
ಮಹಾರಾಜ ಟ್ರೋಫಿ 2024: ಮೈಸೂರು ವಾರಿಯರ್ಸ್ ಚಾಂಪಿಯನ್
ಕಾರ್ತಿಕ್ ಎಸ್.ಯು (71) ಮತ್ತು ಕರುಣ್ ನಾಯರ್ (66) ಅರ್ಧ ಶತಕ ಹಾಗೂ ಮನೋಜ್ ಭಾಂಡಗೆ ಅಜೇಯ 13 ಎಸೆತಗಳಲ್ಲಿ 44 ರನ್ ಗಳಿಸಿ, ಮೈಸೂರು ಉತ್ತಮ ಸ್ಕೋರ್ 207/4 ಗಳಿಸಲು ನೆರವಾದರು
ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ ಮೂರನೇ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ 45 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ಅನ್ನು ಸೋಲಿಸಿ ಚಾಂಪಿಯನ್ ಆಗಿ ಭಾನುವಾರ (ಸೆಪ್ಟೆಂಬರ್ 1) ಹೊರಹೊಮ್ಮಿತು.
ಕಾರ್ತಿಕ್ ಎಸ್.ಯು. (71) ಮತ್ತು ನಾಯಕ ಕರುಣ್ ನಾಯರ್ (66) ಅರ್ಧ ಶತಕಗಳನ್ನು ಹಾಗೂ ಮನೋಜ್ ಭಾಂಡಗೆ 13 ಎಸೆತಗಳಲ್ಲಿ ಅಜೇಯ 44 ರನ್ ಗಳಿಸುವ ಮೂಲಕ ಮೈಸೂರು ತಂಡವನ್ನು 4 ವಿಕೆಟ್ ಗೆ 207 ರನ್ ತಲುಪಿಸಿದರು.
ಬೆಂಗಳೂರು ಬ್ಲಾಸ್ಟರ್ಸ್ ಪರವಾಗಿ ಚೇತನ್ ಎಲ್.ಆರ್. (51) ಏಕಾಂಗಿ ಹೋರಾಟ ನಡೆಸಿದರು. ವಿದ್ಯಾಧರ್ ಪಾಟೀಲ್ (3/19) ಮತ್ತು ಕೆ. ಗೌತಮ್ (2/23) ಅವರ ಎಸೆತಗಳನ್ನುಎದುರಿಸುವಲ್ಲಿ ಬೆಂಗಳೂರು ವಿಫಲವಾಯಿತು.
ಮಯಾಂಕ್ ಅಗರ್ವಾಲ್ ನಿರ್ಗಮನ: ವಿದ್ಯಾಧರ್ ಪಾಟೀಲ್ ಅವರ ಬೌಲಿಂಗಿನಿಂದ ಬೆಂಗಳೂರು ಹಳಿ ತಪ್ಪಿತು. ಅವರು ಮೊದಲ ಓವರ್‌ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ (6) ಹಾಗೂ ಮೂರನೇ ಓವರ್‌ನಲ್ಲಿ ಭುವನ್ ರಾಜು (1) ಅವರ ವಿಕೆಟ್ ಗಳಿಸಿದರು. ಧನುಷ್ ಗೌಡ ಆನಂತರ ತಮ್ಮ ಮೊದಲ ಎಸೆತದಲ್ಲಿ ರಕ್ಷಿತ್ ಎಸ್ (5) ಅವರನ್ನು ಔಟ್ ಮಾಡಿದರು. ಬೆಂಗಳೂರು ಪವರ್‌ಪ್ಲೇ 39/3 ರಲ್ಲಿ ಮುಕ್ತಾಯಗೊಂಡಿತು.
ಸೂರಜ್ ಅಹುಜಾ (8), ಅನಿರುದ್ಧ ಜೋಶಿ (18) ಮತ್ತು ನವೀನ್ ಎಂ.ಜಿ. (17) ಸುಲಭವಾಗಿ ಔಟ್ ಆದರು. ಕ್ರಾಂತಿಕುಮಾರ್ (ಔಟಾಗದೆ 39) ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಹೋರಾಡಿದರು. ಆದರೆ, ಅವರ ಪ್ರಯತ್ನ ಸಾಲುವಷ್ಟು ಇರಲಿಲ್ಲ. ಬೆಂಗಳೂರು 162/8ಕ್ಕೆ ಇನ್ನಿಂಗ್ಸ್ ಮುಗಿಸಿತು.
ಆರಂಭಿಕ ಆಟಗಾರ ಚೇತನ್ ಅವರು 10 ನೇ ಓವರ್‌ನಲ್ಲಿ ಗೌತಮ್ ಅವರಿಂದ ಔಟ್ ಆಗುವವರೆಗೂ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಹೊಡೆದು, 29 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಗೌತಮ್ ಇದಕ್ಕೆ ಮೊದಲು ಶುಭಾಂಗ್ ಹೆಗ್ಡೆ (5) ಅವರನ್ನು ಪೆವಿಲಿಯನ್‌ಗೆ ಕಳಿಸಿದ್ದರು. 10 ಓವರ್‌ಗಳಲ್ಲಿ ಬೆಂಗಳೂರು 72/5 ಗಳಿಸಿತ್ತು.
ಕಾರ್ತಿಕ್-ನಾಯರ್ ಜೊತೆಯಾಟ: ಕಾರ್ತಿಕ್ (71) ಪವರ್‌ಪ್ಲೇಯಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ ಮೈಸೂರಿಗೆ ಉತ್ತಮ ಆರಂಭ ನೀಡಿದರು. ಕಾರ್ತಿಕ್ ಸಿಎ (3) ನಾಲ್ಕನೇ ಓವರ್‌ನಲ್ಲಿ ನವೀನ್ ಎಂಜಿಗೆ ಅವರಿಗೆ ಔಟ್ ಆದರು. ನಾಯರ್ ಮತ್ತು ಕಾರ್ತಿಕ್ ಪವರ್‌ಪ್ಲೇ ಅಂತ್ಯದ ವೇಳೆಗೆ ತಂಡವನ್ನು 52/1 ಗೆ ಮುನ್ನಡೆಸಿದರು.
10 ಓವರ್ ಗೆ ಮುನ್ನ ಕಾರ್ತಿಕ್ ಋತುವಿನ ಮೂರನೇ ಸತತ ಅರ್ಧಶತ ಗಳಿಸಿದರು; 30 ಎಸೆತಗಳಲ್ಲಿ ಮೈಲುಗಲ್ಲನ್ನು ತಲುಪಿದರು. ಕಾರ್ತಿಕ್ ಅವರು ಶುಭಾಂಗ್ ಹೆಗ್ಡೆ ಅವರಿಗೆ ಔಟ್ ಆಗುವ ಮೊದಲು ಎರಡು ಸಿಕ್ಸರ್ ಉಡಾಯಿಸಿದರು. 14 ನೇ ಓವರ್‌ನಲ್ಲಿ ನಾಯರ್ ಜೊತೆಗಿನ 81 ರನ್ ಜೊತೆಯಾಟ ಕೊನೆಗೊಳಿಸಿದರು.
ಆನಂತರ ಹರ್ಷಿಲ್ ಧರ್ಮಾನಿ (6) ಮತ್ತು 15 ನೇ ಓವರ್‌ನಲ್ಲಿ ಕುಮಾರ್ ನಿರ್ಗಮಿಸಿದರು. ನಾಯರ್ 16 ನೇ ಓವರ್‌ನಲ್ಲಿ ಹೆಗ್ಡೆ ಎಸೆದ ಚೆಂಡನ್ನು ಹೆಚ್ಚುವರಿ ಕವರ್‌ನಲ್ಲಿ ಸಿಕ್ಸರ್ ಹೊಡೆದರು. ಅದೇ ಓವರ್‌ನಲ್ಲಿ ಭಾಂಡಗೆ ಎರಡು ಸಿಕ್ಸರ್ ಸಿಡಿಸಿದರು.
ನಾಯರ್ 17ನೇ ಓವರ್‌ನಲ್ಲಿ ಲವಿಶ್ ಕೌಶಲ್ ಅವರ ಬೌಲಿಂಗಿನಲ್ಲಿ 16 ರನ್ ಗಳಿಸಿ, ಅರ್ಧ ಶತಕ ಪೂರೈಸಿದರು. ಭಾಂಡಗೆ ಮತ್ತು ಕರುಣ್ ನಾಯರ್ 14 ಎಸೆತಗಳಲ್ಲಿ 48 ರನ್ ಗಳಿಸಿದರು. ಭಾಂಡಗೆ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಮತ್ತು ಜೆ.ಸುಚಿತ್ (ಅಜೇಯ 7) ಜೊತೆ 40 ರನ್ ಜೋಡಿಸಿದರು. ಮೈಸೂರು ಉತ್ತಮ ಸ್ಕೋರ್ 207/4 ಗಳಿಸಿತು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ 207/4 (ಕಾರ್ತಿಕ್ ಎಸ್‌ಯು 71, ಕರುಣ್ ನಾಯರ್ 66, ಮನೋಜ್ ಭಾಂಡಗೆ ಔಟಾಗದೆ 44, ನವೀನ್ ಎಂಜಿ 2/44, ಕ್ರಾಂತಿ ಕುಮಾರ್ 1/23)
ಬೆಂಗಳೂರು ಬ್ಲಾಸ್ಟರ್ಸ್ 162/8 (ಚೇತನ್ ಎಲ್‌ಆರ್ 51, ಅನಿರುದ್ಧ ಜೋಶಿ 18, ಕ್ರಾಂತಿ ಕುಮಾರ್ ಔಟಾಗದೆ 39, ವಿದ್ಯಾಧರ್ ಪಾಟೀಲ್ 3/19, ಕೆ ಗೌತಮ್ 2/23)