'ರಿಚರ್ಡ್ ಆಂಟನಿ' ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ
ತಾವು ನಿರ್ದೇಶಿಸಿ, ನಟಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾದ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
ತಾವು ನಿರ್ದೇಶಿಸಿ, ನಟಿಸಲಿರುವ ಹೊಸ 'ರಿಚರ್ಡ್ ಆಂಟನಿ' ಸಿನಿಮಾದ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
ತಮ್ಮ ಹುಟ್ಟೂರು ಉಡುಪಿಯ ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದರು. 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆಯೂ ಪ್ರತಿಕ್ರಿಯಿಸಿದರು. ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ ಎಂದಿದ್ದಾರೆ.
"ನಾನು ವೋಟ್ ಮಾಡುವುದಕ್ಕಾಗಿ ಉಡುಪಿಗೆ ಬಂದೆ. ಆದರೆ ಶೀಘ್ರದಲ್ಲೇ ನನ್ನ ಇಡೀ ತಂಡ ಇಲ್ಲಿಗೆ ಶಿಫ್ಟ್ ಆಗಲಿದೆ. ಮೇ 1ರಿಂದ ಕೆಲಸಗಳು ಶುರುವಾಗುತ್ತದೆ. ಒಂದು ವರ್ಷನ್ ಸ್ಕ್ರಿಪ್ಟ್ ಬಹುತೇಕ ಸಿದ್ಧವಾಗಿದೆ. ಬಹುತೇಕ 'ರಿಚರ್ಡ್ ಆಂಟನಿ' ಚಿತ್ರೀಕರಣ ಕರಾವಳಿ ಭಾಗದಲ್ಲೇ ನಡೆಯುತ್ತದೆ. 60, 70 ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡಬೇಕು. ಹಾಗಾಗಿ ಕೇರಳದಲ್ಲೂ ಚಿತ್ರೀಕರಣ ನಡೆಸುವ ಆಲೋಚನೆ ಇದೆ" ಎಂದಿದ್ದಾರೆ.
"10 ವರ್ಷಗಳ ಹಿಂದಿನ ಉಡುಪಿಗೂ ಈಗಿನ ಉಡುಪಿಗೂ ಬಹಳ ವ್ಯತ್ಯಾಸವಿದೆ. ಹಾಗಾಗಿ ಉಡುಪಿ ಚಿತ್ರಣ ಕಟ್ಟಿಕೊಡಲು ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಬೇಕಿದೆ. ʼಉಳಿದವರು ಕಂಡಂತೆʼ ಸಿನಿಮಾವನ್ನು ಒಂದೇ ಕಡೆ ಶೂಟ್ ಮಾಡಿದ್ವಿ. ಆದರೆ ಈಗ ಅದು ಸಾಧ್ಯವಿಲ್ಲ. ಉಡುಪಿ ಸಂಪೂರ್ಣ ಸಿಟಿಯಾಗಿದೆ. ಮುಂಬೈಗೂ ಉಡುಪಿಗೂ ವ್ಯತ್ಯಾಸ ಇಲ್ಲ ಎನ್ನುವಂತಾಗಿದೆ" ಎಂದರು.
"ಬಹುತೇಕ ಕರಾವಳಿ ಭಾಗದ ಕಲಾವಿದರೇ ಚಿತ್ರದಲ್ಲಿ ನಟಿಸುತ್ತಾರೆ. ಬೆಂಗಳೂರು ಕಲಾವಿದರು ಕೇಳುತ್ತಿದ್ದಾರೆ. ಆದರೆ ಅವರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಉಡುಪಿ ಮಾತನಾಡುವ ಶೈಲಿ ಬಹಳ ಮುಖ್ಯ. ಇಲ್ಲಿನ ಕನ್ನಡ ಶೈಲಿಯನ್ನು ಬೇರೆಯವರು ಬಂದು ಮಾತನಾಡಿದರೆ ನೈಜತೆ ಇರಲ್ಲ. ಹಾಗಾಗಿ ಪ್ರತಿ ಕಲಾವಿದರೂ ಕರಾವಳಿ ಭಾಗದವರೇ ಆಗಿರುತ್ತಾರೆ" ಎಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.
'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮಾಡಿದ್ದ ರಿಚ್ಚಿ(ರಿಚರ್ಡ್ ಆಂಟನಿ) ಪಾತ್ರ ಹಿಟ್ ಆಗಿತ್ತು. ಹಾಗಾಗಿ ಆ ಪಾತ್ರದ ಸುತ್ತ ಮುಂದಿನ ಸಿನಿಮಾ ಮೂಡಿ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸುವ ಪ್ರಯತ್ನ ನಡೀತಿದೆ. ಈ ಬಾರಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. 'ಸಪ್ತಸಾಗರದಾಚೆ ಎಲ್ಲೋ' ಬಳಿಕ ಸಿಂಪಲ್ ಸ್ಟಾರ್ ಸಂಪೂರ್ಣವಾಗಿ ತಮ್ಮನ್ನು 'ರಿಚರ್ಡ್ ಆಂಟನಿ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.