ಎಂ.ಎಸ್. ಧೋನಿ ದಾಖಲೆ ಸರಿಗಟ್ಟಿದ ರಿಷಬ್ ಪಂತ್
x

ಎಂ.ಎಸ್. ಧೋನಿ ದಾಖಲೆ ಸರಿಗಟ್ಟಿದ ರಿಷಬ್ ಪಂತ್

ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಂತ್‌, 600 ದಿನಗಳ ನಂತರ ಟೆಸ್ಟ್‌ ಒಂದರಲ್ಲಿ ಆಟವಾಡಿದ್ದಾರೆ. ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.


ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ದಾಖಲೆ ಶತಕ ಸಿಡಿಸಿದ ರಿಷಬ್ ಪಂತ್, ಎಲ್ಲರೂ ಜ್ಞಾಪಕ ಇಟ್ಟುಕೊಳ್ಳುವಂತೆ ಟೆಸ್ಟ್ ಕ್ರಿಕೆಟ್‌ಗೆ ಮರಳಿದರು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌ನ ಮೂರನೇ ದಿನವಾದ ಶನಿವಾರ, ಪಂತ್ 128 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 109 ರನ್ ಗಳಿಸಿದರು. ಇದು ಪಂತ್ ಅವರ ಆರನೇ ಟೆಸ್ಟ್ ಶತಕವಾಗಿದ್ದು, ಅವರು ಮಾಜಿ ನಾಯಕ ಎಂ.ಎಸ್. ಧೋನಿ ಅವರ ಟೆಸ್ಟ್ ಶತಕಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ.

ಪಂತ್ ಮತ್ತು ಧೋನಿ ವಿಕೆಟ್‌ಕೀಪರ್‌ ಗಳಿಂದ ಅತಿ ಹೆಚ್ಚು ಟೆಸ್ಟ್ ಶತಕಗಳ ಜಂಟಿ ದಾಖಲೆ ಹೊಂದಿದ್ದಾರೆ. ಧೋನಿ 90 ಪಂದ್ಯಗಳಲ್ಲಿ ಆರು ಟೆಸ್ಟ್ ಶತಕ ಗಳಿಸಿದ್ದು, ಪಂತ್ 34 ಟೆಸ್ಟ್‌ ಗಳಲ್ಲಿ ಆರು ಶತಕ ಗಳಿಸಿದ್ದಾರೆ. ಎಡಗೈ ಆಟಗಾರ ಪಂತ್ ಇದಕ್ಕೆ 58 ಇನ್ನಿಂಗ್ಸ್ ತೆಗೆದುಕೊಂಡರು; ಧೋನಿಗೆ 144 ಇನ್ನಿಂಗ್ಸ್ ಬೇಕಾಯಿತು.

ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತಕ್ಕೆ ಸಿಲುಕಿದ್ದ ಅವರು 600 ದಿನಗಳ ನಂತರ ಟೆಸ್ಟ್‌ ಒಂದರಲ್ಲಿ ಆಟವಾಡಿದ್ದಾರೆ. ಇತ್ತೀಚೆಗೆ ಅವರು ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಐಸಿಸಿ ಟಿ 20 ವಿಶ್ವಕಪ್ 2024 ಗೆದ್ದ ರೋಹಿತ್ ಶರ್ಮಾ ನೇತೃತ್ವದ ತಂಡದ ಭಾಗವಾಗಿದ್ದರು.

ಶನಿವಾರ ಇನ್ನೊಬ್ಬ ಬ್ಯಾಟರ್‌ ಶತಕ ಗಳಿಸಿದರು. ಶುಭಮನ್ ಗಿಲ್ 176 ಎಸೆತ(10X4, 4X6)ಗಳಲ್ಲಿ119 ರನ್ ಗಳಿಸಿ ಅಜೇಯರಾಗಿ ಉಳಿದರು. ಗಿಲ್ ಮತ್ತು ಪಂತ್ ನಾಲ್ಕನೇ ವಿಕೆಟ್‌ಗೆ 167 ರನ್ ಸೇರಿಸಿದ್ದು, ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು ನಾಲ್ಕು ವಿಕೆಟ್‌ಗಳಿಗೆ 287 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.

ಆತಿಥೇಯರು ಬಾಂಗ್ಲಾದೇಶಕ್ಕೆ ಟೆಸ್ಟ್ ಗೆಲ್ಲಲು 515 ರನ್‌ಗಳ ಬೃಹತ್ ಗುರಿಯನ್ನು ನೀಡಿದ್ದಾರೆ.

ಭಾರತೀಯ ವಿಕೆಟ್‌ಕೀಪರ್‌ಗಳಿಂದ ಅತಿ ಹೆಚ್ಚು ಟೆಸ್ಟ್ ಶತಕ: 6 – ಎಂಎಸ್ ಧೋನಿ, ರಿಷಬ್ ಪಂತ್. 3 - ವೃದ್ಧಿಮಾನ್ ಸಹಾ

ವಿಕೆಟ್‌ಕೀಪರ್‌ಗಳಿಂದ ಅತಿ ಹೆಚ್ಚು ಟೆಸ್ಟ್ ಶತಕ: 17 – ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯ), 13 - ಆಂಡಿ ಫ್ಲವರ್ (ಜಿಂಬಾಬ್ವೆ), 8 – ಲೆಸ್ ಅಮೆಸ್ (ಇಂಗ್ಲೆಂಡ್),‌ 7– ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಮ್ಯಾಟ್ ಪ್ರಿಯರ್ (ಇಂಗ್ಲೆಂಡ್), ಕುಮಾರ ಸಂಗಕ್ಕಾರ (ಶ್ರೀಲಂಕಾ), ಬಿಜೆ ವಾಟ್ಲಿಂಗ್ (ನ್ಯೂಜಿಲೆಂಡ್)

Read More
Next Story