
ಬೆಂಗಳೂರಿನಲ್ಲಿ 'ವಿಶ್ವ ವಿಜೇತೆ'ಯರಿಗೆ ಅದ್ಧೂರಿ ಸ್ವಾಗತ: ಅಂಧರ ಮಹಿಳಾ ಕ್ರಿಕೆಟ್ ತಂಡಕ್ಕೆ ಜೈಕಾರ!
ತಂಡವು ಮೊದಲು ಚೆನ್ನೈಗೆ ಆಗಮಿಸಿತು. ಅಲ್ಲಿಯೂ ಆಟಗಾರರಿಗೆ ಭಾವನಾತ್ಮಕ ಸ್ವಾಗತ ಕೋರಲಾಯಿತು. ಚೆನ್ನೈನಲ್ಲಿ ಅಭಿಮಾನಿಗಳು ತೋರಿದ ಪ್ರೀತಿ ಆಟಗಾರರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು.
ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ 'ಚಿನ್ನದ ಹುಡುಗಿಯರು' ತಾಯ್ನಾಡಿಗೆ ಮರಳಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಸೋಮವಾರ (ನವೆಂಬರ್ 24) ಮಧ್ಯಾಹ್ನ ಶ್ರೀಲಂಕಾದಿಂದ ಚೆನ್ನೈ ಮೂಲಕ ಬೆಂಗಳೂರಿಗೆ ಆಗಮಿಸಿದ ತಂಡವನ್ನು ಅಭಿಮಾನಿಗಳು ಮತ್ತು ಅಧಿಕಾರಿಗಳು ಸಂಭ್ರಮದಿಂದ ಬರಮಾಡಿಕೊಂಡರು.
ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದ ಭಾರತೀಯ ತಂಡ, ಸೋಮವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (BIAL) ಬಂದಿಳಿಯಿತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತ್ರಿವರ್ಣ ಧ್ವಜ ಹಿಡಿದ ಅಭಿಮಾನಿಗಳು, "ಭಾರತ್ ಮಾತಾ ಕೀ ಜೈ" ಎಂಬ ಜಯಘೋಷಗಳೊಂದಿಗೆ ಚಾಂಪಿಯನ್ನರನ್ನು ಸ್ವಾಗತಿಸಿದರು. ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಆಟಗಾರರಿಗೆ ಹೂಗುಚ್ಛ ನೀಡಿ, ಚಪ್ಪಾಳೆ ತಟ್ಟಿ ಗೌರವಿಸಿದರು.
ಚೆನ್ನೈ ಟು ಬೆಂಗಳೂರು: ಸ್ವಾಗತದ ಮಹಾಪೂರ
ತಂಡವು ಮೊದಲು ಚೆನ್ನೈಗೆ ಆಗಮಿಸಿತು. ಅಲ್ಲಿಯೂ ಆಟಗಾರರಿಗೆ ಭಾವನಾತ್ಮಕ ಸ್ವಾಗತ ಕೋರಲಾಯಿತು. ಚೆನ್ನೈನಲ್ಲಿ ಅಭಿಮಾನಿಗಳು ತೋರಿದ ಪ್ರೀತಿ ಆಟಗಾರರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು. ಅಲ್ಲಿಂದ ಬೆಂಗಳೂರಿಗೆ ಬಂದಿಳಿದಾಗ ಸಂಭ್ರಮ ಮುಗಿಲುಮುಟ್ಟಿತ್ತು. ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (CABI) ಅಧ್ಯಕ್ಷ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ ಅವರ ನೇತೃತ್ವದ ತಂಡಕ್ಕೆ ತವರಿನ ಮಣ್ಣಿನ ಸ್ವಾಗತ ಅವಿಸ್ಮರಣೀಯವಾಗಿತ್ತು.
ರಾಜ್ಯ ಸರ್ಕಾರದಿಂದ ಆತ್ಮೀಯ ಸ್ವಾಗತ
ಬೆಂಗಳೂರಿಗೆ ಆಗಮಿಸಿದ ಕೂಡಲೇ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡಿತು. ಇದು ಕ್ರೀಡಾ ಕ್ಷೇತ್ರದಲ್ಲಿ ಒಳಗೊಳ್ಳುವಿಕೆಯನ್ನು (Inclusivity) ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಸಾಕ್ಷಿಯಾಯಿತು. ದೃಷ್ಟಿಚೇತನ ಮಹಿಳೆಯರ ಈ ಸಾಧನೆಗೆ ಸರ್ಕಾರ ನೀಡಿದ ಗೌರವ, ಮುಂದಿನ ಪೀಳಿಗೆಯ ಅಂಧ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ಈ ಐತಿಹಾಸಿಕ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನಗಳು ದೊರಕಿವೆ. ಚಿಂಟೆಲ್ಸ್ ಗ್ರೂಪ್ (ದೆಹಲಿ): ಆಟಗಾರ್ತಿಯರಿಗೆ ತಲಾ 1,00,000 ರೂಪಾಯಿ. ಚಿಪ್‌ಲಾಜಿಕ್ (ಲಂಡನ್): ತಲಾ 25,000 ಇಪ್ಪತ್ತೈದು ಸಾವಿರ ರೂ. ನೀಡಿದರು.
ಈ ಗೆಲುವು ಕೇವಲ ಒಂದು ಟ್ರೋಫಿಗಷ್ಟೇ ಸೀಮಿತವಾಗಿಲ್ಲ; ಇದು ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತದ ಬದ್ಧತೆಯನ್ನು ಜಗತ್ತಿಗೆ ಸಾರಿದೆ. ದೈಹಿಕ ಅಡಚಣೆಗಳು ಪ್ರತಿಭೆಗೆ ಎಂದಿಗೂ ಅಡ್ಡಿಯಾಗಲಾರವು ಎಂಬುದನ್ನು ಈ ವನಿತೆಯರು ಸಾಬೀತುಪಡಿಸಿದ್ದಾರೆ.

