Loksabha Election 2024 | ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಸೆಲೆಬ್ರಿಟಿಗಳು
ಲೋಕಸಭಾ ಚುನಾವಣೆಗೆ ಮತದಾನದ ನಡೆಯುತ್ತಿದ್ದು, ಕನ್ನಡ ಚಿತ್ರರಂಗದ ತಾರೆಯರು ಭಾಗಿಯಾಗಿ ಮತದಾನ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಮೊದಲನೇ ಹಂತದ ಮತದಾನ ಕರ್ನಾಟಕದಲ್ಲಿ ಇಂದು ಆರಂಭವಾಗಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಕನ್ನಡ ಚಿತ್ರರಂಗದ ತಾರೆಯರು ಭಾಗಿಯಾಗಿ ಮತದಾನ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಕುಟುಂಬದವರು ಆಗಮಿಸಿ ಮತ ಹಾಕಿದರು. ಯುವ ರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಅವರು ಮತದಾನ ಮಾಡಿದರು. ಆ ಬಳಿಕ ವೋಟ್ ಮಾಡುವಂತೆ ಅವರು ಅಭಿಮಾನಿಗಳ ಬಳಿ ಕೋರಿದರು.
ನಟ ಡಾಲಿ ಧನಂಜಯ್ ಅವರು ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ನನ್ನೂರಿನಲ್ಲಿ ನಾನು ಓಟು ಮಾಡಿದೆ. ನೀವು ತಪ್ಪದೆ ಮತದಾನ ಮಾಡಿ ಎಂದು ಇನ್ಟಗ್ರಾಮ್‌ನಲ್ಲಿ ಪೋಟೋ ಸಮೇತ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಳ್ಳಿಗ್ಗೆಯೇ ತಮ್ಮ ಪತ್ನಿ ಶಿಲ್ಪಾ ಅವರ ಜೊತೆ ಆರ್.ಆರ್ ನಗರದ ಬೂತ್ ಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮತದಾನ ಮಾಡಿದರು. ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು. ನಾನು ಬೆಳಿಗ್ಗೆ ಯಾಕೆ ಬಂದೆ ಅಂದರೆ, ನನ್ನ ನೋಡಿ ನನ್ನ ಅಭಿಮಾನಿಗಳು, ಅನುಯಾಯಿಗಳು ಬಂದು ಮತ ಚಲಾಯಿಸಲು ಬರಲಿ ಎನ್ನುವ ಕಾರಣಕ್ಕೆ. ವೋಟ್ ಮಾಡಿಲ್ಲ ಅನ್ನೋದಕ್ಕಿಂತ ವೋಟ್ ಮಾಡಿದೆ ಅನ್ನೋದಕ್ಕೆ ಬೆಲೆ ಜಾಸ್ತಿ. ಹೀಗಾಗಿ ಯುವ ಪೀಳಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ' ಎಂದು ಗಣೇಶ್ ಹೇಳಿದರು.
ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಜೊತೆ ಆರ್.ಆರ್ ನಗರ ಮತ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು. ಬೆಳ್ಳಿಗ್ಗೆಯೇ ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.
ನಟಿ ಸಪ್ತಮಿ ಗೌಡ, ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿ ಮತದಾನ ಮಾಡಿದರು. ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದು ಅವರು ಹೇಳಿದರು.
ನಟ ಶ್ರೀಮುರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜೊತೆ ಬಂದು ಅವರು ಮತ ಚಲಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಶ್ರೀಮುರಳಿ ಮತದಾನ ನಮ್ಮ ಹಕ್ಕು, ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು. ಇಂತಹ ಜವಾಬ್ದಾರಿ ಮರೆಯಬಾರದು. ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್ ಮಾಡಿಲ್ಲ ಅವರಿಗೆ ಏನು ಹೇಳಬೇಕು ಎಂದರು.
ನಟ ಜಗ್ಗೇಶ್ ಅವರು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ತಮ್ಮ ಪತ್ನಿ ಸಮೇತ ಬಂದು ಮತ ಚಲಾಯಿಸಿದ್ದಾರೆ.
ಒಟ್ಟಿನಲ್ಲಿ ಸೆಲೆಬ್ರೆಟಿಗಳು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದು, ಇತರರಿಗೂ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ.