
ಸಚಿವೆ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ: ಸಿಟಿ ರವಿಗೆ ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್
ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಅವರು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರಾದರೂ, ಅಲ್ಲಿ ವಜಾಗೊಂಡಿತ್ತು. ಹೀಗಾಗಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ. ರವಿ ಅವರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಪರಿಹಾರ ದೊರಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ವಿಧಾನಸಭೆ ಕಲಾಪದ ವೇಲೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದ ಆರೋಪದ ಮೇಲೆ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಅವರು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರಾದರೂ, ಅಲ್ಲಿ ವಜಾಗೊಂಡಿತ್ತು. ಹೀಗಾಗಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇ 19ರಂದು (ಸೋಮವಾಋ) ಸಿ.ಟಿ. ರವಿಯವರ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಎರಡೂ ಕಡೆಗಳಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ಕರ್ನಾಟಕದ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಈ ಪ್ರಕರಣದ ವಿಚಾರಣೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸಿ.ಟಿ. ರವಿ ಪರ ವಾದ ಮಂಡಿಸಿದ ವಕೀಲರು, 2024ರ ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಕಲಾಪದಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಈ ಆರೋಪವಿದೆ ಎಂದು ತಿಳಿಸಿದರು. ಶಾಸಕರು ಅಥವಾ ಸಂಸದರು ಕಲಾಪದ ವೇಳೆ ನೀಡುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಇರುವ ಸಾಂವಿಧಾನಿಕ ಸವಲತ್ತುಗಳು ಮತ್ತು ರಕ್ಷಣಾ ನಿಯಮಗಳ (ಸಂವಿಧಾನದ ಪರಿಚ್ಛೇದ 105, 122, 194 ಮತ್ತು ಸಿಪಿಸಿ ಸೆಕ್ಷನ್ 135A(S) ನಿಯಮಗಳನ್ನು ಉಲ್ಲೇಖಿಸಿ) ಅಡಿಯಲ್ಲಿ ರವಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ವಾದಿಸಿದರು. ಈ ವಾದವನ್ನು ಆಲಿಸಿದ ನ್ಯಾಯಪೀಠ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಕೀಲರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ತಡೆ ನೀಡಿದೆ.