
ದೊಡ್ಡ ಗಣೇಶ್ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್
ಗಣೇಶ್ ಅವರಿಗೆ ಒಂದು ವರ್ಷದ ಗುತ್ತಿಗೆ ನೀಡಲಾಗಿದೆ. ಕೀನ್ಯಾ ವಿಶ್ವಕಪ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡುವುದು ನನ್ನ ಮುಖ್ಯ ಗುರಿ ಎಂದು ಗಣೇಶ್ ಹೇಳಿದ್ದಾರೆ.
ಭಾರತ ತಂಡದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅವರು ಕೀನ್ಯಾ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕ್ರಿಕೆಟ್ ಕೀನ್ಯಾ ಮಂಗಳವಾರ (ಆಗಸ್ಟ್ 13) ನೈರೋಬಿಯ ಸಿಖ್ ಯೂನಿಯನ್ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಗಣೇಶ್(51) ಅವರನ್ನು ಕೋಚ್ ಎಂದು ನೇಮಕಗೊಳಿಸಿತು.
ʻಕೀನ್ಯಾಗೆ ಕೋಚ್ ಆಗುವುದು ಗೌರವದ ಸಂಗತಿʼ ಎಂದು ಗಣೇಶ್, ಎಕ್ಸ್ ನಲ್ಲಿ ಬರೆದಿದ್ದಾರೆ. ಗಣೇಶ್ ಭಾರತಕ್ಕಾಗಿ ನಾಲ್ಕು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಒಂದು ವರ್ಷ ಅವಧಿಗೆ ಗುತ್ತಿಗೆ ಪಡೆದಿರುವ ಗಣೇಶ್, ಕೀನ್ಯಾ ಏಕದಿನ ವಿಶ್ವಕಪ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡುವುದು ತಮ್ಮ ಮುಖ್ಯ ಗುರಿ ಎಂದು ಹೇಳಿದರು.
ʻಕೀನ್ಯಾ ವಿಶ್ವಕಪ್ ಆಡುವಂತೆ ಮಾಡುವುದು ನನ್ನ ಗುರಿ. 1996,1999, 2003 ಮತ್ತು 2011 ರಲ್ಲಿ ಕೀನ್ಯಾ ವಿಶ್ವಕಪ್‌ನಲ್ಲಿ ಆಡುವುದನ್ನು ನಾನು ನೋಡಿದ್ಧೇನೆ. ಕಳೆದ ಹತ್ತು ವರ್ಷಗಳಲ್ಲಿ ಏನಾಯಿತು ಎಂದು ನನಗೆ ಖಚಿತವಿಲ್ಲ. ಆದರೆ, ಈಗ ನನ್ನ ಕೆಲಸ ಕೀನ್ಯಾ ತಂಡವನ್ನು ಯಾವುದೇ ಬೆಲೆ ತೆತ್ತಾದರೂ ಅಲ್ಲಿಗೆ ಕೊಂಡೊಯ್ಯುವುದು,ʼ ಎಂದು ಗಣೇಶ್ ಹೇಳಿದರು.
ಒಂದು ದಿನದ ವಿಶ್ವಕಪ್‌ನಲ್ಲಿ ಕೀನ್ಯಾದ ಅತ್ಯುತ್ತಮ ಪ್ರದರ್ಶನ 2003 ರಲ್ಲಿ ಬಂದಿದ್ದು, ಸೆಮಿಫೈನಲ್ ತಲುಪಿದ್ದರು. ಆದರೆ, ಭಾರತಕ್ಕೆ ಸೋತಿತು. ಕೀನ್ಯಾದ ವಿಶ್ವಕಪ್ ಅರ್ಹತಾ ಅಭಿಯಾನ ಐಸಿಸಿ ಡಿವಿಷನ್ 2 ಚಾಲೆಂಜ್ ಲೀಗ್‌ನೊಂದಿಗೆ ಪ್ರಾರಂಭವಾಗುತ್ತದೆ.