ಕ್ಯಾಪ್ ಜೆಮಿನಿ ಡೇ ಕೇರ್ ಪ್ರಕರಣ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸರ್ಕಾರಕ್ಕೆ ಶೀಘ್ರ ವರದಿ
ರಾಜ್ಯದಲ್ಲಿ 2015ರ ಹಳೆಯ ಎಸ್ಒಪಿ ಜಾರಿಯಲ್ಲಿದ್ದು, ತಂತ್ರಜ್ಞಾನ ಹಾಗೂ ಇಂಟರ್‌ನೆಟ್ ಬೆಳವಣಿಗೆಗೆ ತಕ್ಕಂತೆ ಅದನ್ನು ನವೀಕರಿಸುವ ಅಗತ್ಯವಿದೆ. ಮುಂದಿನ 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತಿದೆ.
ಐಟಿ ದೈತ್ಯ ಕಂಪನಿ ‘ಕ್ಯಾಪ್ಜೆಮಿನಿ’ ಆವರಣದಲ್ಲಿರುವ ಡೇ ಕೇರ್ ಸೆಂಟರ್ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೋ ವೈರಲ್ ಆದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗವು ಈಗಾಗಲೇ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದೆ.
ಈ ಕುರಿತು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್, ಘಟನೆಯ ಸಂಪೂರ್ಣ ವಿವರ ಹಾಗೂ ಆಯೋಗ ಕೈಗೊಂಡಿರುವ ಮುಂದಿನ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಆಯುಕ್ತರೊಂದಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಡೇ ಕೇರ್ನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಆಯಾಗಳಿಗೆ ಯಾವುದೇ ಸೂಕ್ತ ತರಬೇತಿ ನೀಡಿರಲಿಲ್ಲ.
ಪೋಷಕರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲು ಮೊಬೈಲ್ ಆಕ್ಸೆಸ್ ನೀಡಿರಲಿಲ್ಲ ಎಂದು ಪೋಷಕರು ಲಿಖಿತ ದೂರು ನೀಡಿದ್ದಾರೆ. ಕಾರ್ಯವಿಧಾನದ ಪಾಲನೆಗೆ ಸಂಬಂಧಿಸಿದಂತೆ ಸಂಸ್ಥೆಯು ಇನ್ನೂ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಆಯೋಗವು ನೋಟಿಸ್ ನೀಡಿದ್ದು, ಇನ್ನು ಮೂರು ದಿನಗಳ ಒಳಗಾಗಿ ಪೂರ್ಣ ವರದಿ ಸಲ್ಲಿಸಲು ಗಡುವು ನೀಡಿದೆ. ತಪ್ಪಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ನಿಮ್ಹಾನ್ಸ್‌ನಲ್ಲಿ ಮಕ್ಕಳಿಗೆ ಕೌನ್ಸಿಲಿಂಗ್
ದೌರ್ಜನ್ಯಕ್ಕೊಳಗಾದ ಹಾಗೂ ಆ ಕೇಂದ್ರದಲ್ಲಿದ್ದ ಒಟ್ಟು 35 ಮಕ್ಕಳಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಘಟನೆಯಿಂದ ಆಘಾತಕ್ಕೊಳಗಾಗಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ನಿಮ್ಹಾನ್ಸ್ ವತಿಯಿಂದ ವಿಶೇಷ ಕೌನ್ಸಿಲಿಂಗ್ ನೀಡಲು ಇಲಾಖೆ ಸಜ್ಜಾಗಿದೆ.
ಪ್ರಸ್ತುತ, ರಾಜ್ಯದಲ್ಲಿ 2015ರ ಹಳೆಯ ಎಸ್ಒಪಿ ಜಾರಿಯಲ್ಲಿದ್ದು, ತಂತ್ರಜ್ಞಾನ ಹಾಗೂ ಇಂಟರ್‌ನೆಟ್ ಬೆಳವಣಿಗೆಗೆ ತಕ್ಕಂತೆ ಅದನ್ನು ನವೀಕರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಸರ್ಕಾರಕ್ಕೆ ಸಮಗ್ರ ವರದಿ ನೀಡಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುತ್ತಿದೆ.
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರು ಈ ಸಮಿತಿಯ ಭಾಗವಾಗಿರಲಿದ್ದಾರೆ.
ಏಕಗವಾಕ್ಷಿ ನೋಂದಣಿ ವ್ಯವಸ್ಥೆಗೆ ಚಿಂತನೆ
ಪ್ರಸ್ತುತ ಡೇ ಕೇರ್ ಸೆಂಟರ್ಗಳು ಕಾರ್ಮಿಕ ಇಲಾಖೆ, ಬಿಬಿಎಂಪಿ, ಶಿಕ್ಷಣ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ವಿವಿಧ ವ್ಯಾಪ್ತಿಗಳಡಿ ನೋಂದಣಿಯಾಗುತ್ತಿರುವುದರಿಂದ ನಿಖರ ಅಂಕಿ-ಅಂಶಗಳ ಕೊರತೆಯಿದೆ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದು, ರಾಜ್ಯಾದ್ಯಂತ ಇರುವ ಡೇ ಕೇರ್ ಸೆಂಟರ್ಗಳನ್ನು ಒಂದೇ ವೇದಿಕೆಯಡಿ ತಂದು ಆಯೋಗದ ಮೂಲಕ ಕಡ್ಡಾಯ ಮಾನಿಟರಿಂಗ್ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಂತೋಷ್ ಕುಮಾರ್ ತಿಳಿಸಿದ್ದಾರೆ. ಒಂದು ವಾರದಲ್ಲಿ ಇಡೀ ರಾಜ್ಯದ ಡೇ ಕೇರ್ ಸೆಂಟರ್ಗಳ ನಿಖರ ಮಾಹಿತಿ ಲಭ್ಯವಾಗಲಿದೆ.

