ಸ್ವಾತಂತ್ರ್ಯ ಪೂರ್ವ ಭಾರತದ ‘ಹೀರಾಮಂಡಿ’ ವೈಭವ
ಹಿರಾಮಂಡಿ ವೆಬ್‌ಸಿರೀಸ್‌ನಲ್ಲೂ ವೈಭವದ ಸೆಟ್ಸ್, ರಾಜಮನೆತನದ ಆಭರಣಗಳು, ದುಬಾರಿ ದಿರುಸು, ಖಡಕ್ ಡೈಲಾಗ್ಸ್‌ಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚೊಚ್ಚಲ ಓಟಿಟಿ ವೆಬ್ ಸರಣಿ ’ಹೀರಾಮಂಡಿ ದಿ ಡೈಮಂಡ್ ಬಜಾರ್’ ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ವೆಬ್ ಸಿರೀಸ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಹೀರಾಮಂಡಿ-ದಿ ಡೈಮಂಡ್ ಬಜಾರ್‌ನ ವೆಬ್ ಸಿರೀಸ್ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿನ ವೇಶ್ಯೆಯರ ಕಥೆಯನ್ನು ಮತ್ತು ಅವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಕೊಡುಗೆ ನೀಡಿದ್ದಾರೆ ಎಂಬುವುದನ್ನು ಪ್ರಸ್ತುತಪಡಿಸುತ್ತದೆ.
ಸ್ವಾತಂತ್ರ್ಯ ಪೂರ್ವ ಕಾಲದ ಲಾಹೋರ್ನಲ್ಲಿ ಇದ್ದ ಶ್ರೀಮಂತ ವೇಶ್ಯೆಯರು ಮತ್ತು ನವಾಬರ ಕಥೆ ‘ಹೀರಾಮಂಡಿ’ಯಲ್ಲಿದೆ. ಈ ವೆಬ್ ಸರಣಿಯಲ್ಲಿ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಶರ್ಮಿನ್ ಸೇಗಲ್, ತಹ ಶಾ, ಶೇಖರ್ ಸುಮನ್, ಅಧ್ಯಯನ್ ಸುಮನ್, ಫರ್ದೀನ್ ಖಾನ್, ರಿಚಾ ಚಡ್ಡಾ ಮುಂತಾದವರು ನಟಿಸಿದ್ದಾರೆ.
ಹೀರಾಮಂಡಿ; ದಿ ಡೈಮಂಡ್ ಬಜಾರ್ ಸ್ವಾತಂತ್ರ ಭಾರತಕ್ಕಿಂತ ಮೊದಲು ಲಾಹೋರ್‌ನ ರೆಡ್ ಲೈಟ್ ಏರಿಯಾದ ವೇಶ್ಯೆಯರು ಹೇಗೆ ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲ್ಲಾಡಿಸಿದರು ಎಂಬುದನ್ನು ತೋರಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನೂ ಬನ್ಸಾಲಿ ಅವರ ಈ ಸರಣಿಯಲ್ಲಿ ನೋಡಬಹುದಾಗಿದೆ. ಹೀರಾಮಂಡಿಯ ರಾಜಮನೆತನದ ಕಥೆಯೂ ಪ್ರಧಾನ ಪಾತ್ರ ವಹಿಸಿದೆ.
ಹಿರಾಮಂಡಿ 1920 ಯಲ್ಲಿ ಲಾಹೋರಿನಲ್ಲಿ ಇದ್ದ ವೈಭವದ ವೇಶ್ಯಾಗೃಹ. ಆ ಮನೆಯೂ ಮಹಲ್‌ಗಳು. ಮಹಲಿನಲ್ಲಿ ಇರುವ ಮುಖ್ಯಸ್ಥೆ ಹುಜೂರ್ ಅವಳ ಕಣ್ಣ ಇಶಾರದಲ್ಲಿ ಎಲ್ಲ ಆಡಳಿತ ನಡೆಸುವ ಹೆಣ್ಣುಗಳು. ಆಗೆಲ್ಲ ನವಾಬರ ಕಾಲ. ಒಬ್ಬೊಬ್ಬ ನವಾಬನೂ ಅತ್ಯಂತ ಶ್ರೀಮಂತ. ನವಾಬರು ಈ ಹೀರಾಮಂಡಿ ವೇಶ್ಯೆಯ ದಾಸಾನುದಾಸರು. ಈ ನವಾಬರು ಹೀರಾಮಂಡಿಗೆ ಕೊಡುವ ಕಾಣಿಕೆಗಳಿಗೇ ಹೀರಾಮಂಡಿಯಲ್ಲಿ ಒಂದೊಂದು ಕೋಣೆ ಇರುತ್ತದೆ. ಕೋಣೆಯ ತುಂಬಾ ವಜ್ರ ವೈಡೂರ್ಯಗಳು, ಮುತ್ತು ರತ್ನಗಳು ತುಂಬಿ ತುಳುಕುತ್ತಿರುತ್ತದೆ.
ನಟನೆ ಅದ್ಭುತ
ಹೀರಾಮಂಡಿ ವೆಬ್ ಸಿರೀಸ್‌ನಲ್ಲಿ ಶಾಹಿಮಹಲ್ ನ ಚಕ್ರವರ್ತಿನಿ ಮಲ್ಲಿಕಾ ಜಾನ್ ಆಗಿ ಮನಿಷಾ ಕೊಯಿರಾಳ ನಟನೆ ಅದ್ಭುತ. ಆ ಪಾತ್ರಕ್ಕೆ ಬೇಕಾದ ಗತ್ತು ಗರ್ವ ಚಾಣಾಕ್ಷತೆ ಹರಿತವಾದ ಮಾತುಗಳು ಅವಳ ಸೌಂದರ್ಯ ವಾಹ್ ಎನಿಸಲಾರದು.
ಅದೇ ಹೀರಾಂಮಡಿಯ ಇನ್ನೊಂದು ಮಹಲಿನ ರಾಣಿಯಾಗಿ ಫರೀದನ್ ಜಹಾನ್ ಆಗಿ ಸೋನಾಕ್ಷಿಯ ನಟನೆ ಕೂಡ ಅದ್ಭುತ. ಆಕೆಯ ಕೊಂಕುಮಾತು, ತಮ್ಮ ಕೆಲಸ ಆಗಬೇಕಾದರೆ ವಯ್ಯಾರ ನಾಗಿಣಿಯಂತೆ ನಟನೆ, ರೋಷಭರಿಯ ಮಾತಿನಿಂದ ಮಲ್ಲಿಕಾಜಾನದ್‌ನ್ನು ದ್ವೇಷ ಸಾಧಿಸಲು ನಡೆಸುವ ಕುತಂತ್ರ ಈ ಸಿರೀಸ್‌ನಲ್ಲಿ ಎದ್ದುಕಾಣುತ್ತದೆ. ವಹೀದಾ ಪಾತ್ರದಲ್ಲಿ ಸಂಜೀದಾ ಶೇಖ್ ಅಭಿನಯಿಸಿದ್ದಾರೆ.
ಆದಿತಿ ರಾವ್ ಹೈದರಿ ಬಿಬ್ಬೋಜಾನ್ ಪಾತ್ರದಲ್ಲಿ ನಟಿಸಿದ್ದು, ಆಕೆ ಗುಪ್ತವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡುತ್ತಿರುತ್ತಾಳೆ. ನವಾಬರ ಜೊತೆ ಇಷ್ಕ್ ಮಾಡುತ್ತಲೇ ಅವರು ಹೋರಾಟಗಾರರ ವಿರುದ್ಧ ನಡೆಸುವ ಷಡ್ಯಂತ್ರಗಳನ್ನು ಅರಿತು ಅದನ್ನು ಹೋರಾಟಗಾರರಿಗೆ ತಲುಪಿಸುವ ಕೆಲಸ ಮಾಡುತ್ತಾ ಗುಂಡೇಟಿಗೆ ಬಲಿಯಾಗುತ್ತಾಳೆ.
ಲಜ್ಜೋ ಲಾಜವಂತಿ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸಿದ್ದು, ನವಾನಿಗಾಗಿ ಅವಳ ಭಗ್ನ ಪ್ರೇಮ ಆತ್ಮಹತ್ಯೆಯಲ್ಲಿ ಹೇಗೆ ಕೊನೆಗೊಳ್ಳುತ್ತದೆ ಎಂಬುವುದನ್ನು ಈ ಸರಣಿಯಲ್ಲಿ ವೀಕ್ಷಿಸಬಹುದು.
ಆಲಂಜೇಬ್ ಆಗಿ ಮಲ್ಲಿಕಾ ಜಾನ್‌ಳ ಎರಡನೆಯ ಮಗಳಾಗಿ ಶರ್ಮಿನ್ ಸೆಗಲ್ ತನ್ನ ಸರಳ ಸೌಂದರ್ಯ ಹಾಗು ಮುಗ್ಧತೆಯಿಂದ ಗಮನ ಸೆಳೆಯುತ್ತಾಳೆ.ಆಲಂಜೇಬ್ ಮತ್ತು ನವಾಬ್ ತಾಜ್‌ದಾರ್‌ನ ನವಿರಾದ ಪ್ರೇಮ ಯಾವ ರೀತಿಯಲ್ಲಿ ಕೊನೆಗೊಳ್ಳುತ್ತದೆ. ಹೀರಾಮಂಡಿಯ ವೇಶ್ಯಾ ಸಂಸ್ಕೃತಿಯನ್ನು ಕೊನೆಗಾಣಿಸಬೇಕೆನ್ನುವ ಆಕೆಯ ವಿರೋಧ ಹೇಗೆ ಅವರಿಬ್ಬರ ಪ್ರೀತಿಯನ್ನು ಬಲಿಕೊಡುತ್ತದೆ ಎಂಬುವುದಕ್ಕೆ ನೀವು ಸಿರೀಸ್ ನೋಡಬೇಕು.
ಹೀರಾಮಂಡಿ ಸಿರೀಸ್‌ನಲ್ಲಿ ಫರ್ದೀನ್ ಖಾನ್, ವಾಲಿ ಮೊಹಮ್ಮದ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೇಖರ್ ಸುಮನ್ ಜುಲ್ಫಿಕರ 'ನವಾಬ್' ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಧ್ಯಾಯನ್ ಸುಮನ್ ನವಾಬರಾಗಿ ನಟಿಸಿದ್ದು, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಹಿರಾಮಾಂಡಿ' ವೆಬ್ ಸರಣಿಯಲ್ಲಿ 75 ವರ್ಷದ ಫರೀದಾ ಜಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಅಂಜು ಮಹೇಂದ್ರು ಕೂಡ ಹೀರಾಮಂಡಿಯಲ್ಲಿನ ಎಲ್ಲಾ ತವಾಯಿಫ್‌ಗಳ ಮುಖ್ಯಸ್ಥ ಫುಫಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದ್ರೇಶ್ ಮಲಿಕ್ ನಟನೆಗೆ ವ್ಯಾಪಕ ಮೆಚ್ಚುಗೆ
ಸಂಜಯ್ ಲೀಲಾ ಬನ್ಸಾಲಿಯವರ " ಹೀರಾಮಂಡಿ : ದಿ ಡೈಮಂಡ್ ಬಜಾರ್" ನಲ್ಲಿನ ಪಾತ್ರಕ್ಕಾಗಿ ಇಂದ್ರೇಶ್ ಮಲಿಕ್ ವ್ಯಾಪಕ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ. ಇಂದ್ರೇಶ್ ಮಲಿಕ್ ಉಸ್ತಾಸ್ ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಮನೆತನದ ವೈಭವ
ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾಗಳೆಂದರೆ ಅಲ್ಲಿ ಅದ್ಧೂರಿತನಕ್ಕೆ ಕೊರತೆ ಕಾಣಿಸದು. ವೈಭವದ ಜತೆಗೆ ಗಟ್ಟಿ ಕಥೆಯನ್ನೇ ಹಿಡಿದು ಪ್ರೇಕ್ಷಕರ ಮುಂದೆ ಬರುವವರು ಸಂಜಯ್ ಲೀಲಾ ಬನ್ಸಾಲಿ. ಹಿರಾಮಂಡಿ ವೆಬ್‌ಸಿರೀಸ್‌ನಲ್ಲೂ ವೈಭವದ ಸೆಟ್ಸ್, ರಾಜಮನೆತನದ ಆಭರಣಗಳು, ದುಬಾರಿ ದಿರುಸು, ಖಡಕ್ ಡೈಲಾಗ್ಸ್‌ಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಹೀರಾಮಂಡಿ ಸಿನಿಮಾದಲ್ಲಿ ನಟಿಯರು ತೊಟ್ಟ ಹೆವಿ ಡಿಸೈನ್ ಅನಾರ್ಕಲಿಗಳು ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾಗಾಗಿ ವಿನ್ಯಾಸಕರು 2 ವರ್ಷಗಳಲ್ಲಿ 300 ಅನಾರ್ಕಲಿ ಉಡುಪುಗಳನ್ನು ತಯಾರಿಸಿದ್ದಾರಂತೆ. ಒಂದು ಲೆಹಂಗಾದ ಬೆಲೆ 3 ಲಕ್ಷ ಇದ್ದು, ನಟಿಯರು ತೊಟ್ಟ ಲೆಹಂಗಾ ಹಾಗೂ ಅನಾರ್ಕಲಿಗಳಿಗೆ 8-9 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗಿದೆ.