
ಚಂಡೀಗಢ ಮೂಲದ ನಂದಿನಿ ಶರ್ಮಾ ಅವರ ಈ ಸಾಧನೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹುದು.
WPL 2026: ಸೋಲಿನಲ್ಲೂ ಗೆದ್ದ ನಂದಿನಿ ಶರ್ಮಾ; ಹ್ಯಾಟ್ರಿಕ್ ಜತೆಗೆ 5 ವಿಕೆಟ್ ಕಿತ್ತು ಚರಿತ್ರೆ ಸೃಷ್ಟಿ
ನಂದಿನಿ ಶರ್ಮಾ ಅವರ ಐತಿಹಾಸಿಕ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುಜರಾತ್ ನೀಡಿದ ಗುರಿ ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ, ಕೇವಲ 4 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.
ಕ್ರಿಕೆಟ್ ಎಂದರೆ ಹಾಗೇ, ಕೆಲವೊಮ್ಮೆ ತಂಡದ ಸೋಲಿನ ನಡುವೆಯೂ ವ್ಯಕ್ತಿಯೊಬ್ಬರ ಅದ್ಭುತ ಪ್ರದರ್ಶನ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ವೇಗಿ ನಂದಿನಿ ಶರ್ಮಾ ಅಂತಹದ್ದೇ ಅಪರೂಪದ ಸಾಧನೆ ಮಾಡಿದ್ದಾರೆ. ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಮತ್ತು ಒಟ್ಟು 5 ವಿಕೆಟ್ ಗೊಂಚಲು ಪಡೆಯುವ ಮೂಲಕ ಟೂರ್ನಿಯ ಇತಿಹಾಸದಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಮುಂಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದ ಕೊನೆಯ ಹಂತದಲ್ಲಿ, 24 ವರ್ಷದ ನಂದಿನಿ ಶರ್ಮಾ ತಮ್ಮ ಬೌಲಿಂಗ್ ಜಾದು ಪ್ರದರ್ಶಿಸಿದರು. ಗುಜರಾತ್ ಜಯಂಟ್ಸ್ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ದಾಳಿಗಿಳಿದ ನಂದಿನಿ, ಸತತ ಎಸೆತಗಳಲ್ಲಿ ಕನಿಕಾ ಅಹುಜಾ, ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಈ ಮೂಲಕ ತಮ್ಮ ವೃತ್ತಿಜೀವನದ ಹಾಗೂ ಟೂರ್ನಿಯ ಸ್ಮರಣೀಯ ಹ್ಯಾಟ್ರಿಕ್ ಸಾಧನೆ ಮಾಡಿದರು.
ಇತಿಹಾಸ ನಿರ್ಮಿಸಿದ 'ಅನ್‌ಕ್ಯಾಪ್ಡ್' ತಾರೆ
ಚಂಡೀಗಢ ಮೂಲದ ನಂದಿನಿ ಶರ್ಮಾ ಅವರ ಈ ಸಾಧನೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹುದು. ಏಕೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಪದಾರ್ಪಣೆ ಮಾಡದ (Uncapped) ಆಟಗಾರ್ತಿಯೊಬ್ಬರು ಡಬ್ಲ್ಯುಪಿಎಲ್‌ನಲ್ಲಿ 5 ವಿಕೆಟ್‌ಗಳ ಸಾಧನೆ ಮಾಡಿರುವುದು ಇದೇ ಮೊದಲು. ಈ ಹಿಂದೆ ಇಸ್ಸಿ ವಾಂಗ್ (2023), ದೀಪ್ತಿ ಶರ್ಮಾ (2024) ಮತ್ತು ಗ್ರೇಸ್ ಹ್ಯಾರಿಸ್ (2025) ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದೀಗ 2026ರಲ್ಲಿ ನಂದಿನಿ ಈ ಎಲೈಟ್ ಪಟ್ಟಿಗೆ ಸೇರಿದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
4 ರನ್‌ಗಳ ರೋಚಕ ಸೋಲು
ನಂದಿನಿ ಶರ್ಮಾ ಅವರ ಐತಿಹಾಸಿಕ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುಜರಾತ್ ನೀಡಿದ ಗುರಿ ಬೆನ್ನಟ್ಟುವಲ್ಲಿ ಎಡವಿದ ಡೆಲ್ಲಿ, ಕೇವಲ 4 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಆದರೂ, ತಂಡದ ನಾಯಕಿ ಜೆಮಿಮಾ ರೊಡ್ರಿಗಸ್ ಮೈದಾನದಲ್ಲೇ ನಂದಿನಿ ಅವರನ್ನು ಅಪ್ಪಿಕೊಂಡು, ಅವರ ಹೋರಾಟ ಮನೋಭಾವವನ್ನು ಶ್ಲಾಘಿಸಿದರು.
ಈ ಪ್ರದರ್ಶನದ ಮೂಲಕ ನಂದಿನಿ ಶರ್ಮಾ ಭಾರತೀಯ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ. ಕೇವಲ 24 ವರ್ಷ ವಯಸ್ಸಿನ ಈ ಯುವತಿಯ ನಿಖರತೆ ಮತ್ತು ಒತ್ತಡ ನಿಭಾಯಿಸುವ ಕಲೆ, ಭವಿಷ್ಯದ ಟೀಮ್ ಇಂಡಿಯಾಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ.

