
ಬ್ಯಾಂಡೇಜ್ ಕಟ್ಟಿಕೊಂಡು ಕೋಚಿಂಗ್ ನೀಡಿದ ರಾಹುಲ್ ದ್ರಾವಿಡ್.
Rahul Dravid :ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡೇ ರಾಹುಲ್ ದ್ರಾವಿಡ್ ಕೋಚಿಂಗ್
Rahul Dravid : ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ತಮ್ಮ ಕಿರಿಯ ಮಗ ಅನ್ವಯ್ ದ್ರಾವಿಡ್ ಜತೆಗೆ ವಿಜಯಾ ಕ್ಲಬ್ ಪರ ಅವರು ಆಡಿದ್ದರು. ಆ ಪಂದ್ಯದಲ್ಲಿ ಗಾಯಗೊಂಡಿದ್ದರು.
ಕೆಎಸ್ಸಿಎ 3ನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿಆಡುವಾಗ ಕಾಲಿಗೆ ಗಾಯಮಾಡಿಕೊಂಡಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್, ಸಮಸ್ಯೆಯನ್ನು ಲೆಕ್ಕಿಸದೇ ಐಪಿಎಲ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಊರುಗೋಲಿನ ಸಹಾಯದಲ್ಲಿ ನಡೆಯುತ್ತಿರುವ ಅವರು ಆಟಗಾರರಿಗೆ ಬ್ಯಾಟಿಂಗ್ ಮಾರ್ಗದರ್ಶನ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ.
ರಾಜಸ್ಥಾನ್ ರಾಯಲ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೊವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು, "ಬದ್ಧತೆ ಎಂದರೆ ಇದು, ನಿಮ್ಮನ್ನು ನೋಡಿ ಕಲಿಯಬೇಕು. ಹ್ಯಾಟ್ಸ್ಆಪ್! ರಾಹುಲ್ ಸರ್" ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ತಮ್ಮ ಕಿರಿಯ ಮಗ ಅನ್ವಯ್ ದ್ರಾವಿಡ್ ಜತೆಗೆ ವಿಜಯಾ ಕ್ಲಬ್ ಪರ ಅವರು ಆಡಿದ್ದರು. ಆ ಪಂದ್ಯದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಅವರ ಕಾಲಿಗೆ ದೊಡ್ಡ ಬ್ಯಾಂಡೇಜ್ ಕಟ್ಟಲಾಗಿತ್ತು. ಇದರಿಂದಾಗಿ ಅವರು ಮತ್ತೆ ಮೈದಾನಕ್ಕೆ ಇಳಿದಿರಲಿಲ್ಲ. ಅವರಿಗೆ ಉಂಟಾದ ಗಾಯ ರಾಜಸ್ಥಾನ್ ರಾಯಲ್ಸ್ ತಂಡದ ಆತಂಕಕ್ಕೂ ಕಾರಣವಾಗಿತ್ತು. ಆದರೆ, ದ್ರಾವಿಡ್ ತಮ್ಮ ಗಾಯವನ್ನು ಮರೆತು ಕೋಚಿಂಗ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಯುವ ಆಟಗಾರರಿಗೆ ಪಾಠ
ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವು ಆಟಗಾರರು ದ್ರಾವಿಡ್ ಅವರಿಂದ ಬ್ಯಾಟಿಂಗ್ ಸಲಹೆ ಪಡೆದು ಅಭ್ಯಾಸ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. 2014ರಲ್ಲಿ ರಾಜಸ್ಥಾನ್ ರಾಯಲ್ಸ್ ಕೋಚ್ ಆಗಿದ್ದ ದ್ರಾವಿಡ್, ನಂತರ ಭಾರತದ 19 ವರ್ಷದೊಳಗಿನವರ ತಂಡ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕೋಚ್ ಮತ್ತು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದರು. ಇದೀಗ ಅವರು ಮಾಜಿ ತಂಡಕ್ಕೆ 10 ವರ್ಷಗಳ ನಂತರ ಮತ್ತೆ ಕೋಚಿಂಗ್ ನೀಡುತ್ತಿದ್ದಾರೆ.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ, ಮಾರ್ಚ್ 23ರಂದು ನಡೆಯುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ಚಾಂಪಿಯನ್ ಆದ ನಂತರ, ಇದುವರೆಗೆ ಕಪ್ ಗೆದ್ದಿಲ್ಲ. ಆ ನಂತರ ಒಮ್ಮೆ ಫೈನಲ್ ಮತ್ತು ಹಲವು ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರೂ, ಟ್ರೋಫಿ ಮಾತ್ರ ಒಲಿಯಲಿಲ್ಲ. ಈ ಬಾರಿ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ತಂಡ ಕಪ್ ಗೆಲ್ಲಬಹುದೇ ಎಂದು ಕಾದು ನೋಡಬೇಕಿದೆ.