
ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ: ತನಿಖೆಯನ್ನು ಸಿಬಿಐ, ಇಡಿಗೆ ಒಪ್ಪಿಸಲು ಕೋರಿ ಹೈಕೋರ್ಟ್ಗೆ ಅರ್ಜಿ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಅವರು ಈ ಅರ್ಜಿಗಳನ್ನು ಸಲ್ಲಿಸಲು ಅನುಮತಿ ನೀಡಿದ್ದು, ಈ ವಾರಾಂತ್ಯದಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ವಿಶ್ವವಿಖ್ಯಾತ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ವೇಳೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಭಾರೀ ದಾಂಧಲೆ ಪ್ರಕರಣ ಇದೀಗ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ. ಈ ಘಟನೆಯ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಕೋರಿ ಸೋಮವಾರ (ಡಿಸೆಂಬರ್ 15) ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಅವರು ಈ ಅರ್ಜಿಗಳನ್ನು ಸಲ್ಲಿಸಲು ಅನುಮತಿ ನೀಡಿದ್ದು, ಈ ವಾರಾಂತ್ಯದಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಅರ್ಜಿದಾರರ ಬೇಡಿಕೆಗಳೇನು?
ರಾಜ್ಯದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರ್ ಮತ್ತು ವಕೀಲರಾದ ಸಬ್ಯಸಾಚಿ ಚಟ್ಟೋಪಾಧ್ಯಾಯ ಹಾಗೂ ಮೈನಾಕ್ ಘೋಷಾಲ್ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕ್ರೀಡಾಂಗಣದಲ್ಲಿ ನಡೆದ ಹಿಂಸಾಚಾರ ಮತ್ತು ಕಾರ್ಯಕ್ರಮದ ಆಯೋಜನೆಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳ ತನಿಖೆಯನ್ನು ಸಿಬಿಐ (CBI), ಜಾರಿ ನಿರ್ದೇಶನಾಲಯ (ED) ಮತ್ತು ಗಂಭೀರ ವಂಚನೆ ತನಿಖಾ ಕಚೇರಿ (SFIO) ಗೆ ಒಪ್ಪಿಸಬೇಕು.
ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಅಶಿಮ್ ಕುಮಾರ್ ರೇ ನೇತೃತ್ವದಲ್ಲಿ ರಚಿಸಿರುವ ತನಿಖಾ ಸಮಿತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ಸಮಿತಿಯನ್ನು ಆತುರದಲ್ಲಿ ರಚಿಸಲಾಗಿದೆ ಮತ್ತು ಇದರಿಂದ ಸತ್ಯ ಹೊರಬರುವುದಿಲ್ಲ ಎಂದು ವಾದಿಸಿದ್ದಾರೆ.
ಈ ಘಟನೆಯಿಂದ ವಿಶ್ವದ ಮುಂದೆ ಪಶ್ಚಿಮ ಬಂಗಾಳದ ಮಾನ ಹರಾಜಾಗಿದೆ ಎಂದು ಸುವೇಂದು ಅಧಿಕಾರ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಶನಿವಾರ (ಡಿಸೆಂಬರ್ 13) ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಅಭಿಮಾನಿಗಳಿಗೆ ಸರಿಯಾಗಿ ದರ್ಶನ ನೀಡದೆ ಅಲ್ಪಸಮಯದಲ್ಲಿಯೇ ನಿರ್ಗಮಿಸಿದ್ದರು. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದ್ದರು. ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು, ಮೆಸ್ಸಿ ಅವರನ್ನು ನೋಡಲಾಗದೆ ನಿರಾಶರಾಗಿದ್ದರು. ಈ ದಾಂಧಲೆಯಲ್ಲಿ ಕ್ರೀಡಾಂಗಣಕ್ಕೆ ಅಂದಾಜು 2 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರದ ಕ್ರಮಗಳು
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆಯ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಮುಂದಿನ ಹದಿನೈದು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಮಧ್ಯೆ, ಬಿಧಾನನಗರ ಪೊಲೀಸರು ಕಾರ್ಯಕ್ರಮದ ಪ್ರಮುಖ ಆಯೋಜಕ ಶತದ್ರು ದತ್ತಾ ಅವರನ್ನು ಬಂಧಿಸಿದ್ದು, ಆಯೋಜಕ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಮತ್ತು ಹಣಕಾಸಿನ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.
ಮೆಸ್ಸಿ ಅವರು 2011ರ ನಂತರ ಇದೇ ಮೊದಲ ಬಾರಿಗೆ ಈ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು, ಆದರೆ ಈ ಭೇಟಿ ವಿವಾದದ ಮೂಲಕ ಅಂತ್ಯಗೊಂಡಿದೆ.

