
ಸಿಎಂ ಬಜೆಟ್ ಮಂಡನೆ ವೇಳೆ ಒಳ ಮೀಸಲಾತಿ ಕೂಗು: 7 ಮಂದಿ ಬಂಧನ
ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಗ್ಯಾಲರಿಯಲ್ಲಿದ್ದ 7 ಮಂದಿ ಹೊರನಡೆಯುವಾಗ ಘೋಷಣೆ ಕೂಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವ ವೇಳೆ ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ "ಸದಾಶಿವ ಆಯೋಗದ ವರದಿ ಜಾರಿ ಮಾಡಿ, ಒಳ ಮೀಸಲಾತಿ ಜಾರಿ ಮಾಡಿ" ಎಂದು ಘೋಷಣೆ ಕೂಗಿದ ಏಳು ಮಂದಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬೆಳಿಗ್ಗೆ 11.30ರ ಸುಮಾರಿಗೆ ಒಳ ಮೀಸಲಾತಿ ಹೋರಾಟಗಾರರು ಎಂದು ಹೇಳಲಾದ ಏಳು ಮಂದಿ ಸದನದ ನಿಯಮಾವಳಿಗೆ ವಿರುದ್ಧವಾಗಿ ವರ್ತಿಸಿದ ಏಳುಮಂದಿಯನ್ನು ಮಾರ್ಷಲ್ ಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಗ್ಯಾಲರಿಯಲ್ಲಿದ್ದ 7 ಮಂದಿ ಹೊರನಡೆಯುವಾಗ ಘೋಷಣೆ ಕೂಗಿದ್ದಾರೆ. ಕೂಡಲೇ ಮಾರ್ಷಲ್ಸ್ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಶ್ನಿಸಿದಾಗ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವು ಕೇಳಿಬಂದಿದೆ.
ಬಂಧಿತರನ್ನು ಎ ವಿಜಯಕುಮಾರ್, ಎಸ್ ವಿ ಸುರೇಶ್, ವೇಣುಗೋಪಾಲ್ ಎನ್., ವಿಜಯಶೇಖರ್.ಎಸ್.ಎಸ್, ಶ್ರೀನಿವಾಸ್ ಎಸ್ ಬಿ, ಸತ್ಯೇಂದ್ರಕುಮಾರ್, ಎಂ ರಾಜರತ್ನಂ ಎಂದು ಗುರುತಿಸಲಾಗಿದೆ. ಬಂಧಿತರು ಬೆಂಗಳೂರು ಹಾಗೂ ಆನೇಕಲ್ ತಾಲೂಕಿನವರಾಗಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸದನದ ನಿಯಮಾವಳಿ ಉಲ್ಲಂಘನೆ ಮಾಡಿ, ಕರ್ತವ್ಯದಲ್ಲಿದ್ದ ಮಾರ್ಷಲ್ಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಸದನದಲ್ಲಿ ಶಾಂತಿಭಂಗ ಉಂಟು ಮಾಡಿದ ಆರೋಪದ ಮೇಲೆ ಬಿ ಎನ್ ಎಸ್ ಸೆಕ್ಷನ್ 173 ರಡಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.