
Champions Trophy: ಸೇಡು ತೀರಿಸಿಕೊಂಡ ಭಾರತ, ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್‌ಗೆ ಎಂಟ್ರಿ
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಆಸ್ಟ್ರೇಲಿಯವನ್ನು 264 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ವಿರಾಟ್ ಕೊಹ್ಲಿ ತಾವು 'ಚೇಸ್ ಮಾಸ್ಟರ್' ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದರು. ಮಂಗಳವಾರ (ಮಾರ್ಚ್ 4) ರಾತ್ರಿ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಮೊದಲ ಸೆಮಿಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಅಮೂಲ್ಯ ಅರ್ಧ ಶತಕ ಸಿಡಿಸಿ ಭಾರತವನ್ನು ಫೈನಲ್‌ಗೆ ಮುನ್ನಡೆಸಿದರು. ಈ ಮೂಲಕ 'ಮೆನ್ ಇನ್ ಬ್ಲ್ಯೂ' 2023ರ ವಿಶ್ವ ಕಪ್ ಸೋಲಿಗೆ ಸೇಡು ತೀರಿಸಿಕೊಂಡಿತು.
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಆಸ್ಟ್ರೇಲಿಯಾವನ್ನು 264 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಕೆ.ಎಲ್. ರಾಹುಲ್ ಪಂದ್ಯವನ್ನು ಅದ್ಭುತವಾಗಿ ಮುಗಿಸಿದರು. ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆದು ಸಂಭ್ರಮಿಸಿದರು.
ಭಾರತದ ಪರ ವಿರಾಟ್ ಕೊಹ್ಲಿ 84 ರನ್ ಗಳಿಸಿ ಮಿಂಚಿದರು. ಶತಕದತ್ತ ಸಾಗುತ್ತಿದ್ದ ಅವರು, ಭಾರತಕ್ಕೆ ಇನ್ನೂ 40 ರನ್ ಅಗತ್ಯವಿರುವಾಗ ವಿಕೆಟ್ ಬಿಟ್ಟುಕೊಟ್ಟರು. ಹೀಗಾಗಿ ಅವರ ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಬೇಸರಕ್ಕೆ ಒಳಗಾದರು.
ಭಾರತದ ಗೆಲುವಿನ ಹಾದಿ
250+ ಮೊತ್ತವನ್ನು ಚೇಸ್ ಮಾಡುವುದು ಸೆಮಿಫೈನಲ್ ಹಂತದಲ್ಲಿ ಸುಲಭವಲ್ಲ. ಆದರೂ, ಭಾರತ ಆ ಸಾಧನೆ ಮಾಡಿ ತೋರಿಸಿತು. ಶುಭಮನ್ ಗಿಲ್ (8) ಹೊರತುಪಡಿಸಿ ಭಾರತ ತಂಡದ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಕೊಡುಗೆ ನೀಡಿದರು. ಮೊದಲಿಗೆ ರೋಹಿತ್ ಶರ್ಮಾ 28 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ನಾಲ್ಕನೇ ವಿಕೆಟ್‌ಗೆ ನಿರ್ಣಾಯಕ ಜೊತೆಯಾಟ ಆಡಿದರು. ಈ ಜೋಡಿ 91 ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. 45 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಬಳಿಕ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಮಧ್ಯಮ ಕ್ರಮಾಂಕ
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಮೊದಲಿಗೆ ಅಕ್ಷರ್ ಪಟೇಲ್ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೆಎಲ್ ರಾಹುಲ್ 34 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 28 ರನ್ ಗಳಿಸಿದರು. ಆಸೀಸ್ ಪರ ನೇಥನ್ ಎಲ್ಲಿಸ್ ಹಾಗೂ ಆಡಂ ಝಾಂಪ ತಲಾ ಎರಡೆರಡು ವಿಕೆಟ್ ಪಡೆದರು.
14 ವರ್ಷಗಳ ಬಳಿಕ ಸಾಧನೆ
ಈ ಗೆಲುವಿನೊಂದಿಗೆ, ಭಾರತ 14 ವರ್ಷಗಳ ನಂತರ ಐಸಿಸಿ ನಾಕೌಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲುವು ಸಾಧಿಸಿತು. ಹಿಂದಿನ ಬಾರಿ ಭಾರತ 2011ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಗೆದ್ದಿತ್ತು.
ಭಾನುವಾರ (ಮಾರ್ಚ್ 9) ನಡೆಯಲಿರುವ ಫೈನಲ್‌ನಲ್ಲಿ, ಭಾರತ ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್ ವಿರುದ್ಧ ಆಡುವ ಸಾಧ್ಯತೆ ಇದೆ. ಎರಡನೇ ಸೆಮಿಫೈನಲ್ ಮಾರ್ಚ್ 5ರಂದು ಲಾಹೋರ್‌ನಲ್ಲಿ ನಡೆಯಲಿದೆ.
ಮ್ಯಾಕ್ಸ್‌ವೆಲ್ ನಿರ್ಲಕ್ಷ್ಯ
ಗ್ಲೆನ್ ಮ್ಯಾಕ್ಸ್‌ವೆಲ್ (6) ಬಂದಾಗ, ಆಸ್ಟ್ರೇಲಿಯಾ 198 ರನ್ ಬಾರಿಸಿ 5 ವಿಕೆಟ್ ಮಾತ್ರ ಕಳೆದುಕೊಂಡಿತ್ತು. ಇನ್ನೂ 13 ಓವರು ಉಳಿದಿದ್ದವು. ಈ ಹಂತದಲ್ಲಿ, ಮ್ಯಾಕ್ಸ್‌ವೆಲ್ ವೇಗವಾಗಿ ಆಟ ಆಡಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯಬಹುದಾಗಿತ್ತು. ಆದರೆ, ಅಕ್ಷರ್ ಪಟೇಲ್ ವಿರುದ್ಧ ಬಾಲಿಶ ಶಾಟ್ ಹೊಡೆಯಲು ಹೋಗಿ ಬೌಲ್ಡ್ ಆದರು.ಅಲೆಕ್ಸ್ ಕೇರಿ (61) ಕೊನೆಯ ಹಂತದಲ್ಲಿ ತಂಡವನ್ನು ಮುನ್ನಡೆಸಲು ಹೋರಾಡಿದರು. ಬೆನ್ ಡ್ವಾರ್ಶೂಸ್ ಜೊತೆ 34 ರನ್ ಜೊತೆಯಾಟ ನಡೆಸಿದರು. ಇದರಿಂದ ಆಸ್ಟ್ರೇಲಿಯಾ 250 ರನ್ ಗಡಿ ದಾಟಿತು. ಆದರೆ ಅವರು ಶ್ರೇಯಸ್ ಅಯ್ಯರ್ ಅವರ ಡೈರೆಕ್ಟ್ ಹಿಟ್ಗೆ ರನ್‌ಔಟ್ ಆದರು.
ನಿರೀಕ್ಷಿತ ಮೊತ್ತ ತಲುಪದ ಆಸಿಸ್
ಆಸ್ಟ್ರೇಲಿಯಾ ಆರಂಭಿಕ ಹಿನ್ನಡೆಗೆ ಒಳಗಾದರೂ ಸ್ಟೀವ್ ಸ್ಮಿತ್ (73) ಮತ್ತು ಅಲೆಕ್ಸ್ ಕೇರಿ (61) ಅರ್ಧ ಶತಕಗಳ ನೆರವಿನಿಂದ 264 ರನ್‌ಗಳ ಮೊತ್ತ ತಲುಪಿತು. ಆಸ್ಟ್ರೇಲಿಯಾ ನಾಯಕ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ ಪಿಚ್ನ ನೆರವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.
ಯಾಕೆಂದರೆ ಆಸ್ಟ್ರೇಲಿಯಾ ಆರಂಭಿಕ ರನ್ ಗಳಿಕೆ ವೇಗ 300+ ಮೊತ್ತ ತಲುಪುವ ಅವಕಾಶ ಸೃಷ್ಟಿಸಿತ್ತು. ಆದರೆ, ಕೊನೇ ಹಂತದಲ್ಲಿ ವಿಕೆಟ್ಗಳನ್ನು ಸತತವಾಗಿ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಆಲ್ಔಟ್ ಆಯಿತು.
ಟ್ರಾವಿಸ್ ಹೆಡ್ (39) ಅಬ್ಬರದ ಆಟವಾಡಿದರು. ಆದರೆ, ಆ ರನ್ಗಳಿಗೂ ಅವರು ಸಾಕಷ್ಟು ಅದೃಷ್ಟ ಮಾಡಿದ್ದರು. ಶಮಿಯ ಬೌಲಿಂಗ್‌ನಲ್ಲಿ ಕ್ಯಾಚ್ ಜೀವದಾನ ಪಡೆದರು. ಒಂದು ರನ್‌ಔಟ್ ಆಗುವ ಅಪಾಯದಿಂದ ಪಾರಾದರು. ಸಣ್ಣ ಅಂತರದಲ್ಲಿ ಚೆಂಡುಗಳು ಅವರ ಸ್ಟಂಪ್ ಪಕ್ಕದಲ್ಲಿಯೇ ಹಾದು ಹೋದವು. ಆದರೆ, ವರುಣ್ ಚಕ್ರವರ್ತಿಯ ಎಸೆತಕ್ಕೆ ದೊಡ್ಡ ಹೊಡೆತ ಬಾರಿಸಲು ಮುಂದಾಗಿ ಶುಭ್‌ಮನ್ ಗಿಲ್‌ಗೆ ಕ್ಯಾಚ್ ಕೊಟ್ಟರು.
ಮಾರ್ನಸ್ ಲಾಬುಷೇನ್ (19) ಜಡೇಜಾ ಅವರ ನೇರ ಎಸೆತಕ್ಕೆ ಎಲ್‌ಬಿಡಬ್ಲ್ಯೂ ಆದರು. ಜೋಶ್ ಇಂಗ್ಲಿಸ್ (12) ಜಡೇಜಾ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದರು. ಸ್ಟೀವ್ ಸ್ಮಿತ್ ಶಮಿಯ ಎಸೆತಕ್ಕೆ ಬೌಲ್ಡ್ ಆದರು.