ಟಿ20: ಸೂಪರ್ ಓವರ್ ನಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ, 3-0ರಿಂದ ಸರಣಿ ಕೈವಶ
x

ಟಿ20: ಸೂಪರ್ ಓವರ್ ನಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ, 3-0ರಿಂದ ಸರಣಿ ಕೈವಶ

ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರ ಎಸೆತಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಉತ್ತಮ ಸ್ಥಾನದಲ್ಲಿದ್ದ ಶ್ರೀಲಂಕಾ, ವಿವರಿಸಲಾಗದ ಕುಸಿತಕ್ಕೆ ಸಿಲುಕಿತು.


ಪಲ್ಲೆಕೆಲೆಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತವು ಸೂಪರ್ ಓವರ್ ಮೂಲಕ ಶ್ರೀಲಂಕಾವನ್ನು ಸೋಲಿಸಿ, 3-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.

ಕುಸಾಲ್ ಪೆರೇರಾ (46, 34 ಎಸೆತ) ಮತ್ತು ಕುಸಾಲ್ ಮೆಂಡಿಸ್ (43, 41ಎಸೆತ) ಶ್ರೀಲಂಕಾದ 138 ರನ್‌ಗಳ ಗುರಿಗೆ ಮಾರ್ಗದರ್ಶನ ನೀಡಿದರು. ಆದರೆ, ತಂಡ ಇನ್ನಿಂಗ್ಸ್ ಕೊನೆಯಲ್ಲಿ ಪರಿಚಿತ ಶೈಲಿಯಲ್ಲಿ ಕುಸಿಯಿತು. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಗೆ 137 ರನ್‌ ಮಾಡಿತು. ಹೀಗಾಗಿ, ಆಟ ಸೂಪರ್ ಓವರ್‌ಗೆ ತೆರೆದುಕೊಂಡಿತು.

ಭಾರತದ ಪರ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಭಾರತಕ್ಕೆ ಸೂಪರ್ ಓವರ್‌ನಲ್ಲಿ ಗೆಲ್ಲಲು ಕೇವಲ ಮೂರು ರನ್‌ ಅಗತ್ಯವಿತ್ತು.

ಇದಕ್ಕೂ ಮೊದಲು, ಶ್ರೀಲಂಕಾ ಬೌಲರ್‌ಗಳು ಭಾರತವನ್ನು ಸಾಧಾರಣ 137/9ಕ್ಕೆ ನಿರ್ಬಂಧಿಸಿದರು. ಸ್ಪಿನ್ನರ್‌ಗಳಾದ ವನಿಂದು ಹಸರಂಗ ಮತ್ತು ಮಹೇಶ್ ತೀಕ್ಷಣ ಅವರು ಆತಿಥೇಯರ ಬೌಲಿಂಗ್ ಅನ್ನು ಮುನ್ನಡೆಸಿ, ಇಬ್ಬರ ನಡುವೆ ಐದು ವಿಕೆಟ್‌ ಹಂಚಿಕೊಂಡರು. ರಿಯಾನ್ ಪರಾಗ್ (26) ಜೊತೆಯಲ್ಲಿ ಶುಬ್‌ಮನ್ ಗಿಲ್ 39 ರನ್‌ ಗಳಿಸಿ, ಹೋರಾಟದ ಮನೋಭಾವ ಪ್ರದರ್ಶಿಸಿದರು.

ತಿರುವು ನೀಡಿದ ಬೌಲರ್‌ ಗಳು: ನಾಯಕ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರು ಶ್ರೀಲಂಕಾದ ವಿವರಿಸಲಾಗದ ಕುಸಿತಕ್ಕೆ ಕಾರಣರಾದರು. 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ, 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 110 ರನ್ ಗಳಿಸಿತು. ಆದರೆ, ಹಠಾತ್‌ ಕುಸಿದು, 8 ವಿಕೆಟ್‌ಗೆ 137 ರನ್‌ ಗಳಿಸಿತು. ಆತಿಥೇಯರು 4.5 ಓವರ್‌ಗಳಲ್ಲಿ 27 ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡರು.

ಸೂಪರ್ ಓವರ್: ಭಾರತೀಯರು ಸೂಪರ್ ಓವರ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ವಾಷಿಂಗ್ಟನ್ ಸುಂದರ್ ಕೇವಲ ಎರಡು ರನ್ ನೀಡಿ, ಎರಡು ವಿಕೆಟ್‌ಗಳನ್ನು ಪಡೆದರು. ಆನಂತರ ಸೂರ್ಯಕುಮಾರ್‌ ಮೊದಲ ಎಸೆತದಲ್ಲಿ ಸ್ವೀಪ್ ಶಾಟ್‌ನೊಂದಿಗೆ ಆಟವನ್ನು ಪೂರ್ಣಗೊಳಿಸಿದರು.

20ನೇ ಓವರ್‌ನಲ್ಲಿ ಆರು ರನ್‌ ಬೇಕಿದ್ದು, ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಬಂದ ಸೂರ್ಯಕುಮಾರ್‌, ತಮ್ಮ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಗಳಿಸಿದರು. ಲಂಕಾಗೆ 12 ಎಸೆತಗಳಲ್ಲಿ 9 ರನ್‌ ಬೇಕಿತ್ತು. ಆಗಮಿಸಿದ ರಿಂಕು ಸಿಂಗ್‌, ಕುಸಲ್ ಪೆರೇರಾ (46) ಸೇರಿದಂತೆ ಒಂದೆರಡು ವಿಕೆಟ್‌ ಕಬಳಿಸಿದರು.

ಪಂದ್ಯವು ಜೀವಂತ: 19ನೇ ಓವರಿನಲ್ಲಿ ಭಾರತ ಕೇವಲ ಮೂರು ರನ್‌ ನೀಡಿತು. ಖಲೀಲ್ ಅಹ್ಮದ್ 18ನೇ ಓವರಿನಲ್ಲಿ ಆರು ವೈಡ್‌ ಎಸೆದಿದ್ದರಿಂದ, ಪಂದ್ಯ ಇದ್ದಕ್ಕಿದ್ದಂತೆ ಜೀವ ತಳೆಯಿತು. ಆದರೆ ಕುಸಾಲ್ ಮೆಂಡಿಸ್ (43), ಪಾತುಮ್ ನಿಸ್ಸಾಂಕ (26) ಮತ್ತು ಪೆರೇರಾ (46) ಮೊದಲ ವಿಕೆಟಿಗೆ 58 ಮತ್ತು ಎರಡನೇ ವಿಕೆಟ್‌ಗೆ 52 ರನ್‌ ಕೂಡಿಸಿದರು.

ಮೊದಲ ಸರಣಿಯಲ್ಲೇ ಗೆಲುವು: ಸೂರ್ಯ ನಾಯಕನಾಗಿ ತಮ್ಮ ಮೊದಲ ಸರಣಿಯಲ್ಲಿ ಯಾವುದೇ ತಪ್ಪು ಮಾಡಲಿಲ್ಲ; ರಿಂಕು ಅವರನ್ನು 19 ನೇ ಓವರ್‌ನಲ್ಲಿ ಕರೆತಂದು, ಪೆರೇರಾ ಅವರನ್ನು ಔಟ್‌ ಮಾಡಿದರು.

ಇದಕ್ಕೂ ಮೊದಲು ಲಂಕಾ ಸ್ಪಿನ್ನರ್‌ಗಳು ಪುಟಿಯುತ್ತಿದ್ದ ಪಿಚ್‌ ನಲ್ಲಿ ಭಾರತೀಯ ಬ್ಯಾಟರ್‌ಗಳ ನಿದ್ದೆ ಕೆಡಿಸಿದರು. ಆದರೆ, ಸಂದರ್ಶಕರು 9 ವಿಕೆಟ್‌ಗೆ 137 ರನ್ ಗಳಿಸಿದರು.

ಫೀಲ್ಡಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡ ಮಥೀಶ ಪತಿರಾನ, ಬೌಲಿಂಗ್ ಮಾಡಲಿಲ್ಲ. ಆದರೆ, ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಅವರು ತಮ್ಮ ನಾಲ್ವರು ಸ್ಪಿನ್ನರ್‌ ಗಳ ಮೂಲಕ ರನ್ ಹರಿವು ನಿಯಂತ್ರಿಸಿದರು. ನಿಯಮಿತ ಅಂತರದಲ್ಲಿ ವಿಕೆಟ್ ಗಳು ಉರುಳಿದವು.

ಸಂಜು ಸ್ಯಾಮ್ಸನ್ ಶೂನ್ಯ ಸಾಧನೆ: ಭಾರತ ಒಂದು ಹಂತದಲ್ಲಿ 5 ವಿಕೆಟ್‌ಗೆ 48 ರನ್‌ ಗಳಿಸಿ ತತ್ತರಿಸಿತ್ತು. ಆರನೇ ವಿಕೆಟ್‌ಗೆ ಜೊತೆಯಾದ ಶುಭಮನ್ ಗಿಲ್ (37 ಎಸೆತಗಳಲ್ಲಿ 39) ಮತ್ತು ರಿಯಾನ್ ಪರಾಗ್ (18 ಎಸೆತಗಳಲ್ಲಿ 26), 54 ರನ್ ಸೇರಿಸಿದರು. ಸಂಜು ಸ್ಯಾಮ್ಸನ್ ಸತತ ಎರಡನೇ ಶೂನ್ಯ ಗಳಿಸಿದರು. ರಿಷಬ್ ಪಂತ್ ವಿಶ್ರಾಂತಿ ಪಡೆದಿದ್ದರಿಂದ, ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಕ್ಕಿತು. ಆದರೆ, ಚೊಚ್ಚಲ ಪಂದ್ಯ ಆಡಿದ ವೇಗಿ ಚಮಿಂದು ವಿಕ್ರಮಸಿಂಘೆ (4 ಓವರ್‌, 1/17) ಅವರನ್ನುಔಟ್‌ ಮಾಡಿದರು.

ಮುಖ್ಯಾಂಶಗಳು: ಮೊದಲ ಕನಸಿನ ಋತುವಿನ ನಂತರ ರಿಂಕು ಸಿಂಗ್ (1) ಸಾಧನೆ ಉತ್ತಮವಾಗಿಲ್ಲ. ಈ ಎಡಗೈ ಆಟಗಾರ ದೊಡ್ಡ ಹೊಡೆತಕ್ಕೆ ಹೋಗುವಾಗ, ಚೆಂಡಿನ ಉದ್ದವನ್ನು ಗ್ರಹಿಸದೆ ಔಟಾಗುತ್ತಿದ್ದಾರೆ.

ಲಂಕಾ ಪರ ಮಹೇಶ್ ತೀಕ್ಷಣ (3/28) ಅಮೋಘ ಬೌಲರ್ ಎನಿಸಿದರು. ಗಿಲ್ ತಮ್ಮ ಸ್ವಾಭಾವಿಕ ಆಕ್ರಮಣಕಾರಿ ಪ್ರವೃತ್ತಿಯನ್ನು ನಿಗ್ರಹಿಸಿದರೆ, ಪರಾಗ್ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ತೋರಿಸಿದರು. ಕವರ್‌ ನಲ್ಲಿ ಗಿಲ್‌ ಹೊಡೆದ ಬೌಂಡರಿ ಮತ್ತು ವನಿಂದು ಹಸರಂಗ ಬೌಲಿಂಗಿನಲ್ಲಿ ರಿಯಾನ್ ಹೊಡೆದ ಗರಿಷ್ಠ ದೂರದ ಹೊಡೆತ ಭಾರತೀಯ ಬ್ಯಾಟಿಂಗ್‌ನ ಪ್ರಮುಖ ಅಂಶವಾಗಿತ್ತು. ಈ ಇಬ್ಬರೂ ಅಂಥದ್ದೇ ಹೊಡೆತವನ್ನು ಪ್ರಯತ್ನಿಸಿ ಪತನಗೊಂಡರು.

Read More
Next Story