ಸ್ಲ್ಯಾಪ್‌ಗೇಟ್ ವಿವಾದ: 17 ವರ್ಷಗಳ ನಂತರ ಹರ್ಭಜನ್-ಶ್ರೀಶಾಂತ್ ಕಪಾಳಮೋಕ್ಷದ ವಿಡಿಯೋ ಬಹಿರಂಗ!
x

'ಸ್ಲ್ಯಾಪ್‌ಗೇಟ್' ವಿವಾದ: 17 ವರ್ಷಗಳ ನಂತರ ಹರ್ಭಜನ್-ಶ್ರೀಶಾಂತ್ ಕಪಾಳಮೋಕ್ಷದ ವಿಡಿಯೋ ಬಹಿರಂಗ!

ಮಾಜಿ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಅವರೊಂದಿಗಿನ 'ಬಿಯಾಂಡ್23 ಕ್ರಿಕೆಟ್ ಪಾಡ್‌ಕ್ಯಾಸ್ಟ್'ನಲ್ಲಿ ಮಾತನಾಡಿದ ಲಲಿತ್ ಮೋದಿ, ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


ಐಪಿಎಲ್ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ 'ಸ್ಲ್ಯಾಪ್‌ಗೇಟ್' ವಿವಾದದ, ಈವರೆಗೂ ಯಾರೂ ನೋಡಿರದ ವಿಡಿಯೋವನ್ನು ಬರೋಬ್ಬರಿ 17 ವರ್ಷಗಳ ನಂತರ ಐಪಿಎಲ್‌ನ ಮಾಜಿ ಕಮಿಷನರ್ ಲಲಿತ್ ಮೋದಿ ಇದೀಗ ಬಹಿರಂಗಪಡಿಸಿದ್ದಾರೆ. 2008ರ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ, ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಸಹ ಆಟಗಾರ ಎಸ್. ಶ್ರೀಶಾಂತ್ ಅವರ ಕೆನ್ನೆಗೆ ಬಾರಿಸಿದ್ದರು. ಈ ಘಟನೆಯು 'ಸ್ಲ್ಯಾಪ್‌ಗೇಟ್' ಎಂದೇ ಕುಖ್ಯಾತಿ ಪಡೆದಿತ್ತು.


ಮಾಜಿ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಅವರೊಂದಿಗಿನ 'ಬಿಯಾಂಡ್23 ಕ್ರಿಕೆಟ್ ಪಾಡ್‌ಕ್ಯಾಸ್ಟ್'ನಲ್ಲಿ ಮಾತನಾಡಿದ ಲಲಿತ್ ಮೋದಿ, ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನಾನು ಇಷ್ಟು ದಿನ ಈ ವಿಡಿಯೋವನ್ನು ಬಹಿರಂಗ ಮಾಡಿರಲಿಲ್ಲ. ಈ ಘಟನೆ ನಡೆದು 18 ವರ್ಷಗಳಾಗಿವೆ" ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಡಿಯೋದಲ್ಲೇನಿದೆ?

ಲಲಿತ್ ಮೋದಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪಂದ್ಯ ಮುಗಿದ ನಂತರ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ XI ಪಂಜಾಬ್ ತಂಡದ ಆಟಗಾರರು ಹಸ್ತಲಾಘವ ಮಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ, ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಅವರ ಕೆನ್ನೆಗೆ ಬಲವಾಗಿ ಹೊಡೆಯುತ್ತಾರೆ. ಇದರಿಂದ ಆಘಾತಕ್ಕೊಳಗಾದ ಶ್ರೀಶಾಂತ್, ಹರ್ಭಜನ್ ಕಡೆಗೆ ಹೋಗಲು ಪ್ರಯತ್ನಿಸುತ್ತಾರೆ. ಆದರೆ, ಅವರ ತಂಡದ ಸಹ ಆಟಗಾರ, ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರನ್ನು ತಡೆಯುತ್ತಾರೆ. ಮತ್ತೊಂದೆಡೆ, ಭದ್ರತಾ ಸಿಬ್ಬಂದಿಯೊಬ್ಬರು ಹರ್ಭಜನ್ ಅವರನ್ನು ನಿಯಂತ್ರಿಸುತ್ತಾರೆ. ನಂತರ, ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರು ಹಾಕುತ್ತಿರುವುದು ಮತ್ತು ಅವರ ತಂಡದ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸೇರಿದಂತೆ ಇತರರು ಅವರನ್ನು ಸಮಾಧಾನಪಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಲಲಿತ್ ಮೋದಿ ಹೇಳಿದ್ದೇನು?

"ಭಜ್ಜಿ ನನಗೆ ಆತ್ಮೀಯ ಸ್ನೇಹಿತ. ಆತ ನನಗೆ ಇಷ್ಟ. ಆ ಘಟನೆ ಮೈದಾನದಲ್ಲಿಯೇ ನಡೆಯಿತು, ನಾನೂ ಅಲ್ಲಿದ್ದೆ. ಪಂದ್ಯ ಮುಗಿದಿತ್ತು, ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ಆದರೆ, ನನ್ನ ಭದ್ರತಾ ಕ್ಯಾಮೆರಾಗಳಲ್ಲಿ ಒಂದು ಆನ್ ಆಗಿತ್ತು. ಆಟಗಾರರು ಹಸ್ತಲಾಘವ ಮಾಡುತ್ತಿದ್ದಾಗ, ಶ್ರೀಶಾಂತ್ ಮತ್ತು ಭಜ್ಜಿ ಸರದಿ ಬಂದಾಗ, ಹರ್ಭಜನ್ 'ಇಲ್ಲಿ ಬಾ' ಎಂದು ಕರೆದು ಕಪಾಳಕ್ಕೆ ಹೊಡೆದರು" ಎಂದು ಮೋದಿ ಘಟನೆಯನ್ನು ವಿವರಿಸಿದ್ದಾರೆ.

ಹರ್ಭಜನ್ ಕ್ಷಮೆಯಾಚನೆ

ಈ ಘಟನೆಯ ನಂತರ ಹರ್ಭಜನ್ ಸಿಂಗ್ ಹಲವು ಬಾರಿ ಸಾರ್ವಜನಿಕವಾಗಿ ಶ್ರೀಶಾಂತ್ ಅವರಲ್ಲಿ ಕ್ಷಮೆ ಕೋರಿದ್ದಾರೆ. ಇತ್ತೀಚೆಗೆ, ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ಹರ್ಭಜನ್, "ನನ್ನ ಜೀವನದಲ್ಲಿ ನಾನು ಬದಲಾಯಿಸಲು ಬಯಸುವ ಒಂದು ವಿಷಯವಿದ್ದರೆ, ಅದು ಶ್ರೀಶಾಂತ್ ಜೊತೆಗಿನ ಆ ಘಟನೆ. ಅದು ತಪ್ಪಾಗಿತ್ತು ಮತ್ತು ನಾನು ಹಾಗೆ ಮಾಡಬಾರದಿತ್ತು. ನಾನು 200 ಬಾರಿ ಕ್ಷಮೆ ಕೇಳಿದ್ದೇನೆ" ಎಂದು ಹೇಳಿಕೊಂಡಿದ್ದರು.

"ಆ ಘಟನೆ ನಡೆದು ಹಲವು ವರ್ಷಗಳ ನಂತರ, ನಾನು ಶ್ರೀಶಾಂತ್ ಅವರ ಮಗಳನ್ನು ಭೇಟಿಯಾದಾಗ, 'ನಾನು ನಿನ್ನೊಂದಿಗೆ ಮಾತನಾಡುವುದಿಲ್ಲ, ನೀನು ನನ್ನ ತಂದೆಗೆ ಹೊಡೆದಿದ್ದೀಯ' ಎಂದು ಅವಳು ಹೇಳಿದ್ದು ನನಗೆ ಬಹಳ ನೋವುಂಟು ಮಾಡಿತು. ನನ್ನ ಹೃದಯ ಒಡೆದುಹೋಯಿತು. ಅವಳ ಮನಸ್ಸಿನಲ್ಲಿ ನಾನು ಕೆಟ್ಟವನಾಗಿ ಉಳಿದುಕೊಂಡಿದ್ದೇನೆ ಎಂದು ನನಗೆ ಅನಿಸಿತು. ಅದಕ್ಕಾಗಿ ನಾನು ಇಂದಿಗೂ ಆ ಮಗುವಿನಲ್ಲಿ ಕ್ಷಮೆ ಕೋರುತ್ತೇನೆ" ಎಂದು ಹರ್ಭಜನ್ ಭಾವನಾತ್ಮಕವಾಗಿ ನುಡಿದಿದ್ದರು.

Read More
Next Story