Asia Cup 2025 : ಭಾರತ- ಪಾಕ್ ಆಟಗಾರರ ನಡುವೆ ಮೈದಾನದಲ್ಲಿ ಕದನ; ಐಸಿಸಿಗೆ ದೂರು
x

Asia Cup 2025 : ಭಾರತ- ಪಾಕ್ ಆಟಗಾರರ ನಡುವೆ ಮೈದಾನದಲ್ಲಿ ಕದನ; ಐಸಿಸಿಗೆ ದೂರು

ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ, ಪಿಸಿಬಿ ಮುಖ್ಯಸ್ಥರೂ ಹಾಗೂ ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರು 'X' ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ


ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಮೈದಾನದೊಳಗಿನ ಪೈಪೋಟಿ ಈಗ ಮೈದಾನದಾಚೆಗೂ ವ್ಯಾಪಿಸಿದೆ. ಆಟಗಾರರ 'ಪ್ರಚೋದನಕಾರಿ ವರ್ತನೆ' ಮತ್ತು 'ರಾಜಕೀಯ ಹೇಳಿಕೆ'ಗಳ ಕುರಿತು ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೆಟ್ಟಿಲೇರಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಸೆಪ್ಟೆಂಬರ್ 21ರಂದು ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಪಾಕ್ ಆಟಗಾರರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಧಿಕೃತ ದೂರು ಸಲ್ಲಿಸಿದೆ. ಪಾಕ್ ವೇಗಿ ಹ್ಯಾರಿಸ್ ರೌಫ್, ಭಾರತೀಯ ಅಭಿಮಾನಿಗಳು 'ಕೊಹ್ಲಿ, ಕೊಹ್ಲಿ' ಎಂದು ಕೂಗಿದಾಗ ವಿಮಾನ ಪತನವನ್ನು ಅಣಕಿಸುವಂತೆ ಸಂಜ್ಞೆ ಮಾಡಿ ಭಾರತೀಯ ಸೇನಾ ಕಾರ್ಯಾಚರಣೆಯನ್ನು ಗೇಲಿ ಮಾಡಿದ್ದರು. ಅಷ್ಟೇ ಅಲ್ಲದೆ, ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರತ್ತ ನಿಂದನಾತ್ಮಕ ಪದಗಳನ್ನು ಬಳಸಿದ್ದರು. ಇದೇ ಪಂದ್ಯದಲ್ಲಿ, ಅರ್ಧಶತಕ ಗಳಿಸಿದ ನಂತರ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ತಮ್ಮ ಬ್ಯಾಟ್‌ನಿಂದ 'ಗನ್ ಫೈರಿಂಗ್' ಮಾದರಿಯಲ್ಲಿ ಸಂಭ್ರಮಿಸಿದ್ದರು. ಈ ಎರಡೂ ಘಟನೆಗಳನ್ನು ಪ್ರಚೋದನಕಾರಿ ಎಂದು ಪರಿಗಣಿಸಿ ಬಿಸಿಸಿಐ ಐಸಿಸಿಗೆ ದೂರು ನೀಡಿದೆ.

ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಕೂಡ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ದೂರು ದಾಖಲಿಸಿದೆ. ಟೂರ್ನಿಯ ಆರಂಭದಲ್ಲಿ ನಡೆದ ಪಂದ್ಯದ ನಂತರ, ಸೂರ್ಯಕುಮಾರ್ ಅವರು ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಯ ಸಂತ್ರಸ್ತರ ಪರ ಸಂತಾಪ ಸೂಚಿಸಿ, 'ಆಪರೇಷನ್ ಸಿಂಧೂರ್'ನಲ್ಲಿ ಭಾಗಿಯಾದ ಭಾರತೀಯ ಸಶಸ್ತ್ರ ಪಡೆಗಳಿಗೆ ತಂಡದ ಗೆಲುವನ್ನು ಅರ್ಪಿಸಿದ್ದರು. ಸೂರ್ಯಕುಮಾರ್ ಅವರ ಈ ಹೇಳಿಕೆಗಳು 'ರಾಜಕೀಯ ಪ್ರೇರಿತ'ವಾಗಿದ್ದು, ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಪಿಸಿಬಿ ತನ್ನ ದೂರಿನಲ್ಲಿ ಆರೋಪಿಸಿದೆ.

ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ, ಪಿಸಿಬಿ ಮುಖ್ಯಸ್ಥರೂ ಹಾಗೂ ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರು 'X' ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಹ್ಯಾರಿಸ್ ರೌಫ್ ಮಾಡಿದಂತೆಯೇ ವಿಮಾನ ಪತನದ ಸಂಜ್ಞೆ ಮಾಡುತ್ತಿರುವುದು ಕಂಡುಬಂದಿದೆ. ಇದು ಪರೋಕ್ಷವಾಗಿ ರೌಫ್ ವರ್ತನೆಯನ್ನು ಸಮರ್ಥಿಸಿದಂತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಐಸಿಸಿ ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಗಳನ್ನು ಆಟಗಾರರು ನಿರಾಕರಿಸಿದರೆ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಆರೋಪ ಸಾಬೀತಾದರೆ, ಆಟಗಾರರು ಐಸಿಸಿ ನೀತಿ ಸಂಹಿತೆಯ ಪ್ರಕಾರ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ವಿವಾದಗಳ ನಡುವೆಯೇ, ಪಾಕಿಸ್ತಾನ ತಂಡವು ಇಂದು ಬಾಂಗ್ಲಾದೇಶವನ್ನು ಸೋಲಿಸಿದರೆ, ಫೈನಲ್‌ನಲ್ಲಿ ಮತ್ತೊಮ್ಮೆ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ. ಇದು ಟೂರ್ನಿಯ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read More
Next Story