ರಸ್ತೆ ಅಪಘಾತ: ಕ್ರಿಕೆಟರ್ ಮುಶೀರ್ ಖಾನ್ ಸ್ಥಿತಿ ಸ್ಥಿರ
ಲಕ್ನೋ: ಲಕ್ನೋದ ಹೊರ ಭಾಗದಲ್ಲಿ ರಸ್ತೆ ಅಪಘಾತಕ್ಕೀಡಾದ ಮುಂಬೈ ಆಲ್‌ರೌಂಡರ್ ಮುಶೀರ್ ಖಾನ್ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ. ಗಾಯದಿಂದ ಅವರು ಇರಾನಿ ಕಪ್ ಹಾಗೂ ರಣಜಿ ಪಂದ್ಯದಲ್ಲಿ ಆಡುವುದಿಲ್ಲ.
ಬ್ಯಾಟರ್ ಸರ್ಫರಾಜ್ ಅವರ ಕಿರಿಯ ಸಹೋದರ ಮುಶೀರ್(19), ಕುತ್ತಿಗೆಗೆ ಗಾಯವಾಗಿದೆ. ಇದರಿಂದ ಅವರು ಕನಿಷ್ಠ ಮೂರು ತಿಂಗಳು ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ. ಅಕ್ಟೋಬರ್ 11ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿ 2024-25 ಪಂದ್ಯಗಳಲ್ಲಿ ಅವರು ಮುಂಬೈ ಪರ ಆಡುವುದಿಲ್ಲ.
ಅಕ್ಟೋಬರ್ 1 ರಂದು ಪ್ರಾರಂಭವಾಗುವ ಇರಾನಿ ಕಪ್ ಪಂದ್ಯದಲ್ಲಿ ಆಡಲು ಮುಶೀರ್ ಹುಟ್ಟೂರಾದ ಅಜಂಗಢದಿಂದ ಲಕ್ನೋಗೆ ತೆರಳುತ್ತಿದ್ದರು. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಭವಿಸಿದ್ದು, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಜೊತೆಯಲ್ಲಿದ್ದ ಅವರ ತಂದೆ ನೌಶದ್ ಖಾನ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕ್ರಿಕೆಟಿಗ ಅಪಾಯದಿಂದ ಪಾರಾಗಿದ್ದಾರೆ ಎಂದು ಲಕ್ನೋದ ಮೇದಾಂತ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಭೋಲಾ ಸಿಂಗ್ ಹೇಳಿದ್ದಾರೆ.
ʻಕ್ರಿಕೆಟಿಗ ಮುಶೀರ್ ಖಾನ್ ಅವರನ್ನು ಕುತ್ತಿಗೆ ನೋವಿನ ಕಾರಣ ಮೇದಾಂತ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತಂದಿದ್ದು, ಅರ್ಥೋಪೀಡಿಕ್ಸ್ ವಿಭಾಗದ ನಿರ್ದೇಶಕ ಡಾ.ಧರ್ಮೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ,ʼ ಎಂದು ಡಾ. ಸಿಂಗ್ ಹೇಳಿದ್ದಾರೆ.
ʻಅವರ ಕುತ್ತಿಗೆ ಬಳಿ ಮುರಿತ ಆಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ವೈದ್ಯಕೀಯ ತಂಡಗಳು ಅವರ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅವರು ಪ್ರಯಾಣ ಮಾಡಬಹುದೆಂದು ವೈದ್ಯರು ಹೇಳಿದರೆ, ಮೌಲ್ಯಮಾಪನ ಮತ್ತು ಹೆಚ್ಚುವರಿ ಚಿಕಿತ್ಸೆಗೆ ಅವರನ್ನು ಮುಂಬೈಗೆ ಕರೆದೊಯ್ಯಲಾಗುತ್ತದೆ,ʼ ಎಂದರು.
ಮುಶೀರ್ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಗಳಿಸಿದ್ದಾರೆ. ಕಳೆದ ಋತುವಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ದ್ವಿಶತಕ, ಸೆಮಿಫೈನಲ್‌ನಲ್ಲಿ ಅರ್ಧಶತಕ ಮತ್ತು ವಿದರ್ಭ ವಿರುದ್ಧದ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಶತಕ ಗಳಿಸಿದ್ದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತ ಎ ವಿರುದ್ಧ ಭಾರತ ಬಿ ಪರ ದುಲೀಪ್ ಟ್ರೋಫಿಯಲ್ಲಿ ಶತಕದೊಂದಿಗೆ 2024-25 ರ ದೇಶಿ ಋತುವನ್ನು ಪ್ರಾರಂಭಿಸಿದ್ದರು.