ಕಾನ್‌ ಫಿಲಂ ಫೆಸ್ಟಿವಲ್‌: ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು ಕಿರುಚಿತ್ರಕ್ಕೆ ಪ್ರಶಸ್ತಿ
x
ಅಜ್ಜಿ ಹುಂಜ ಕದ್ದ ಕಥೆ

ಕಾನ್‌ ಫಿಲಂ ಫೆಸ್ಟಿವಲ್‌: ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ಕಿರುಚಿತ್ರಕ್ಕೆ ಪ್ರಶಸ್ತಿ

ಪ್ರತಿಷ್ಟಿತ ಕಾನ್‌ ಚಲನಚಿತ್ರೋತ್ಸವದಲ್ಲಿ ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ಎಂಬ ಕನ್ನಡ ಕಿರುಚಿತ್ರ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.


Click the Play button to hear this message in audio format

ಬೆಂಗಳೂರು: ಪ್ರತಿಷ್ಟಿತ ಕಾನ್‌ ಚಲನಚಿತ್ರೋತ್ಸವದಲ್ಲಿ ʻಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ಎಂಬ ಕನ್ನಡ ಕಿರುಚಿತ್ರ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್) ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.

ಈ ಕಿರುಚಿತ್ರವನ್ನು ಮೈಸೂರಿನ ಡಾ. ಚಿದಾನಂದ ಎಸ್‌ ನಾಯ್ಕ್‌ ಅವರು ನಿರ್ದೇಶಿಸಿದ್ದು, ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ.

ಈ ಕಿರುಚಿತ್ರವನ್ನು ಪುಣೆಯ ಫಿಲ್ಮ್‌ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ಸಂಸ್ಥೆ ನಿರ್ಮಿಸಿದೆ. ವಿ.ಮನೋಜ್- ಸಂಕಲನ, ಸೂರಜ್ ಠಾಕೂರ್ ಛಾಯಾಗ್ರಹಣ, ಅಭಿಷೇಕ್ ಕದಂ ಅವರು ಶಬ್ದವಿನ್ಯಾಸ ಮಾಡಿದ್ದು, ಕಿರುಚಿತ್ರ ಕೇವಲ 16 ನಿಮಿಷ ಇದೆ. ಈ ವಿಭಾಗದಲ್ಲಿ ಭಾಗವಹಿಸಿದ್ದ 2,263 ಕಿರುಚಿತ್ರಗಳಲ್ಲಿ 18 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಅವುಗಳಲ್ಲಿ ಇದ್ದ ಏಕೈಕ ಭಾರತೀಯ ಸಿನಿಮಾ ಇದಾಗಿತ್ತು.ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ.ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ.

ಬೀಜಿಂಗ್ ಫಿಲ್ಮ್ ಅಕಾಡೆಮಿಯ ಬನಿಷ್ಡ್ ಲವ್, ಲಂಡನ್ ಫಿಲ್ಮ್ ಸ್ಕೂಲ್‌ನ ಇಟ್ ವಿಲ್ ಪಾಸ್, ಗ್ವಾಡಲಜರ ವಿಶ್ವವಿದ್ಯಾಲಯ ಮೆಕ್ಸಿಕೊದ ಎಲಿವೇಸಿಯನ್, ದಾರ್-ಅಲ್ ಕಲಿಮಾ ವಿಶ್ವವಿದ್ಯಾಲಯದ ಕಿರುಚಿತ್ರ ಮತ್ತು ಥೆಸಲೊನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ದಿ ಕ್ಯಾಯೋಸ್ ಶೀ ಲೆಫ್ಟ್ ಬಿಹೈಂಡ್ ಕೇನ್ಸ್‌ ಚಲನಚಿತ್ರೋತ್ಸವದ ಪ್ರಶಸ್ತಿಗಾಗಿ ಸ್ಪರ್ಧಿಸಿವೆ.

ಇನ್ನು ಈ ಸಿನಿಮಾವನ್ನು ನಿರ್ದೇಶನ ಮಾಡಿರುವ ಡಾ ಚಿದಾನಂದ್ ಎಸ್ ನಾಯ್ಕ್‌ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಎಂಬಿಬಿಎಸ್ ಮುಗಿಸಿ ಕೆಲ ಸಮಯ ವೈದ್ಯರಾಗಿ ಕಾರ್ಯನಿರ್ವಹಿಸಿ ಚಿದಾನಂದ್ ನಂತರದಲ್ಲಿ ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್ ಸೇರಿದರು. ಅಲ್ಲಿ ಟೆಲಿವಿಷನ್ ವಿಭಾಗದಲ್ಲಿ ಡೈರೆಕ್ಷನ್ ಕಲಿತು, ಅದರ ಭಾಗವಾಗಿಯೇ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು...' ಶೀರ್ಷಿಕೆಯ ಪ್ರಾಯೋಗಿಕ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸರ್ಕಾರದಿಂದ ಈ ಕಿರುಚಿತ್ರ ನಿರ್ಮಾಣಕ್ಕೆ ಒಂದು ಲಕ್ಷ ವೆಚ್ಚ ಮಾಡಲಾಗಿದೆ. ಇದೀಗ ಕಾನ್‌ ಪ್ರಶಸ್ತಿ ಗೆಲ್ಲುವ ಮೂಲಕ ಚಿತ್ರ 15000 ಯೂರೊ(13.5 ಲಕ್ಷ) ಬಹುಮಾನ ಗಳಿಸಿದೆ.

Read More
Next Story