IPL 2024 | ಪ್ಲೇ ಆಫ್‌ ಕನಸು ಕಾಣುತ್ತಿರುವ ಆರ್‌ಸಿಬಿಗೆ ಆಘಾತ: ತಂಡ ತೊರೆದ ವಿಲ್ ಜ್ಯಾಕ್ಸ್
x

IPL 2024 | ಪ್ಲೇ ಆಫ್‌ ಕನಸು ಕಾಣುತ್ತಿರುವ ಆರ್‌ಸಿಬಿಗೆ ಆಘಾತ: ತಂಡ ತೊರೆದ ವಿಲ್ ಜ್ಯಾಕ್ಸ್


ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೇಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಆರಂಭದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿತ್ತು. ಆ ಬಳಿಕ ಐದು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಸದ್ಯ ಆರ್‌ಸಿಬಿ ಪ್ಲೇ ಆಫ್ ಕನಸು ಕಾಣುತ್ತಿದೆ.

ಪ್ಲೇಆಫ್‌ ಪ್ರವೇಶಿಸಲು ಆರ್‌ಸಿಬಿ ತಂಡ ಶನಿವಾರ ನಡೆಯಲಿರುವ ಸಿಎಸ್‌ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಬೃಹತ್ ಗೆಲುವು ಪಡೆಯಬೇಕಿದೆ, ಆಗ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಪ್ಲೇಯಿಂಗ್ 11 ಅದ್ಭುತವಾಗಿ ಸಿದ್ದಗೊಂಡು ಯಶಸ್ಸು ಕಂಡಿದೆ. ಆದರೆ ಮುಂದಿನ ಮಹತ್ವದ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.

ಆರ್‌ಸಿಬಿ ತಂಡದ ಪ್ರಮುಖ ಸ್ಫೋಟಕ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ತಂಡವನ್ನು ತೊರೆದಿದ್ದಾರೆ. ಅವರು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ, ಇದು ನಿಜಕ್ಕೂ ತಂಡಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಆರ್‌ಸಿಬಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.‌


ವಿಶ್ವಕಪ್ ಆಡಲು ವಿಲ್ ಜ್ಯಾಕ್ಸ್ ತವರಿಗೆ

ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು ಸಿದ್ಧತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ಮರಳಿ ತಮ್ಮ ದೇಶಕ್ಕೆ ತೆರಳಿದ್ದಾರೆ. ರೀಸ್ ಟೋಪ್ಲೆ ತಂಡವನ್ನು ತೊರೆಯುವುದು ತಂಡದ ಮೇಲೆ ಪರಿಣಾಮ ಬೀರದೇ ಇದ್ದರೂ, ವಿಲ್ ಜ್ಯಾಕ್ಸ್ ಆಡದೇ ಇರುವುದು ಮಾತ್ರ ತಂಡಕ್ಕೆ ಹಿನ್ನಡೆಯಾಗಲಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸುತ್ತಿದ್ದ ಅವರು, ಈ ಬಾರಿ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಬೌಲಿಂಗ್‌ನಲ್ಲಿ ಕೂಡ ಗಮನಾರ್ಹ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಪ್ರಮುಖ ಆಟಗಾರರಾಗಿದ್ದಾರೆ.

ವಿಲ್ ಜ್ಯಾಕ್ಸ್ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅವರ ಈ ಸ್ಪೋಟಕ ಬ್ಯಾಟಿಂಗ್‌ ಆರ್ ಸಿಬಿಗೆ ದೊಡ್ಡ ಗೆಲುವು ತಂದುಕೊಟ್ಟಿತ್ತು. ರನ್‌ರೇಟ್ ವಿಚಾರದಲ್ಲಿ ಇದು ತಂಡಕ್ಕೆ ದೊಡ್ಡ ಸಹಾಯ ಮಾಡಿತ್ತು, ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ 41 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು.

ವಿಲ್ ಜ್ಯಾಕ್ಸ್, ರೀಸ್ ಟೋಪ್ಲೆ ಮಾತ್ರವಲ್ಲ ಐಪಿಎಲ್‌ನಲ್ಲಿ ಆಡುತ್ತಿರುವ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಇಂಗ್ಲೆಂಡ್ ಆಟಗಾರರು ತವರಿಗೆ ಮರಳಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟರ್ ಜೋಸ್ ಬಟ್ಲರ್ ಕೂಡ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಕೆಕೆಆರ್ ತಂಡದಲ್ಲಿರುವ ಫಿಲ್ ಸಾಲ್ಟ್ ಕೂಡ ನಾಳೆ ಇಂಗ್ಲೆಂಡ್‌ಗೆ ಹೊರಡಲಿದ್ದಾರೆ. ಸಿಎಸ್‌ಕೆ ತಂಡದ ಮೊಯೀನ್ ಅಲಿ, ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೈರ್ ಸ್ಟೋ ತಂಡವನ್ನು ತೊರೆಯಲಿದ್ದಾರೆ.

Read More
Next Story