
Cricket News ; ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಂಭ್ರಮದ ಮೆರವಣಿಗೆ ಮೇಲೆ ಕಲ್ಲು ತೂರಾಟ; ಗಲಾಟೆ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂದೋರ್ ಜಿಲ್ಲಾಧಿಕಾರಿ ಆಶಿಷ್ ಸಿಂಗ್, "ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ಘಟನೆಯು ಹೇಗೆ ನಡೆಯಿತು ಎಂದು ತನಿಖೆ ನಡೆಸುತ್ತೇವೆ. ಪ್ರಸ್ತುತ, ನಾವು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದೇವೆ ," ಎಂದು ಹೇಳಿದ್ದಾರೆ.
ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಯುವಕರು ನಡೆಸುತ್ತಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಹೋನ್ನಲ್ಲಿ ಭಾನುವಾರ (ಮಾರ್ಚ್ 9) ನಡೆದಿದೆ. ಗೆಲುವು ಸಂಭ್ರಮಿಸಲು ಹೊರಟಿದ್ದ ರ್‍ಯಾಲಿಯ ಮೇಲೆ ಮಸೀದಿಯೊಂದರ ಬಳಿ ಕಲ್ಲು ತೂರಾಟ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಹೋ ನಗರವು ಇಂದೋರ್ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂದೋರ್ ಜಿಲ್ಲಾಧಿಕಾರಿ ಆಶಿಷ್ ಸಿಂಗ್, "ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ಘಟನೆಯು ಹೇಗೆ ನಡೆಯಿತು ಎಂಬುದನ್ನು ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುತ್ತೇವೆ. , ನಾವು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದೇವೆ," ಎಂದು ಹೇಳಿದ್ದಾರೆ.
ಸಂಘರ್ಷಕ್ಕೆ ಕಾರಣವೇನು?
ಈ ಹಿಂಸಾಚಾರವು ಎರಡು ಗುಂಪುಗಳ ನಡುವಿನ ವಾಗ್ವಾದದಿಂದ ಪ್ರಾರಂಭಗೊಂಡಿತು ಹಾಗೂ ಬಳಿಕ ಕಲ್ಲು ತೂರಾಟ ನಡೆದು ಮತ್ತು ಬೆಂಕಿ ಹಚ್ಚಲಾಯಿತು ಎಂದುಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿ) ನಿಮಿಷ್ ಅಗರ್ವಾಲ್, ಸುದ್ದಿಸಂಸ್ಥೆಗೆ ನೀಡಿದ ಮಾಹಿತಿ ಪ್ರಕಾರ, "ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವನ್ನು ಸಂಭ್ರಮಿಸಲು ಮಹೋನಲ್ಲಿ ಒಂದು ರ್‍ಯಾಲಿ ಹೊರಟಿತ್ತು. ಈ ಸಮಯದಲ್ಲಿ ಕೆಲವು ಜನರು ಪರಸ್ಪರ ವಾಗ್ವಾದ ಶುರು ಮಾಡಿದರು. ಮಾತಿಗೆ ಮಾತು ಬೆಳೆದು ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ವೇಳೆ ಬೆಂಕಿ ಹಚ್ಚುವ ಕೆಲಸ ನಡೆಯಿತು,'' ಎಂದು ಅವರು ಹೇಳಿದ್ದಾರೆ.
ಅನಿರೀಕ್ಷಿತ ಹಿಂಸಾಚಾರ
ಘಟನೆ ವೇಳೆ ಕೆಲವು ವಾಹನಗಳಿಗೆ ಹಾನಿಯಾಗಿದೆ ಮತ್ತು ಬೆಂಕಿ ಹಚ್ಚಿದ ವರದಿಗಳೂ ಬಂದಿವೆ. ಈ ಸಂಘರ್ಷದ ನಂತರ ಮಹೋನಿನ ಹಲವಾರು ಪ್ರದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕ್ರಿಕೆಟ್ ಅಭಿಮಾನಿಗಳ ರ್‍ಯಾಲಿ ಜಾಮಾ ಮಸೀದಿ ಹತ್ತಿರ ತಲುಪಿದಾಗ ಗುಂಪೊಂದು ಅವರ ಮೇಲೆ ಕಲ್ಲು ತೂರಾಟ ಆರಂಭಿಸಿದೆ. ಭಯಗೊಂಡ ಕೆಲವು ಯುವಕರು ತಮ್ಮ ಬೈಕುಗಳನ್ನು ಅಲ್ಲೇ ಬಿಟ್ಟು ಓಡಿಹೋದರು. ನಂತರ, ಕೆಲವರು ಬಿಟ್ಟು ಹೋದ ಬೈಕುಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಪರಿಸ್ಥಿತಿ ಹದಗೆಟ್ಟಿತು. ಸ್ಥಳೀಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು ಎಂದು ಸ್ಥಳೀಯರು ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ: ಪೊಲೀಸ್ ಇಲಾಖೆ
ಪೊಲೀಸ್ ಮೂಲಗಳ ಪ್ರಕಾರ, ಇಂದೋರ್ ಗ್ರಾಮೀಣ ಪೊಲೀಸ್ ಅಧೀಕ್ಷಕ ಹಿತಿಕಾ ವಾಸಲ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ತನಿಖೆ ನಡೆಸಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಹಿಂಸಾಚಾರ ಹೆಚ್ಚಾಗದಂತೆ ನೋಡಿಕೊಳ್ಳಲು ಆ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಉಪ ಮಹಾನಿರ್ದೇಶಕ ಅಗರವಾಲ್ ಅವರು, "ಸಂಘರ್ಷದ ಬಗ್ಗೆ ಮಾಹಿತಿ ದೊರಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಈಗ ಭದ್ರತಾ ಪಡೆಗಳು ಅಲ್ಲಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ," ಎಂದು ತಿಳಿಸಿದ್ದಾರೆ.