
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರಾಜೇಶ್ ಹೇಳಿದ್ದೇನು?
ಇದಕ್ಕಿಂತ ನಾನು ಇನ್ನೇನು ಬಯಸಬಹುದು?. ನನ್ನ ಮೊದಲ ಕನ್ನಡ ಸಿನಿಮಾ ಉತ್ತರಕಾಂಡ' ಎಂದು ಬರೆದಿದ್ದಾರೆ.
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಉತ್ತರಕಾಂಡ ಸಿನಿಮಾದ ಮೂಲಕ ನಟಿ ಐಶ್ವರ್ಯಾ ರಾಜೇಶ್ ಕನ್ನಡ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲಿದ್ದು, ಈ ಸುದ್ದಿಯನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ.
ಚಿತ್ರದ ತಮ್ಮ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅವರು ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ, 'ಇದಕ್ಕಿಂತ ನಾನು ಇನ್ನೇನು ಬಯಸಬಹುದು?. ನನ್ನ ಮೊದಲ ಕನ್ನಡ ಸಿನಿಮಾ ಉತ್ತರಕಾಂಡ' ಎಂದು ಬರೆದಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ ದುರ್ಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಉತ್ತರಕಾಂಡದಲ್ಲಿ ನಟ ಧನಂಜಯ್ ಗಬ್ರು ಸತ್ಯ ಪಾತ್ರದಲ್ಲಿ ನಟಿಸಲಿದ್ದರೆ, ಚೈತ್ರಾ ಆಚಾರ್ ಲಚ್ಚಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಲಯಾಳಂನ ಹೆಸರಾಂತ ನಿರ್ಮಾಪಕ ಮತ್ತು ನಟ ವಿಜಯ್ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೈತ್ರಾ ಆಚಾರ್ ಅವರಿಗೆ ಜೋಡಿಯಾಗಿ ದಿಗಂತ್ ನಟಿಸುತ್ತಿದ್ದಾರೆ. ಹಿರಿಯ ನಟಿ ಉಮಾಶ್ರೀ ಪಂಡರಿ ಭಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟಿ ಭಾವನಾ ಮೆನನ್ ನಟ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಜೊತೆಗೆ ಸಿನಿಮಾದಲ್ಲಿ ಅವರು ತೊಡಗಿಸಿಕೊಳ್ಳುವ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಡಿಸಲಿದೆ.
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಬಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಮತ್ತು ಗಾಯಕ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನವಿದೆ. ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ.