ಯಶಸ್ಸಿನ ಸಂಭ್ರಮದಲ್ಲಿ ʼಯುವʼ
x
ಯುವ ಸಿನಿಮಾದ ನಟ ಯುವರಾಜ್‌ ಕುಮಾರ್‌ ಹಾಗೂ ನಟಿ ಸಪ್ತಮಿ ಗೌಡ

ಯಶಸ್ಸಿನ ಸಂಭ್ರಮದಲ್ಲಿ ʼಯುವʼ

ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.


ಮುಂಚೂಣಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್‌ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಹ ಕೆ.ಜಿ.ಎಫ್, ಕಾಂತಾರ, ರಾಜಕುಮಾರ ಸೇರಿದಂತೆ ಒಂದರ ಹಿಂದೊಂದು ಯಶಸ್ವಿ ಚಿತ್ರಗಳನ್ನು ನೀಡಿದೆ. ಈಗ ಇದೇ ಬ್ಯಾನರ್‌ನಲ್ಲಿ ಮೂಡಿಬಂದ ʼಯುವʼ ಸಿನಿಮಾ ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ಮೂಲಕ ಹೊಂಬಾಳೆ ಫಿಲಂಸ್ ನ ಗೆಲುವಿನ ಓಟಕ್ಕೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ವರನಟ ಡಾ.ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಕುಡಿ ಯುವ ರಾಜ್‌ ಕುಮಾರ್‌ ನಟನೆಯ ಚೊಚ್ಚಲ ಸಿನಿಮಾ ʼಯುವʼ ಸಿನಿಮಾಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿದ್ದು, ಚಿತ್ರತಂಡದ ಬಹುತೇಕರು ʼಯುವʼ ಸಕ್ಸಸ್‌ ಬಗ್ಗೆ ಮಾತನಾಡಿದರು.

ರಾಜ್ಯದ ಜನತೆಗೆ ವಿಶೇಷ ಧನ್ಯವಾದ

ʼಯುವʼ ಸಿನಿಮಾದ ಬಗ್ಗೆ ಮನತುಂಬಿ ಮಾತನಾಡಿರುವ ಯುವ ರಾಜಕುಮಾರ್, ʼಜನರು ನನ್ನ ಮೊದಲ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನ ತುಂಬಿ ಬಂದಿದೆ. ಪ್ರಥಮವಾಗಿ ನಾನು ನನಗೆ ಅವಕಾಶ ನೀಡಿದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಿಗೆ, ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿಪಡಿಸಿಕೊಳ್ಳುತ್ತೇನೆ. ಜನ ಫ್ಯಾಮಿಲಿ ಸಮೇತ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ. ಈ ಮೂಲಕ ರಾಜ್ಯದ ಜನತೆಗೆ ವಿಶೇಷ ಧನ್ಯವಾದ ತಿಳಿಸುತ್ತೇನೆʼ ಎಂದರು.

ಯುವ ಸಿನಿಮಾ ಹಾದಿ ಈಗಷ್ಟೇ ಆರಂಭ

ಸಿನಿಮಾದ ಸಕ್ಸಸ್‌ ಕುರಿತು ಹರ್ಷ ವ್ಯಕ್ತಪಡಿಸಿರುವ ರಾಘವೇಂದ್ರ ರಾಜಕುಮಾರ್, ನನ್ನ ಮಗನ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಮೊದಲು ಧನ್ಯವಾದ ಹೇಳುತ್ತೇನೆ. ನನ್ನ ಮಗನ ಒಂದು ಬ್ರಾಂಡ್ ಗೆ ಸೀಮಿತ ಮಾಡದೆ ಎಲ್ಲಾ ರೀತಿಯ ನಟನೆಯನ್ನು ಅವನಿಂದ ಮಾಡಿಸಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ಧನ್ಯವಾದ ಹೇಳುತ್ತಾ, ಯುವನ ಸಿನಿಮಾ ಹಾದಿ ಈಗಷ್ಟೇ ಆರಂಭವಾಗಿದೆ. ‌ಮುಂದೆ ಬೇರೆಬೇರೆ ಪಾತ್ರಗಳಲ್ಲಿ ಅವನು ನಟಿಸಿ ಜನರಿಂದ ಸೈ ಎನಿಸಿಕೊಳ್ಳಬೇಕು ಎಂದು ತಿಳಿಸಿದರು.

ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಮಾತನಾಡಿ, ರಾಜ್ಯದ ಜನತೆ ʼಯುವʼ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಲೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡ ಕಲಾರಸಿಕರಿಗೆ, ಮಾಧ್ಯಮದವರಿಗೆ, ಹೊಂಬಾಳೆ ಫಿಲಂಸ್ ಸಂಸ್ಥೆಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ತಿಳಿಸಿದ್ದಾರೆ.

ಈ ವೇಳೆ ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಾಯಕಿ ಸಪ್ತಮಿ ಗೌಡ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರಾಘು ಶಿವಮೊಗ್ಗ ಹಾಗೂ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ʼಯುವʼ ಚಿತ್ರದ ಗೆಲುವನ್ನು ‌ತಮ್ಮ ಮಾತುಗಳ ಮೂಲಕ ಹಂಚಿಕೊಂಡರು

Read More
Next Story