
ಮಾಜಿ ಆಟಗಾರ ಮತ್ತು ನಟ ಯೋಗರಾಜ್ ಸಿಂಗ್
"ಸಾಯಲು ಸಿದ್ಧನಿದ್ದೇನೆ": ಒಂಟಿತನದಿಂದ ಬೇಸತ್ತ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ನೋವಿನ ನುಡಿ
"ನನ್ನ ಇಡೀ ಯೌವನವನ್ನು, ಜೀವನವನ್ನು ಯಾರಿಗಾಗಿ ಮುಡಿಪಾಗಿಟ್ಟಿದ್ದೆನೋ, ಅವರೇ ನನ್ನನ್ನು ಬಿಟ್ಟು ಹೋಗಬಹುದೇ?" ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಮತ್ತು ನಟ ಯೋಗರಾಜ್ ಸಿಂಗ್ ಅವರು ತಮ್ಮ ಜೀವನದ ನೋವಿನ ಪುಟಗಳನ್ನು ತೆರೆದಿಟ್ಟಿದ್ದಾರೆ. ತಮ್ಮ 67ನೇ ವಯಸ್ಸಿನಲ್ಲಿ ಒಂಟಿತನದಿಂದ ಬಳಲುತ್ತಿದ್ದು, "ಊಟಕ್ಕಾಗಿ ಅಪರಿಚಿತರನ್ನು ಅವಲಂಬಿಸಿದ್ದೇನೆ, ನಾನು ಸಾಯಲು ಸಿದ್ಧನಿದ್ದೇನೆ" ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಮಗ ಯುವರಾಜ್ ಸಿಂಗ್ ಅವರ ಕ್ರಿಕೆಟ್ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ಯೋಗರಾಜ್, ಇಂದು ಏಕಾಂಗಿ ಜೀವನ ನಡೆಸುತ್ತಿರುವುದಾಗಿ ನೋವು ತೋಡಿಕೊಂಡಿದ್ದಾರೆ.
'ವಿಂಟೇಜ್ ಸ್ಟುಡಿಯೋ'ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಸಂಜೆಯಾದರೆ ಮನೆಯಲ್ಲಿ ಒಬ್ಬನೇ ಇರುತ್ತೇನೆ. ನನ್ನ ಜೊತೆ ಮಾತನಾಡಲು ಯಾರೂ ಇಲ್ಲ. ಊಟಕ್ಕಾಗಿ ಬೇರೆಯವರನ್ನು ಅವಲಂಬಿಸಿದ್ದೇನೆ. ಕೆಲವೊಮ್ಮೆ ಒಬ್ಬರು, ಇನ್ನು ಕೆಲವೊಮ್ಮೆ ಮತ್ತೊಬ್ಬರು ಊಟ ತಂದು ಕೊಡುತ್ತಾರೆ. ಹಸಿವಾದರೆ ಯಾರಾದರೂ ತಂದುಕೊಡುತ್ತಾರೆ. ಮನೆಯಲ್ಲಿ ಅಡುಗೆಯವರನ್ನು ಇಟ್ಟುಕೊಂಡಿದ್ದೆ, ಅವರು ತಮ್ಮ ಕೆಲಸ ಮುಗಿಸಿ ಹೊರಟುಹೋಗುತ್ತಾರೆ," ಎಂದು ತಮ್ಮ ದೈನಂದಿನ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.
"ನಾನು ನನ್ನ ತಾಯಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಎಲ್ಲರನ್ನೂ ಪ್ರೀತಿಸುತ್ತೇನೆ. ಆದರೆ, ನಾನು ಅವರಿಂದ ಏನನ್ನೂ ಕೇಳುವುದಿಲ್ಲ. ದೇವರು ಯಾವಾಗ ಬೇಕಾದರೂ ನನ್ನನ್ನು ಕರೆದುಕೊಂಡು ಹೋಗಬಹುದು, ನಾನು ಸಾಯಲು ಸಿದ್ಧನಿದ್ದೇನೆ. ನನ್ನ ಜೀವನ ಪೂರ್ಣಗೊಂಡಿದೆ. ನಾನು ದೇವರಿಗೆ ಕೃತಜ್ಞನಾಗಿದ್ದೇನೆ, ನಾನು ಪ್ರಾರ್ಥಿಸುತ್ತೇನೆ, ಅವನು ಕೊಡುತ್ತಲೇ ಇರುತ್ತಾನೆ," ಎಂದು ಯೋಗರಾಜ್ ಸಿಂಗ್ ಭಾವುಕರಾಗಿ ನುಡಿದಿದ್ದಾರೆ.
ಪತ್ನಿ-ಪುತ್ರ ದೂರವಾದದ್ದೇ ದೊಡ್ಡ ಆಘಾತ
ತಮ್ಮ ಪತ್ನಿ ಶಬನಮ್ ಕೌರ್ ಮತ್ತು ಮಗ ಯುವರಾಜ್ ಸಿಂಗ್ ತಮ್ಮನ್ನು ತೊರೆದು ಹೋದ ಘಟನೆಯು ತಮ್ಮ ಜೀವನದ "ಅತಿದೊಡ್ಡ ಆಘಾತ" ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ. "ಯುವಿ ಮತ್ತು ಅವನ ತಾಯಿ ನನ್ನನ್ನು ಬಿಟ್ಟು ಹೋದಾಗ, ನನಗೆ ದೊಡ್ಡ ಆಘಾತವಾಯಿತು. ನನ್ನ ಇಡೀ ಯೌವನವನ್ನು, ಜೀವನವನ್ನು ಯಾರಿಗಾಗಿ ಮುಡಿಪಾಗಿಟ್ಟಿದ್ದೆನೋ, ಅವರೇ ನನ್ನನ್ನು ಬಿಟ್ಟು ಹೋಗಬಹುದೇ?" ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
"ನಾನು ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದರೂ, ದೇವರು ನನಗೇಕೆ ಹೀಗೆ ಮಾಡುತ್ತಿದ್ದಾನೆ ಎಂದು ಅತ್ತಿದ್ದೇನೆ. ನಾನು ಕೆಲವು ತಪ್ಪುಗಳನ್ನು ಮಾಡಿರಬಹುದು, ಆದರೆ ನಾನು ಮುಗ್ಧ. ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೊನೆಗೆ ದೇವರೇ ನನ್ನನ್ನು ಆ ನೋವಿನ ಸಮುದ್ರದಿಂದ ಹೊರಗೆ ತಂದನು," ಎಂದು ಅವರು ಹೇಳಿದರು.
ಯೋಗರಾಜ್ ಸಿಂಗ್ ಅವರು ಭಾರತದ ಪರವಾಗಿ ಒಂದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್ ವೃತ್ತಿಜೀವನದ ನಂತರ, ಅವರು ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಮಗ ಯುವರಾಜ್ ಸಿಂಗ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ಕಠಿಣ ತರಬೇತಿ ನೀಡಿದ್ದ ಯೋಗರಾಜ್, ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗಿದ್ದರು.

