Mithun Manhas, ex-Delhi cricketer tipped to become next BCCI president?
x

Mithun manhas

ಅಂತರರಾಷ್ಟ್ರೀಯ ಪಂದ್ಯ ಆಡದ ಆಟಗಾರನಿಗೆ ಬಿಸಿಸಿಐ ಚುಕ್ಕಾಣಿ? ಯಾರು ಅವರು?

ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.


Click the Play button to hear this message in audio format

ನವದೆಹಲಿಯಲ್ಲಿ ಸೆ.28ರಂದು ನಡೆಯಲಿರುವ ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐ ತನ್ನ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎಂದಿಗೂ ಪ್ರತಿನಿಧಿಸದ ಮನ್ಹಾಸ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಉನ್ನತ ಅಧಿಕಾರಿಗಳ ಬೆಂಬಲವನ್ನು ಹೊಂದಿದ್ದಾರೆ. ಹಾಗಾಗಿ ಯಾವುದೇ ವಿರೋಧವಿಲ್ಲದೆ ಅವರು ಆಯ್ಕೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಪ್ರವೃತ್ತಿಯು 2019ರ ಬಿಸಿಸಿಐ ಸಂವಿಧಾನದ ತಿದ್ದುಪಡಿ ಆದ ನಂತರ ಮುಂದುವರೆದುಕೊಂಡು ಬಂದಿದೆ.

ಖಜಾಂಚಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷರು ಸೇರಿದಂತೆ ಹಲವು ಸ್ಥಾನಗಳಿಗೆ ಅಭ್ಯರ್ಥಿಗಳ ಕುರಿತು ಚರ್ಚಿಸಲು ಭಾರತೀಯ ಕ್ರಿಕೆಟ್‌ ರಂಗದ ಪ್ರಮುಖರು ಸೆ.20ರಂದು ಶನಿವಾರ ಸಭೆ ಸೇರಿದ್ದರು. ಕಡ್ಡಾಯ ನಿವೃತ್ತಿ ವಯಸ್ಸು 70 ತಲುಪಿದ ನಂತರ ರೋಜರ್ ಬಿನ್ನಿ ಅವರ ಅಧಿಕಾರಾವಧಿ ಕಳೆದ ತಿಂಗಳು ಕೊನೆಗೊಂಡಿತ್ತು. ಹೊಸದಾಗಿ ಅಂಗೀಕರಿಸಲ್ಪತ್ತಿರುವ ರಾಷ್ಟ್ರೀಯ ಕ್ರೀಡಾ ಮಸೂದೆಯು ಪದಾಧಿಕಾರಿಗಳಿಗೆ 75 ವರ್ಷ ವಯಸ್ಸಾಗುವವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದರೂ, ಹಿಂದಿನ ವಯಸ್ಸಿನ ಮಿತಿಗೆ ಅನುಗುಣವಾಗಿ ಬಿನ್ನಿ ರಾಜೀನಾಮೆ ನೀಡಿದ್ದರು.

ಇತ್ತೀಚಿನ ವರ್ಷಗಳಲ್ಲಿ, ಮಂಡಳಿಯು ಮಾಜಿ ಕ್ರಿಕೆಟಿಗರನ್ನೇ ಅಧ್ಯಕ್ಷರನ್ನಾಗಿ ನಿರಂತರವಾಗಿ ಆಯ್ಕೆ ಮಾಡುತ್ತಾ ಬರುತ್ತಿದೆ. ಅಕ್ಟೋಬರ್ 2022ಕ್ಕಿಂತ ಅಂದರೆ ರೋಜರ್ ಬಿನ್ನಿ ಅವರ ಅಧಿಕಾರಾವಧಿಗೂ ಮುನ್ನ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮೂರು ವರ್ಷಗಳ ಕಾಲ ಈ ಹುದ್ದೆಯನ್ನು ನಿರ್ವಹಿಸಿದ್ದರು.

ಸೆ.21ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಮನ್ಹಾಸ್ ಅವರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್​(ಜೆಕೆಸಿಎ)ನ ನಾಮನಿರ್ದೇಶಿತ ಸದಸ್ಯರಾಗಿ ಭಾಗವಹಿಸಲಿದ್ದಾರೆ. ಕರ್ನಾಟಕದ ಪರ ಮಾಜಿ ಸ್ಪಿನ್ನರ್ ರಘುರಾಮ್ ಭಟ್ ಮತ್ತು ಪಂಜಾಬ್ ಪರ ದಂತಕಥೆ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೂ ಉಪಸ್ಥಿತಿ ವಹಿಸಲಿದ್ದಾರೆ. 2019ರಿಂದ 2022ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಪ್ರಾತಿನಿಧ್ಯವನ್ನು ವಹಿಸಲಿದ್ದಾರೆ.

ಮೂಲಗಳ ಪ್ರಕಾರ, ಕಳೆದ ತಿಂಗಳು ಬಿನ್ನಿ ಅವರ ಅಧಿಕಾರಾವಧಿ ಮುಗಿದ ನಂತರ ಮಧ್ಯಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ರಾಜೀವ್ ಶುಕ್ಲಾ ಸೇರಿದಂತೆ ಇತರೆ ಪ್ರಮುಖ ಪದಾಧಿಕಾರಿಗಳು ತಮ್ಮ ಸ್ಥಾನಗಳಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮಿಥುನ್ ಮನ್ಹಾಸ್ ಯಾರು?

ಭಾರತೀಯ ದೇಶೀಯ ಕ್ರಿಕೆಟ್‌ನ ದಿಗ್ಗಜರಾಗಿರುವ ಅವರು 1997-98ರ ಆವೃತ್ತಿ ವೇಳೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರಂತಹ ದಿಗ್ಗಜರು ಪ್ರಾಬಲ್ಯ ಹೊಂದಿದ್ದ ಯುಗದಲ್ಲಿ ದೆಹಲಿಯ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. ಮನ್ಹಾಸ್ 2007-08ರಲ್ಲಿ ದೆಹಲಿ ತಂಡವು ರಣಜಿ ಟ್ರೋಫಿ ಗೆಲ್ಲಲು ಕಾರಣಕರ್ತರಾಗಿದ್ದರು. ಆ ಆವೃತ್ತಿಯಲ್ಲಿ ಅವರು 921 ರನ್ ಬಾರಿಸಿದ್ದರು.

ಬಹುಮುಖ ಪ್ರತಿಭೆಯ ಕ್ರಿಕೆಟಿಗರಾಗಿದ್ದ ಅವರು, ಪ್ರಾಥಮಿಕವಾಗಿ ಬಲಗೈ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಆಫ್-ಸ್ಪಿನ್ನರ್ ಮತ್ತು ಸಾಂದರ್ಭಿಕ ವಿಕೆಟ್ ಕೀಪರ್ ಆಗಿಯೂ ಕೊಡುಗೆ ನೀಡಿದ್ದರು. 157ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅವರು, 27 ಶತಕಗಳು ಮತ್ತು 49 ಅರ್ಧಶತಕಗಳು ಸೇರಿದಂತೆ ಒಟ್ಟು 9,714 ರನ್ ಕಲೆಹಾಕಿದ್ದರು. ಅವರ ಐಪಿಎಲ್ ವೃತ್ತಿಜೀವನದಲ್ಲಿ ದೆಹಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಜೊತೆಗಿನ ಪಂದ್ಯಗಳೂ ಸೇರಿವೆ.

Read More
Next Story