ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾ
x

ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾ

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 43 ಓವರ್‌ಗಳಲ್ಲಿ ಗೆಲುವಿನ ದಡ ಸೇರಿ, ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು.


ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನವೆಂಬರ್‌ 19ರಂದು ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿತು. ಈ ಸೋಲಿಗೆ ಬ್ಯಾಟಿಂಗ್‌ ವಿಭಾಗದ ವೈಫಲ್ಯವೇ ಕಾರಣ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.

ಬಲಿಷ್ಠ ಭಾರತ ತಂಡವು ಫೈನಲ್ ಪಂದ್ಯದಲ್ಲಿ ಕೇವಲ 240 ರನ್‌ಗಳ ಕಡಿಮೆ ಮೊತ್ತಕ್ಕೆ ಆಲೌಟ್ ಆಯಿತು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 43 ಓವರ್‌ಗಳಲ್ಲಿ ಗೆಲುವಿನ ದಡ ಸೇರಿ, ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು.

ವಿಶ್ವಕಪ್‌ ಸರಣಿಯುದ್ದಕ್ಕೂ ಗೆಲುವಿನ ಹಾದಿಯಲ್ಲಿದ್ದ ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿರುವ ಬಗ್ಗೆ ಮಾತನಾಡಿದ ರೋಹಿತ್‌, ʼʼಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವಿಭಾಗ ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಾಗಿ ನಾವು ಸೋಲು ಕಾಣಬೇಕಾಯಿತು. ಆದರೆ ನಾನು ನಮ್ಮ ತಂಡದ ಬಗ್ಗೆ ಹೆಮ್ಮೆಪಡುತ್ತೇನೆ, ಏಕೆಂದರೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದೇವೆʼʼ ಎಂದು ಹೇಳಿದರು.

“ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ಸ್ಥಿರವಾಗಿ ನಿಂತು ಬ್ಯಾಟಿಂಗ್ ಮಾಡುವಾಗ ತಂಡದ ಮೊತ್ತ 280ರ ಗಡಿ ದಾಟುತ್ತದೆ ಎಂದು ಭಾವಿಸಿದ್ದೆವು. ಇಬ್ಬರು ಜೊತೆಯಾಟ ಚೆನ್ನಾಗಿ ಆಡಿದರು. ಆದರೆ ಆ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಂಡೆವುʼʼ ಎಂದು ರೋಹಿತ್ ಹೇಳಿದರು.

ಭಾರತ ತಂಡ ನೀಡಿದ್ದ 241 ರನ್‌ಗಳ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, 47 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಟ್ರಾವಿಸ್‌ ಹೆಡ್‌ (137 ರನ್‌) ಹಾಗೂ ಮಾರ್ನಸ್‌ ಲಾಬುಶೇನ್‌ (58*) ಅವರ 192 ರನ್‌ಗಳ ಜೊತೆಯಾಟದ ಬಲದಿಂದ ಆಸೀಸ್‌, 43 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 241 ರನ್‌ ಗಳಿಸಿ ಗೆಲುವಿನ ದಡ ಸೇರಿತು.

ಒಂದು ಹಂತದಲ್ಲಿ 47 ರನ್‌ಗಳಿಂದ 3 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ಟ್ರಾವಿಸ್‌ ಹೆಡ್‌ ಹಾಗೂ ಮಾರ್ನಸ್‌ ಲಾಬುಶೇನ್‌ 192 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಟ್ರಾವಿಸ್‌ ಹೆಡ್‌, 120 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ ಹಾಗೂ 15 ಬೌಂಡರಿ ಸಿಡಿಸಿ 137 ರನ್‌ಗಳೊಂದಿಗೆ ವಿಶ್ವಕಪ್‌ ಫೈನಲ್‌ನಲ್ಲಿ ಶತಕ ಸಿಡಿಸಿದರು. ಇನ್ನು ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ಮಾರ್ನಸ್‌ ಲಾಬುಶೇನ್, 110 ಎಸೆತಗಳಲ್ಲಿ ಅಜೇಯ 58 ರನ್‌ ಗಳಿಸಿ ಭಾರತದ ಬೌಲರ್‌ಗಳಿಗೆ ತಡೆಗೋಡೆಯಾಗಿ ನಿಂತರು.

ಆಸ್ಟ್ರೇಲಿಯಾ ತಂಡದ ಗೆಲುವಿಗೆ ಆ ಇಬ್ಬರ (ಹೆಡ್ ಮತ್ತು ಲ್ಯಾಬುಸ್ಚಾಗ್ನೆ) ಪಾಲುದಾರಿಕೆ ಹೆಚ್ಚಾಗಿದೆʼʼ ಎಂದು ರೋಹಿತ್ ಹೇಳಿದರು.

Read More
Next Story