ಹಿರಿಯ ನಟ ದ್ವಾರಕೀಶ್‌ ನಿಧನಕ್ಕೆ ಗಣ್ಯರ ಸಂತಾಪ
x
ಹಿರಿಯ ನಟ ದ್ವಾರಕೀಶ್‌

ಹಿರಿಯ ನಟ ದ್ವಾರಕೀಶ್‌ ನಿಧನಕ್ಕೆ ಗಣ್ಯರ ಸಂತಾಪ

ದ್ವಾರಕೀಶ್‌ ನಿಧನಕ್ಕೆ ಡಿ ಕೆ ಶಿವಕುಮಾರ್‌, ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.


Click the Play button to hear this message in audio format

ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ (ಏ.16) ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ದ್ವಾರಕೀಶ್‌ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯನವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʼನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ 'ಪ್ರಚಂಡ ಕುಳ್ಳ' ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಡಾ.ರಾಜ್‌ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ದಾರೆ.

ದ್ವಾರಕೀಶ್‌ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಂಬನಿ ಮಿಡಿದಿದ್ದಾರೆ. “ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್‌ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಡಿಕೆಶಿ ತಮ್ಮ x ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಟ್ವೀಟ್ ಮಾಡಿ.. ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಅನಿಲ್ ಕುಂಬ್ಳೆ ಸಂತಾಪ

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ದ್ವಾರಕೀಶ್‌ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಸರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ನಾವು. ಚಿತ್ರರಂಗಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ ಎಂದು x ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ ಸೂಪರ್​ ಸ್ಟಾರ್​ ರಜನಿಕಾಂತ್​

ದ್ವಾರಕೀಶ್‌ ಸೂಪರ್​ ಸ್ಟಾರ್​ ರಜನಿಕಾಂತ್​ ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ನನ್ನ ಆತ್ಮೀಯ ಗೆಳೆಯ ದ್ವಾರಕೀಶ್​ ನಿಧನದಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದು ನಿಂತರು. ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ರಜನಿಕಾಂತ್​ ಅವರು ತಮ್ಮ ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಜನಿಕಾಂತ್​ ಮತ್ತು ದ್ವಾರಕೀಶ್​ ನಡುವೆ ಒಳ್ಳೆಯ ಒಡನಾಟ ಇತ್ತು. ರಜನಿಕಾಂತ್‌ ನಟಿಸಿದ್ದ ‘ಅಡುತ ವಾರಿಸು’ ಸಿನಿಮಾವನ್ನು ದ್ವಾರಕೀಶ್​ ಅವರು ನಿರ್ಮಾಣ ಮಾಡಿದ್ದರು. ಆ ಸಿನಿಮಾ 1983ರಲ್ಲಿ ಬಿಡುಗಡೆ ಆಗಿತ್ತು. ಶ್ರೀದೇವಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ದ್ವಾರಕೀಶ್‌ ನಿಧನಕ್ಕೆ ಸಂತಾಪ ಸೂಚಿಸಿದ ಶಿವಣ್ಣ

ನಟ ಶಿವರಾಜ್‌ಕುಮಾರ್ ಹಿರಿಯ ನಟ ದ್ವಾರಕೀಶ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ʼಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ನಗುಮುಖವನ್ನೇ ಸದಾ ನೆನೆಯುತ್ತ ಬೀಳ್ಕೊಡುವೆ. ಹೋಗಿ ಬನ್ನಿ ದ್ವಾರಕೀಶ್ ಮಾಮ. Om Shanthiʼ ಎಂದು ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಿರಿಯ ನಟ ದ್ವಾರಕೀಶ್‌ ನಿಧನಕ್ಕೆ ‌ನಟ ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʼಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾʼ ಎಂದು ಸಂತಾಪ ಸೂಚಿಸಿದ್ದಾರೆ.

ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಬುಧವಾರ (ಏಪ್ರಿಲ್​ 17) ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. 11 ಗಂಟೆ ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Read More
Next Story