
ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್
ಟಾಲಿವುಡ್ ನಟ ರಾಮ್‌ಚರಣ್ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯದಿಂದ ಶನಿವಾರ (ಏ.13) ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಬೆಂಗಳೂರು: ಟಾಲಿವುಡ್ ನಟ ರಾಮ್‌ಚರಣ್ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯದಿಂದ ಶನಿವಾರ (ಏಪ್ರಿಲ್ 13) ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಏಪ್ರಿಲ್ 13ರಂದು ನಡೆದ ವಿಶ್ವವಿದ್ಯಾಲಯದ ಪದವಿ ಸಮಾರಂಭದಲ್ಲಿ ನಟ ಮುಖ್ಯ ಅತಿಥಿಯಾಗಿದ್ದರು. ವೇಲ್ಸ್ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಲು ಹೆಸರುವಾಸಿಯಾಗಿದೆ. ಇದೀಗ ವಿಶ್ವವಿದ್ಯಾಲಯವು ಮನರಂಜನಾ ಕ್ಷೇತ್ರದಲ್ಲಿ ಸೇವೆಗಾಗಿ ರಾಮ್‌ಚರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
ಈ ಕುರಿತು ವೇಲ್ಸ್ ವಿಶ್ವವಿದ್ಯಾಲಯ ತನ್ನ ʼಎಕ್ಸ್ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ರಾಮ್ ಚರಣ್ ಭಾರತೀಯ ನಟ, ನಿರ್ಮಾಪಕ ಮತ್ತು ಉದ್ಯಮಿ. ನಮ್ಮ 14ನೇ ವಾರ್ಷಿಕ ಘಟಿಕೋತ್ಸವಕ್ಕೆ ಡೈನಾಮಿಕ್ ಸ್ಟಾರ್ ರಾಮ್‌ಚರಣ್ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆʼʼಎಂದು ಬರೆದುಕೊಂಡಿತ್ತು. ತಮ್ಮ ನೆಚ್ಚಿನ ನಾಯಕನಿಗೆ ಸಿಕ್ಕ ಗೌರವ ಕಂಡು ರಾಮ್ ಚರಣ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
ರಾಮ್ ಚರಣ್ ಆರ್.ಆರ್.ಆರ್. ಸಿನಿಮಾದ ಭಾರೀ ಯಶಸ್ಸಿನ ಬಳಿಕ ಶಂಕರ್ ಸಾರಥ್ಯದ ʼಗೇಮ್ ಚೇಂಜರ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ʼಉಪ್ಪೇನಾʼ ನಿರ್ದೇಶಕ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.