Tamim Iqbal: ಆಡುತ್ತಿದ್ದಾಗಲೇ ಬಾಂಗ್ಲಾದೇಶ ಕ್ರಿಕೆಟಿಗನಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
x

Tamim Iqbal: ಆಡುತ್ತಿದ್ದಾಗಲೇ ಬಾಂಗ್ಲಾದೇಶ ಕ್ರಿಕೆಟಿಗನಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಹಾಗೂ ಶೈನ್‌ಪುಕುರ್‌ ಕ್ರಿಕೆಟ್‌ ಕ್ಲಬ್‌ ನಡುವಣ ಪಂದ್ಯದ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಮಿಮ್‌ ಇಕ್ಬಾಲ್‌ ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.


ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮಾಜಿ ನಾಯಕ ತಮಿಮ್‌ ಇಕ್ಬಾಲ್‌ (Tamim Iqbal) ಕ್ರಿಕೆಟ್ ಆಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಢಾಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾರ್ಚ್‌ 24ರಂದು ಸವಾರ್‌ನ ಬಾಂಗ್ಲಾದೇಶ ಕ್ರಿರಾ ಶಿಖಾ ಪ್ರೊಟಿಸ್ತಾನ್‌ ಮೂರನೇ ಮೈದಾನದಲ್ಲಿ ಮೊಹಮೆಡನ್‌ ಸ್ಪೋರ್ಟಿಂಗ್‌ ಕ್ಲಬ್‌ ಹಾಗೂ ಶೈನ್‌ಪುಕುರ್‌ ಕ್ರಿಕೆಟ್‌ ಕ್ಲಬ್‌ ನಡುವಣ ಪಂದ್ಯದ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಮಿಮ್‌ ಇಕ್ಬಾಲ್‌ ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ತಮಿಮ್‌ ಇಕ್ಬಾಲ್‌ ಶೈನ್‌ಪುಕುರ್‌ ತಂಡದ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ವೇಳೆ ತಮಿಮ್‌ ಇಕ್ಬಾಲ್‌ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಈ ವೇಳೆ ತಕ್ಷಣ ವೈದ್ಯಕೀಯ ತಂಡ ಅಂಗಣಕ್ಕೆ ಪ್ರವೇಶ ಮಾಡಿ ಆಟಗಾರನಿಗೆ ತುರ್ತು ಚಿಕಿತ್ಸೆ ನೀಡಿ, ನಂತರ ಹೆಲಿಕಾಪ್ಟರ್‌ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಸಾಧ್ಯವಾಗದೇ ಸ್ಥಳೀಯ ಕೆಪಿಜೆ ವಿಶೇಷ ಆಸ್ಪತ್ರೆಗೆ ದಾಖಲಿಸಲಾಯಿತು.

" ತಮಿಮ್‌ ಇಕ್ಬಾಲ್‌ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಹಾಗೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಲಿಕಾಪ್ಟರ್‌ ಮೂಲಕ ಢಾಕಾಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ," ಎಂದು ಮೊಹಮೆಡಿನ್‌ ಕ್ಲಬ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.

ಢಾಕಾ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ ತಮಿಮ್‌

ಪ್ರಸ್ತುತ ನಡೆಯುತ್ತಿರುವ ಢಾಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮಿಮ್‌ ಇಕ್ಬಾಲ್‌ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಅವರು ಸದ್ಯ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಲ್ಲಿಯತನಕ ಆಡಿದ 7 ಪಂದ್ಯಗಳಿಂದ 73.60 ರ ಸರಾಸರಿ ಹಾಗೂ 102.50ರ ಸ್ಟ್ರೈಕ್‌ ರೇಟ್‌ನಲ್ಲಿ ಎರಡು ಶತಕಗಳು ಸೇರಿದಂತೆ 368 ರನ್‌ಗಳನ್ನು ಬಾರಿಸಿದ್ದಾರೆ.

ತಮಿಮ್‌ ಇಕ್ಬಾಲ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎರಡೆರಡು ಬಾರಿ ವಿದಾಯ ಹೇಳಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವಕಾಶ ಪಡೆದಿರಲಿಲ್ಲ.

Read More
Next Story