‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಡೆಯಾಜ್ಞೆ ತಂದ ನಾಗಾಭರಣ
'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಟೈಟಲ್‌ನಲ್ಲಿ ಕಿರಣ್ ತೋಟಂಬೈಲ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು.
ಇತ್ತೀಚೆಗೆ ನಿರ್ದೇಶಕ ದಿನೇಶ್ ಬಾಬು ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಚಿತ್ರವನ್ನು ಘೋಷಿಸಿದ್ದರು. 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಟೈಟಲ್‌ನಲ್ಲಿ ಕಿರಣ್ ತೋಟಂಬೈಲ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದೀಗ ಆ ಚಿತ್ರಕ್ಕೆ ನಿರ್ದೇಶಕ ನಾಗಾಭರಣ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.
'ನಾಡಪ್ರಭು ಕೆಂಪೇಗೌಡ' ಶೀರ್ಷಿಕೆಯ ಹಕ್ಕುಸ್ವಾಮ್ಯವು ಈಶ್ವರ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳಾದ ಡಾ ಎಂ ಎನ್ ಶಿವರುದ್ರಪ್ಪ, ರಾಹುಲ್ ಗುಂಡಾಲ, ನಿರ್ದೇಶಕ ಟಿ ಎಸ್ ನಾಗಾಭರಣ, ಸಹ ಲೇಖಕಿ ಪ್ರತಿಭಾ ನಂದಕುಮಾರ್ ಇವರ ಬಳಿ ಇದೆ ಎಂದು, 'ನಾಡಪ್ರಭು ಕೆಂಪೇಗೌಡ' ಚಿತ್ರದ ಚಿತ್ರಕಥೆಯ ಟ್ರೇಡ್‌ಮಾರ್ಕ್, ಶೀರ್ಷಿಕೆ, ಬ್ರಾಂಡ್, ಪೂರ್ವಪ್ರತ್ಯಯ ಮತ್ತು ಪ್ರತ್ಯಯ ಸೇರಿಕೆ, ರಿಮೇಕ್, ಅಳವಡಿಕೆ ಕುರಿತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಪ್ರಸ್ತಾವಿತ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.
ಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಅನುಸಾರ ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬೂ, ಅವರ ಉದ್ಯೋಗಿಗಳು, ಏಜೆಂಟರು, ಪಾಲುದಾರರು, ಸಹವರ್ತಿ, ಅಧಿಕಾರಿ, ಪ್ರತಿನಿಧಿ ಮತ್ತು ಅವರ ಪರವಾಗಿ ವರ್ತಿಸುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಶೀರ್ಷಿಕೆಯ ಚಲನಚಿತ್ರವನ್ನು ಅಥವಾ ಆ ವಿಷಯವನ್ನು ಹೊಂದಿರುವ ಯಾವುದೇ ಚಲನಚಿತ್ರವನ್ನು ನಿರ್ಮಾಣ, ಪ್ರಸಾರ, ಸಾರ್ವಜನಿಕರಿಗೆ ಸಂವಹನ, ಪುನರುತ್ಪಾದನೆ, ಧ್ವನಿಮುದ್ರಣ, ವಿತರಣೆ, ಪ್ರಸಾರ, ಜಾಹೀರಾತು, ನಿರ್ದೇಶನ ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಕುರಿತಂತೆ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಎಂ ಎನ್ ಶಿವರುದ್ರಪ್ಪ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ, ಬೆಂಗಳೂರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನಾಗಾಭರಣ ನಿರ್ದೇಶನದ 'ನಾಡಪ್ರಭು ಕೆಂಪೇಗೌಡ' ಚಿತ್ರದಲ್ಲಿ ಡಾಲಿ ಧನಂಜಯ ಹೀರೊ ಆಗಿ ನಟಿಸುವುದು ಬಹುತೇಕ ಖಚಿತವಾಗಿದೆ.