ಸ್ಯಾಂಡಲ್‌ವುಡ್ ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ
ಸ್ಯಾಂಡಲ್‌ವುಡ್ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಯಾಂಡಲ್‌ವುಡ್ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ (ಮೇ 12) ರಾತ್ರಿ 10 ಗಂಟೆ ಸುಮಾರಿಗೆ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಬಗ್ಗೆ ಸ್ವತಃ ನಟ ಚೇತನ್ ಚಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ʻಅಮ್ಮಂದಿರ ದಿನʻ ದ ದಿನದ ಅಂಗವಾಗಿ ಅಮ್ಮನೊಂದಿಗೆ ದೇವಸ್ಥಾನಕ್ಕೆ ತೆರಳಿ ಮರಳುವ ವೇಳೆ ತಮ್ಮ ಕಾರನ್ನು ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಕೆಲ ಕಿಡಿಗೇಡಿಗಳು, ಬೈಕ್‍ಗೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಶುರುಮಾಡಿದರು. ಈ ವೇಳೆ ದುಡ್ಡು ಕೇಳಲು ಆರಂಭಿಸಿದರು. ಹಣ ಕೊಡೋದಿಲ್ಲ ಎಂದು ಹೇಳಿದ್ದಕ್ಕೆ ಗಲಾಟೆ ಮಾಡಿದರು. ಬಳಿಕ ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬಂದು ಕಾರಿಗೆ ಬೈಕ್ ಅಡ್ಡಹಾಕಿ, ನನ್ನ ಮುಖಕ್ಕೆ ರಕ್ತ ಬರುವ ಹಾಗೆ ಹೊಡೆದರು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಕಗ್ಗಲಿಪುರದ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ವೇಳೆ ತಾವಿರುವ ಪರಿಸ್ಥಿತಿಯಲ್ಲೇ ವಿಡಿಯೋ ಮಾಡಿರುವ ಚೇತನ್ ಚಂದ್ರ, ಈ ವಿಡಿಯೋವನ್ನು ನನ್ನ ಪತ್ನಿ, ಮಗು, ಹೆತ್ತವರು ನೋಡುತ್ತಿರುತ್ತಾರೆ. ಸದ್ಯ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಚೇತನ್ ಚಂದ್ರ ಅವರ ಮುಖವೆಲ್ಲಾ ರಕ್ತವಾಗಿದ್ದು, ಧರಿಸಿದ್ದ ಬಟ್ಟೆ ಕೂಡ ರಕ್ತವಾಗಿದೆ.
ಭಾನುವಾರ (ಮೇ12) `ಅಮ್ಮಂದಿರ ದಿನಾಚರಣೆ ದಿನʼ ದಿನದ ಹಿನ್ನಲೆಯಲ್ಲಿ ತಮ್ಮ ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಮರಳುವ ವೇಳೆ ಕಗ್ಗಲಿಪುರ ಸಮೀಪಲ್ಲಿ ಗಾಡಿ ವಿಚಾರಕ್ಕೆ ಗಲಾಟೆ ತೆಗೆದು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. 'ಇಂದು ಒಂದು ಕೆಟ್ಟ ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ, ಬೇಕಂತಲೇ ನನ್ನ ಗಾಡಿ ಅಡ್ಡ ಹಾಕಿ ಹೊಡೆದರು. ಚೆನ್ನಾಗಿ ಕುಡಿದು ನನ್ನ ಗಾಡಿ ಅಡ್ಡ ಹಾಕಿದ್ದಾರೆ. ಏನಿಲ್ಲ ಅಂದರೂ 20 ಜನರು ಸೇರಿಕೊಂಡು ನನಗೆ ಹೊಡೆದಿದ್ದಾರೆ. ಅದರ ವಿಡಿಯೋ ಇದೆ. ಸದ್ಯ ಕಗ್ಗಲಿಪುರ ಪೊಲೀಸ್ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ತುಂಬ ಕೆಟ್ಟ ಜನರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನನಗೆ ನ್ಯಾಯ ಬೇಕು' ಎಂದು ನಟ ಚೇತನ್ ಚಂದ್ರ ಆಗ್ರಹಿಸಿದ್ದಾರೆ.
ಇನ್‌ಫಾರ್ಮೆಷನ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಚೇತನ್ 2008ರಲ್ಲಿ ನಟಿ ಹರ್ಷಿಕಾ ಪೂಣಚ್ಚ ಜತೆ ಪಿಯುಸಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಪ್ರೇಮಿಸಂ ಎಂಬ ಚಲನಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ರಾಜಧಾನಿ, ಜರಾಸಂಧ, ಕುಂಭರಾಶಿ, ಹುಚ್ಚುಡುಗರು, ಪ್ಲಸ್, ಸಂಯುಕ್ತ, ಬಜಾರ್, ಪ್ರಭುತ್ವ ಹಾಗೂ ಜಾತ್ರೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಹಾಗೂ ವಿದೇಶಗಳಲ್ಲಿ ಅವರು ಹೊಟೆಲ್ ಬಿಸಿನೆಸ್ ಕೂಡ ನಡೆಸುತ್ತಿದ್ದಾರೆ. ಕೆಲವು ಕಿರುತೆರೆ ಶೋದಲ್ಲಿ ಕೂಡ ಚೇತನ್ ಚಂದ್ರ ಕಾಣಿಸಿಕೊಂಡಿದ್ದಾರೆ. ಸದ್ಯ ನಿದ್ರು ಕೊಲವನ್ ಎಂಬ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.