ರಾಪ್‌ ಸಾಂಗ್‌ ಮೂಲಕ ಮತದಾನದ ಮಹತ್ವ ಸಾರಿದ ತಾರೆಯರು
x
ರಾಪ್‌ ಸಾಂಗ್‌ ಮೂಲಕ ಯುವಜನತೆಗೆ ಮತದಾನದ ಮಹತ್ವ ಸಾರಿದ್ದಾರೆ.

ರಾಪ್‌ ಸಾಂಗ್‌ ಮೂಲಕ ಮತದಾನದ ಮಹತ್ವ ಸಾರಿದ ತಾರೆಯರು

‘ಮಾಧ್ಯಮ ಅನೇಕ’ ಸಂಸ್ಥೆ 'ವೋಟ್‌ ನಮ್ಮ ಪವರ್' ರಾಪ್‌ ಸಾಂಗ್‌ ಬಿಡುಗಡೆಮಾಡಿದೆ.


Click the Play button to hear this message in audio format

ಲೋಕಸಭಾ ಚುನಾವಣೆ ಸನಿಹದಲ್ಲಿದೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ನ ವಿವಿಧ ನಟ-ನಟಿಯರು ಯುವಜನತೆಯಲ್ಲಿ ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

2024ರ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ‘ಮಾಧ್ಯಮ ಅನೇಕ’ ಸಂಸ್ಥೆ 'ವೋಟ್‌ ನಮ್ಮ ಪವರ್' ರಾಪ್‌ ಸಾಂಗ್‌ ಬಿಡುಗಡೆಮಾಡಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನದೊಂದಿಗೆ ಭವ್ಯ ಭಾರತದ ಭವಿಷ್ಯ ನಿರ್ಧರಿಸುವುದು ನಮ್ಮೆಲ್ಲರ ಕೈಲಿದೆ. ಈ ಪ್ರಜಾಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ಚೆಂದದ ರಾಪ್‌ ಸಾಂಗ್‌ ಮೂಲಕ ಸೆಲೆಬ್ರೇಟ್‌ ಮಾಡುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವುದು ಉದ್ದೇಶ ಎಂದು ಮಾಧ್ಯಮ ಅನೇಕ ಸಂಸ್ಥೆ ತಿಳಿಸಿದೆ.

'ಮೊದಲ ಬಾರಿಗೆ ಮತದಾನ ಮಾಡುವವರಿಗೆ ಈ ರಾಪ್‌ ಸಾಂಗ್‌ ಬಹಳ ಇಷ್ಟವಾಗಬಹುದು. ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕು' ಎಂದರು ಹಾಡಿಗೆ ದನಿಯಾಗಿರುವ ನಟ ರಾಕೇಶ್ ಅಡಿಗ.

'ಮತದಾನದ ಬಗ್ಗೆ ಸಂವಿಧಾನದಲ್ಲಿರುವ ಕೆಲವು ವಿಷಯಗಳನ್ನು ತೆಗೆದುಕೊಂಡು ಈ ಹಾಡನ್ನು ಮಾಡಿದ್ದೇವೆ‌. ಈಗಿನ ಯುವಜನತೆ ಹೆಚ್ಚಾಗಿ ರಾಪ್‌ ಸಾಂಗ್‌ ಅಭಿಮಾನಿಗಳು. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ' ಎಂದು ನಿರ್ದೇಶಕ ರಾಜ್ ಗೋಪಿ ತಿಳಿಸಿದರು.

'ಮತದಾನದ ದಿನ‌ ರಜೆ ಇದೆ ಎಂದು ಮನೆಯಲ್ಲಿ ಕೂರುವುದು. ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಎಲ್ಲರೂ ಮತದಾನ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕಲ್ಲ.‌ ಅಧಿಕಾರ' ಎಂದು 'ಬಿಗ್ ಬಾಸ್' ಖ್ಯಾತಿಯ ನೀತು ವನಜಾಕ್ಷಿ ತಿಳಿಸಿದರು.

ಹಾಡಿಗೆ ಹೆಜ್ಜೆ ಹಾಕಿರುವ ನಟಿ ತೇಜಸ್ವಿನಿ ಶರ್ಮ, ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮತದಾನದ ಮಹತ್ವವನ್ನು ತಿಳಿಸಿ, ಅವಕಾಶ ಮಾಡಿಕೊಟ್ಟ 'ಮಾಧ್ಯಮ ಅನೇಕ' ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ 'ಓಟ್‌ ನಮ್ಮ‌ ಪವರ್' ಪ್ರಸ್ತುತಿಗೆ ಮುನ್ನ 'ಮಾಧ್ಯಮ ಅನೇಕ' ಸಂಸ್ಥೆಯ ಡಾ ನಮನ ಬಿಎನ್‌ ಅವರು ಈ ಹಾಡಿನ ಆಶಯ - ಉದ್ದೇಶದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. 'ಮಾಧ್ಯಮ ಅನೇಕ' ಸಂಸ್ಥೆಯ 'ಅನೇಕ ಆಡಿಯೋ' ಮೂಲಕ ಈ ರಾಪ್‌ ಸಾಂಗ್‌ ಬಿಡುಗಡೆಯಾಗಿದೆ.

ಸಂಸ್ಥೆಯ ಮುಖ್ಯಸ್ಥರಾದ ಅರವಿಂದ್ ಮೋತಿ ಈ ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅನು ಮೋತಿ ಬರೆದು, ಕಾರ್ತಿಕ್ ಶರ್ಮ ಸಂಗೀತ ನೀಡಿರುವ ಈ ಹಾಡನ್ನು ರಾಕೇಶ್ ಅಡಿಗ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಛಾಯಾಗ್ರಾಹಣ ಗಿರೀಶ್ ಅವರದು.

ಪ್ರತಿಭಾವಂತ ಯುವ ತಾರೆಯರಾದ ತೇಜಸ್ವಿನಿ ಶರ್ಮ, ಸ್ಮೈಲ್‌ ಗುರು ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ಅಮರ್‌ ತಮ್ಮ ಡ್ಯಾನ್ಸ್‌ ಸ್ಟೆಪ್‌ಗಳ ಜತೆ ಹಾಡನ್ನು ಪವರ್‌ಫುಲ್‌ ಆಗಿ ಪ್ರಸ್ತುತಪಡಿಸಿದ್ದಾರೆ. ಇವರಷ್ಟೇ ಅಲ್ಲದೆ ಟೀವಿ - ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು ಹುಕ್‌ ಸ್ಟೆಪ್ಸ್‌ಗೆ ಹೆಜ್ಜೆ ಹಾಕುತ್ತಾ ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. ನವೀನ್‌ ಶಂಕರ್‌, ನೀತೂ ವನಜಾಕ್ಷಿ, ಕಾರ್ತೀಕ್‌ ಮಹೇಶ್‌, ತನಿಶಾ ಕುಪ್ಪಂಡ, ಸಾನಿಯಾ ಅಯ್ಯರ್‌, ಸಾಗರ್‌ ಪುರಾಣಿಕ್‌, ನಿರಂಜನ್‌ ದೇಶಪಾಂಡೆ, ಚಂದನಾ ಅನಂತಕೃಷ್ಣ ಮುಂತಾದವರು ಸಾಂಗ್‌ನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡು ಸದಾಶಯದ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.

Read More
Next Story