
ದುಬಾರಿ ಕಾರ್ಟಿಯರ್ ವಾಚ್ ಲೆಕ್ಕ ಡಿಕೆಶಿಯ ಚುನಾವಣಾ ಅಫಿಡವಿಟ್‌ನಲ್ಲಿ ಇಲ್ಲ; ಛಲವಾದಿ ಆರೋಪ
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿತ್ತು.
ರಾಜ್ಯ ರಾಜಕೀಯದಲ್ಲಿ 'ವಾಚ್' ಸದ್ದು ಮತ್ತೆ ಜೋರಾಗಿದೆ. ಹಿಂದೆ ಸಿದ್ದರಾಮಯ್ಯ ಅವರ 'ಹುಬ್ಲೋ' ವಾಚ್ ವಿವಾದ ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿಗಳ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರಿಸಿದ್ದ ದುಬಾರಿ ಬೆಲೆಯ ಸ್ಯಾಂಟೋಸ್ ಕಾರ್ಟಿಯರ್ (Cartier) ವಾಚ್ ವಿವಾದದ ಕೇಂದ್ರಬಿಂದುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ತಿರುವು ನೀಡಿದ್ದಾರೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, "ನಾನು ಈ ವಾಚ್ ಅನ್ನು ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದ್ದೇನೆ ಮತ್ತು ಇದರ ವಿವರಗಳನ್ನು ನನ್ನ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಣೆ ಮಾಡಿದ್ದೇನೆ," ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದರು. ಆದರೆ, ಇದೀಗ ಡಿಕೆಶಿ ಅವರ ಈ ಹೇಳಿಕೆ ಸುಳ್ಳು ಎಂದು ಬಿಜೆಪಿ ಆರೋಪಿಸಿದೆ.
ಅಫಿಡವಿಟ್ ಮುಂದಿಟ್ಟು 'ಸುಳ್ಳು' ಎಂದ ಛಲವಾದಿ
ಗುರುವಾರ ನಡೆದ ಬಿಜೆಪಿಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಪ್ರದರ್ಶಿಸಿದರು. "ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ ಸುಳ್ಳು ಹೇಳಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಖರೀದಿಸಿದೆ ಎಂದು ಹೇಳುತ್ತಿರುವ 'ಸ್ಯಾಂಟೋಸ್ ಕಾರ್ಟಿಯರ್' ವಾಚ್‌ಗೂ, ಅವರು ಅಫಿಡವಿಟ್‌ನಲ್ಲಿ ಘೋಷಿಸಿರುವುದಕ್ಕೂ ತಾಳೆಯಾಗುತ್ತಿಲ್ಲ," ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ಲೆಕ್ಕ ಕೊಡಬೇಕು
ದಾಖಲೆಗಳನ್ನು ಪ್ರದರ್ಶಿಸುತ್ತಾ ವಾಗ್ದಾಳಿ ನಡೆಸಿದ ನಾರಾಯಣಸ್ವಾಮಿ, "ಅಫಿಡವಿಟ್‌ನಲ್ಲಿ ರೋಲೆಕ್ಸ್ ಸೇರಿದಂತೆ ಬೇರೆ ವಾಚ್‌ಗಳ ಉಲ್ಲೇಖವಿದೆಯೇ ಹೊರತು, ಈ ನಿರ್ದಿಷ್ಟ ಸ್ಯಾಂಟೋಸ್ ಕಾರ್ಟಿಯರ್ ವಾಚ್ ಎಲ್ಲೂ ಕಾಣಿಸುತ್ತಿಲ್ಲ. ಹಾಗಾದರೆ ಇದು ಎಲ್ಲಿಂದ ಬಂತು? ಅಫಿಡವಿಟ್‌ನಲ್ಲಿ ಇಲ್ಲದ ಆಸ್ತಿ ನಿಮ್ಮ ಕೈಗೆ ಹೇಗೆ ಬಂತು? ಇದು ಕದ್ದ ಮಾಲಾ (ಕಳ್ಳತನದ ಸರಕು) ಅಥವಾ ಗಿಫ್ಟ್ ಬಂದಿದ್ದಾ? ಎಂಬುದನ್ನು ಡಿ.ಕೆ. ಶಿವಕುಮಾರ್ ಅವರೇ ಸ್ಪಷ್ಟಪಡಿಸಬೇಕು," ಎಂದು ಆಗ್ರಹಿಸಿದರು.
"ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮುಚ್ಚಿಡುವುದು ಅಪರಾಧವಾಗುತ್ತದೆ. ನಿನ್ನೆ ಅಷ್ಟು ಧೈರ್ಯವಾಗಿ ಅಫಿಡವಿಟ್‌ನಲ್ಲಿದೆ ಎಂದು ಹೇಳಿದ್ದವರು, ಈಗ ಜನತೆಗೆ ಉತ್ತರ ಕೊಡಬೇಕು. ರಾಜ್ಯದ ಉಪಮುಖ್ಯಮಂತ್ರಿಯಾದವರು ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯೇ?" ಎಂದು ಅವರು ಪ್ರಶ್ನಿಸಿದರು.
ಮುಂದಿನ ವಾರ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ವಾಚ್ ಪ್ರಕರಣವನ್ನು ಬಿಜೆಪಿ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಮುನ್ಸೂಚನೆ ನೀಡಿದೆ. ಈಗಾಗಲೇ ಮುಡಾ, ವಾಲ್ಮೀಕಿ ಹಗರಣಗಳ ಜೊತೆಗೆ ಈಗ 'ವಾಚ್ ಗೇಟ್' ಕೂಡ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ನಾಯಕರಿಗೆ ಮುಜುಗರ ತರುವ ಸಾಧ್ಯತೆಯಿದೆ.
ಸಿಎಂ ಸಿದ್ದರಾಮಯ್ಯ ಅವರ ಹುಬ್ಲೋ ವಾಚ್ ಪ್ರಕರಣದ ನಂತರ, ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸ್ಯಾಂಟೋಸ್ ಕಾರ್ಟಿಯರ್ ವಾಚ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಕೆಶಿ ಇದಕ್ಕೆ ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

