ಗ್ರೆಗ್ ಬಾರ್ಕ್ಲೇ ಬಳಿಕ ಐಸಿಸಿ ಅಧ್ಯಕ್ಷರಾಗಿ ಜಯ್ ಷಾ ಆಯ್ಕೆ ಬಹುತೇಕ ಖಚಿತ
ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, ಮೂರನೇ ಅವಧಿಗೆ ಸ್ಪರ್ಧಿಸಲು ಉದ್ದೇಶಿಸಿಲ್ಲ ಎಂದು ಐಸಿಸಿ ನಿರ್ದೇಶಕರಿಗೆ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಷಾ ಅವರು ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ. ಅವರು ಮೂರನೇ ಅವಧಿಯಿಂದ ಹೊರಗುಳಿಯುವುದಾಗಿ ಮಂಗಳವಾರ ಹೇಳಿದ್ದಾರೆ. ಜಯ್ ಷಾ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿದ ನಂತರ ಬಾರ್ಕ್ಲೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಜಯ್ ಷಾ ಅವರಿಗೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ನ ಕ್ರಿಕೆಟ್ ಮಂಡಳಿಗಳ ಬೆಂಬಲವಿದೆ. ಆದ್ದರಿಂದ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನ.
ಈ ಹಿಂದೆ ನಾಲ್ವರು ಭಾರತೀಯರು, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್, ಐಸಿಸಿಯ ಮುಖ್ಯಸ್ಥರಾಗಿದ್ದರು.
ಬಾರ್ಕ್ಲೇ ಸ್ಪರ್ಧಿಸುವುದಿಲ್ಲ
ಐಸಿಸಿ ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಅರ್ಹರಾಗಿರುತ್ತಾರೆ. ನ್ಯೂಜಿಲೆಂಡ್ ಮೂಲದ ವಕೀಲ ಗ್ರೆಗ್ ಬಾರ್ಕ್ಲೇ, ಇದುವರೆಗೆ ನಾಲ್ಕು ವರ್ಷ ಪೂರೈಸಿದ್ದಾರೆ. ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲ. ನವೆಂಬರ್ ಅಂತ್ಯದಲ್ಲಿ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದು ಮಂಡಳಿಗೆ ದೃಢಪಡಿಸಿದ್ದಾರೆ. ನವೆಂಬರ್ 2020 ರಲ್ಲಿ ಅವರನ್ನು ಸ್ವತಂತ್ರ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ಅವರು 2022 ರಲ್ಲಿ ಮರು ಆಯ್ಕೆಯಾದರು,ʼ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಐಸಿಸಿ ನಿಯಮಗಳ ಪ್ರಕಾರ, ಅಧ್ಯಕ್ಷರ ಚುನಾವಣೆ 16 ಮತಗಳನ್ನು ಒಳಗೊಂಡಿರಲಿದ್ದು, ವಿಜೇತರಿಗೆ ಒಂಬತ್ತು ಮತಗಳ ಸರಳ ಬಹುಮತ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಮೂರನೇ ಎರಡರಷ್ಟು ಬಹುಮತ ಹೊಂದಿರಬೇಕಿತ್ತು. ಆಗಸ್ಟ್ 27 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಡಿಸೆಂಬರ್ 1ರಂದು ಚುನಾವಣೆ ನಡೆಯುತ್ತದೆ.
ಪ್ರಭಾವಶಾಲಿ
ಜಯ್ ಷಾ ಐಸಿಸಿ ಮಂಡಳಿಯಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗಿದೆ. ಅವರು ಈಗ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರ(ಎಫ್ ಅಂಡ್ ಸಿಎ)ಗಳ ಉಪ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ಉಳಿದಿದೆ.
ಸುಪ್ರೀಂ ಕೋರ್ಟ್ ಅನುಮೋದಿಸಿದ ಬಿಸಿಸಿಐ ಸಂವಿಧಾನದ ಪ್ರಕಾರ, ಪದಾಧಿಕಾರಿಯೊಬ್ಬರು ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ ಒಂಬತ್ತು ವರ್ಷ ಮತ್ತು ಬಿಸಿಸಿಐನಲ್ಲಿ ಒಂಬತ್ತು ವರ್ಷ ಸೇರಿದಂತೆ 18 ವರ್ಷ ಕಾಲ ಅಧಿಕಾರದಲ್ಲಿ ಇರಬಹುದು. ಕಾರ್ಯದರ್ಶಿ ಅಧಿಕಾರಾವಧಿ ಅಂತ್ಯ ಕ್ಕೆ ಒಂದು ವರ್ಷ ಬಾಕಿ ಇರುವಾಗಲೇ ಷಾ, ಐಸಿಸಿಗೆ ತೆರಳಲು ನಿರ್ಧರಿಸಿದರೆ, ಅವರಿಗೆ ಬಿಸಿಸಿಐನಲ್ಲಿ ನಾಲ್ಕು ವರ್ಷ ಉಳಿಯಲಿದೆ.
ಜಯ್ ಷಾ(35) ಆಯ್ಕೆಯಾದರೆ, ಅವರು ಅತ್ಯಂತ ಕಿರಿಯ ಐಸಿಸಿ ಅಧ್ಯಕ್ಷರಾಗುತ್ತಾರೆ.