕು. ತೀವ್ರವಾದ ಜ್ವರ ಇರುವ ಕಾರಣ ದೇಹ ಹೆಚ್ಚು ಸುಸ್ತಾಗಿರುತ್ತದೆ. ಹೀಗಾಗಿ ವಿಶ್ರಾಂತಿ ಪಡೆಯಬೇಕು.
• ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಹಣ್ಣು ತರಕಾರಿಗಳ ಜೊತೆಗೆ ಬಿಸಿ ಪದಾರ್ಥಗಳನ್ನು ಆದಷ್ಟು ಸೇವಿಸಿದರೆ ಒಳಿತು.
• ಸೊಳ್ಳೆ, ನೊಣಗಳಿಂದ ದೂರವಿರುವುದು ಉತ್ತಮ. ಅದಕ್ಕಾಗಿ ಇಡೀ ದೇಹ ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ. ಸ್ವಚ್ಛತೆ ಮೊದಲ ಆದ್ಯತೆಯಾಗಿರಲಿ.