
Rahul Dravid : ಅಪ್ಪ- ಮಗನ ಜತೆಯಾಟ; ಕ್ಲಬ್ ಪರ ಕ್ರಿಕೆಟ್ ಆಡಿದ ರಾಹುಲ್ ದ್ರಾವಿಡ್, ಪುತ್ರ ಅನ್ವಯ್!
Rahul Dravid : ಬೆಂಗಳೂರಿನ ಬೊಮ್ಮಸಂದ್ರ ಕ್ರಿಕೆಟ್ ಮೈದಾನದಲ್ಲಿ ಅಪರೂಪದ ಕ್ಷಣ ನಡೆದಿದೆ. ರಾಹುಲ್ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ಜತೆಯಾಗಿ ವಿಜಯಾ ಕ್ಲಬ್ ಪರ ಆಡಿದ್ದಾರೆ.
ಬೆಂಗಳೂರಿನ ಬೊಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಿಯೊಂದರಲ್ಲಿ ಅಪರೂಪದ ಪ್ರಸಂಗವೊಂದು ನಡೆದಿದೆ. ಭಾರತ ತಂಡದ ಮಾಜಿ ನಾಯಕ, ಕೋಚ್ ಹಾಗೂ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ಅವರ ಪುತ್ರ ಅನ್ವಯ್ ದ್ರಾವಿಡ್ ತಂಡವೊಂದರ ಪರ ಜತೆಯಾಗಿ ಆಡಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಲೀಗ್‌ನ ಮೂರನೇ ದರ್ಜೆಯ ಕ್ರಿಕೆಟ್ ಪಂದ್ಯದಲ್ಲಿ (ಶ್ರೀ ನಸ್ಸೂರ್ ಮೆಮೋರಿಯಲ್ ಶೀಲ್ಡ್ - ಗ್ರೂಪ್ I - III ಡಿವಿಷನ್ 2024-25) ಟೂರ್ನಿಯಲ್ಲಿ ಅಪ್ಪ ಮತ್ತು ಮಗ ವಿಜಯಾ ಕ್ರಿಕೆಟ್ ಕ್ಲಬ್ (ಮಾಲೂರು) ಪರ ಆಡಿದ್ದಾರೆ. ಬೆಂಗಳೂರಿನ ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಶನಿವಾರ (ಫೆಬ್ರವರಿ 22) ಪಂದ್ಯ ನಡೆದಿದ್ದು, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನೆನಪಿನಲ್ಲಿ ಉಳಿಯುವ ಕ್ಷಣವಾಗಿದೆ.
ಕ್ರಿಕೆಟ್ ಬಗ್ಗೆ ಅಚಲ ಪ್ರೀತಿ
52 ವರ್ಷದ ರಾಹುಲ್ ದ್ರಾವಿಡ್, ಮಹಾನ್ ಕ್ರಿಕೆಟ್ ಆಟಗಾರ. ಅವರು ಎಲ್ಲ ಕ್ರಿಕೆಟ್ ಫಾರ್ಮಾಟ್‌ಗಳಿಂದ ನಿವೃತ್ತರಾಗಿದ್ದು, ಭಾರತ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2024ರಲ್ಲಿ ರೋಹಿತ್ ನೇತೃತ್ವದ ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್ ಟ್ರೋಫಿ ಕಡೆಗೆ ಮುನ್ನಡೆಸಿದ್ದರು. ಇಷ್ಟೆಲ್ಲ ಸಾಧನೆ ಮಾಡಿದ್ದರೂ ಕ್ರಿಕೆಟ್ ಮೇಲಿನ ಅವರ ಪ್ರೀತಿ ಅಚಲವಾಗಿದೆ. ಅಂತೆಯೇ ಇದೀಗ ಈ ವಯಸ್ಸಿನಲ್ಲಿಯೂ ಮೈದಾನಕ್ಕಿಳಿದು ಕ್ಲಬ್ ಪರ ಕ್ರಿಕೆಟ್ ಆಡಿದ್ದಾರೆ.
16 ವರ್ಷದ ಅವರ ಮಗ ಅನ್ವಯ್ ದ್ರಾವಿಡ್ ಕೂಡ ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಅನ್ವಯ್ ವಿಕೆಟ್ಕೀಪರ್- ಬ್ಯಾಟ್ಸ್‌ಮನ್ ಆಗಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಧ ಶತಕ (58 ರನ್) ಗಳಿಸಿದ್ದಾರೆ. ಆದರೆ, ಹಿರಿಯ ದ್ರಾವಿಡ್ ಕೇವಲ 10 ರನ್ ಗಳಿಸಿ ಔಟಾದರು.
ತಂದೆಗಿಂತ ಅಗ್ರ ಕ್ರಮಾಂಕ
ಅನ್ವಯ್ ನಂ.4 ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 60 ಎಸೆತಗಳಲ್ಲಿ 58 ರನ್ (8 ಬೌಂಡರಿ ಬಾರಿಸಿದರು. ಹಿರಿಯ ದ್ರಾವಿಡ್ ನಂ.6 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು ಮತ್ತು 8 ಎಸೆತಗಳಲ್ಲಿ 10 ರನ್ ಮಾತ್ರ ಗಳಿಸಿ ಔಟಾದರು. ತಂದೆ-ಮಗ ಇಬ್ಬರೂ ಕೆಲ ಕಾಲ ಒಟ್ಟಿಗೆ ಬ್ಯಾಟಿಂಗ್ ಮಾಡಿದ್ದು ಕೂಡ ವಿಶೇಷ. ಅವರು ಆರನೇ ವಿಕೆಟ್ 17 ರನ್ ಜೊತೆಯಾಗಿ ಸೇರಿಸಿದ್ದರು.
ವಿಜಯಾ ಕ್ರಿಕೆಟ್ ಕ್ಲಬ್ 50 ಓವರ್‌ಗಳಲ್ಲಿ 7 ವಿಕೆಟ್ಗೆ 345 ಗಳಿಸಿತು. ಸ್ವಪ್ನಿಲ್ ಯೆಲವೆ ಶತಕ (107 ರನ್ 50 ಎಸೆತಗಳಲ್ಲಿ, 12 ಬೌಂಡರಿ, 4 ಸಿಕ್ಸರ್) ಗಳಿಸಿ ಟಾಪ್ ಸ್ಕೋರರ್ ಎನಿಸಿದ್ದರು.