
ಬೆಂಗಳೂರು ಕಾಲ್ತುಳಿತ ದುರಂತದ 3 ತಿಂಗಳ ನಂತರ ಮೌನ ಮುರಿದ ಆರ್‌ಸಿಬಿ
ಮೂರು ತಿಂಗಳ ಹಿಂದೆ ದುರಂತ ನಡೆದಾಗ ಘೋಷಿಸಿದ್ದ ಆರ್‌ಸಿಬಿ ಕೇರ್ಸ್ ನಿಧಿಯ ಬಗ್ಗೆ ಮತ್ತೊಂದು ಬಾರಿ ಪುನರುಚ್ಚಾರ ಮಾಡಿದೆ.
ಜೂನ್ 4 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತ ದುರಂತದ ಸುಮಾರು ಮೂರು ತಿಂಗಳ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುರುವಾರ (ಆಗಸ್ಟ್ 28) ಮೊದಲ ಬಾರಿಗೆ ಮೌನ ಮುರಿದಿದೆ. ಈ ವೇಳೆ ಜೂನ್ 5ರಂದು ಘೋಷಿಸಿದ್ದ 'ಆರ್‌ಸಿಬಿ ಕೇರ್ಸ್' (RCB Cares) ಎಂಬ ಯೋಜನೆಯನ್ನು ಪುರರುಚ್ಚರಿಸಿದೆ.
ತಂಡದ ಚಾಂಪಿಯನ್ಷಿಪ್ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ನಡೆದ ಈ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ತಮ್ಮ '12ನೇ ಸೇನಾನಿ ' (12th Man Army) ಎಂದು ಕರೆಯಲ್ಪಡುವ ಅಭಿಮಾನಿಗಳನ್ನುದ್ದೇಶಿಸಿ ಆರ್‌ಸಿಬಿ, "ನಾವು ಇಲ್ಲಿ ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಾಗಿವೆ. ಈ ಮೌನ ಅಂತರವಾಗಿರಲಿಲ್ಲ. ಶೋಕ ಸಂದೇಶವಾಗಿತ್ತು" ಎಂದು ಬರೆದುಕೊಂಡಿದ್ದಾರೆ.
"ಈ ಜಾಗವು ಒಮ್ಮೆ ಶಕ್ತಿ, ನೆನಪುಗಳು ಮತ್ತು ನೀವು ಹೆಚ್ಚು ಆನಂದಿಸಿದ ಕ್ಷಣಗಳಿಂದ ತುಂಬಿತ್ತು. ಆದರೆ ಜೂನ್ 4 ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯಗಳೇ ನಿಂತು ಹೋದವು. ಅಂದಿನಿಂದ ನಮ್ಮ ಮೌನವು ಆ ನೋವಿಗೆ ಜಾಗ ಕೊಡುವ ಮಾರ್ಗವಾಗಿತ್ತು," ಎಂದು ಹೇಳಿಕೆಯಲ್ಲಿ ಪ್ರಕಟಿಸಿದೆ. "ಆ ಮೌನದಲ್ಲಿ ನಾವು ಶೋಕಿಸುತ್ತಿದ್ದೆವು, ಕೇಳುತ್ತಿದ್ದೆವು, ಕಲಿಯುತ್ತಿದ್ದೆವು. ಮತ್ತು ನಿಧಾನವಾಗಿ, ಕೇವಲ ಒಂದು ಪ್ರತಿಕ್ರಿಯೆಗಿಂತ ಹೆಚ್ಚಿನದನ್ನು ನಿರ್ಮಿಸಲು ಪ್ರಾರಂಭಿಸಿದೆವು," ಎಂದು ಆರ್‌ಸಿಬಿ ಹೇಳಿದೆ.
'ಆರ್‌ಸಿಬಿ ಕೇರ್ಸ್' ವಿವರ
ಆರ್‌ಸಿಬಿ ಕೇರ್ಸ್ ಅನ್ನುಜೂನ್ ೫ರಂದೇ ಆರ್‌ಸಿಬಿ ತಂಡ ಘೋಷಿಸಿತ್ತು. ಘಟನೆ ನಡೆದ ಮರುದಿನ ಫ್ರಾಂಚೈಸಿಯು ೧೦ ಲಕ್ಷ ರೂಪಾಯಿ ನೆರವು ನೀಡಿತ್ತು.ಈ ವೇಳೆ ಆರ್‌ಸಿಬಿ ಕೇರ್ಸ್ ಮೂಲಕ ನೀಡಲಾಗಿದೆ ಎಂದು ಹೇಳಿಕೊಂಡಿತ್ತು. ಆದಾಗ್ಯೂ ಅದನ್ನು ಈಗ ಮತ್ತೆ ಪುನರುಚ್ಚರಿಸಿದೆ.
"ಅಭಿಮಾನಿಗಳನ್ನು ಗೌರವಿಸಲು, ನೋವನ್ನು ಗುಣಪಡಿಸಲು ಮತ್ತು ನಮ್ಮ ಅಭಿಮಾನಿಗಳ ಜೊತೆ ನಿಲ್ಲುವ ಅಗತ್ಯದಿಂದ 'ಆರ್‌ಸಿಬಿ ಕೇರ್ಸ್' ಹುಟ್ಟಿಕೊಂಡಿದೆ. ಇದು ನಮ್ಮ ಸಮುದಾಯ ಮತ್ತು ಅಭಿಮಾನಿಗಳಿಂದ ರೂಪುಗೊಂಡ ಅರ್ಥಪೂರ್ಣ ಕ್ರಿಯೆಯ ವೇದಿಕೆಯಾಗಿದೆ," ಎಂದು ಫ್ರಾಂಚೈಸಿ ವಿವರಿಸಿದೆ.
"ನಾವು ಇಂದು ಮರಳಿರುವುದು ಸಂಭ್ರಮಕ್ಕಲ್ಲ. ಬದಲಿಗೆ ಕಾಳಜಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು, ನಿಮ್ಮೊಂದಿಗೆ ನಿಲ್ಲಲು, ಒಟ್ಟಿಗೆ ಮುಂದೆ ಸಾಗಲು, ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯಲು. ಆರ್‌ಸಿಬಿ ಕಾಳಜಿ ವಹಿಸುತ್ತದೆ, ಮತ್ತು ನಾವು ಯಾವಾಗಲೂ ವಹಿಸುತ್ತೇವೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜೂನ್ 4ರ ದುರಂತ
ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಲು ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಜೂನ್ 4 ರಂದು ಆಗಮಿಸಿದಾಗ ಈ ಕಾಲ್ತುಳಿತ ಸಂಭವಿಸಿತ್ತು. ಉಲ್ಲಾಸದ ಆಚರಣೆಯು ಭಾರತೀಯ ಕ್ರಿಕೆಟ್‌ನಲ್ಲೇ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಾಗಿ ಮಾರ್ಪಟ್ಟಿತ್ತು. ಕ್ರೀಡಾಂಗಣದ ಹೊರಗೆ ಜನಸಂದಣಿ ಹೆಚ್ಚಾಗಿ, ಬೆಂಬಲಿಗರು ಬಲವಂತವಾಗಿ ಒಳನುಗ್ಗಲು ಯತ್ನಿಸಿದಾಗ ಉಂಟಾದ ಕಾಲ್ತುಳಿತದಲ್ಲಿ ಉಸಿರುಗಟ್ಟಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ದುರಂತದ ನಂತರ ಆರ್‌ಸಿಬಿ ಫ್ರಾಂಚೈಸಿಯು ಮೌನವಾಗಿದ್ದುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು.