ಸಿನಿಮಾವನ್ನು ನಿಮ್ಮ ಡೈನಿಂಗ್ ಟೇಬಲ್‌ವರೆಗೆ ಒಯ್ಯಬೇಡಿ: ನಟ ಫಹಾದ್ ಫಾಸಿಲ್
ನನ್ನ ಸಿನಿಮಾವನ್ನು ನೋಡಿ ಥಿಯೇಟರ್‌ನಿಂದ ಹೊರಬಂದ ನಂತರ ನನ್ನನ್ನು ಗಂಭೀರವಾಗಿ ಪರಿಗಣಿಸಬೇಡಿ. ಥಿಯೇಟರ್‌ನಲ್ಲಿರುವಾಗ ಮಾತ್ರ ನನ್ನ ಬಗ್ಗೆ ಯೋಚಿಸಿ.
ತಮ್ಮ ನಟನೆಯ ಮೂಲಕವೇ ಪ್ರೇಕರನ್ನು ಮೋಡಿ ಮಾಡುವ ಪ್ರತಿಭಾವಂತ ನಟ ಫಹಾದ್ ಫಾಸಿಲ್. ಇವರು ಕೇವಲ ಮಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ಸಿನಿಮಾ 'ಆವೇಶಂ' ಉತ್ತಮ ಪ್ರಶಂಸೆಯನ್ನು ಪಡೆಯುತ್ತಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರ ಅಭಿನಯಕ್ಕಾಗಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಫಹಾದ್ ಫಾಸಿಲ್ ಅವರ ಒಂದು ಹೇಳಿಕೆ ಅಭಿಮಾನಿಗಳನ್ನು ಅಸಮಾಧಾನಗೊಳಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಗಲಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನಲ್ಲಿ ಫಹಾದ್ ಫಾಸಿಲ್ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನನ್ನ ಸಿನಿಮಾಗಳ ಬಗ್ಗೆ ಹೆಚ್ಚು ಚರ್ಚಿಸಬೇಡಿ
ʻʻನನ್ನ ಬಗ್ಗೆ ಬೇರೆ ರೀತಿಯಲ್ಲಿ ಯೋಚಿಸುವುದು ಅಥವಾ ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುವುದನ್ನು ನನ್ನ ಅಭಿಮಾನಿಗಳು ಚಿಂತಿಸುವುದನ್ನು ನಾನು ಬಯಸುವುದಿಲ್ಲ. ನನ್ನ ಸಿನಿಮಾವನ್ನು ನೋಡಿ ಥಿಯೇಟರ್‌ನಿಂದ ಹೊರಬಂದ ನಂತರ ನನ್ನನ್ನು ಗಂಭೀರವಾಗಿ ಪರಿಗಣಿಸಬೇಡಿ. ಥಿಯೇಟರ್‌ನಲ್ಲಿರುವಾಗ ಮಾತ್ರ ನನ್ನ ಬಗ್ಗೆ ಯೋಚಿಸಿ. ಜನರು ತಮ್ಮ ಡೈನಿಂಗ್ ಟೇಬಲ್‌ಗಳಲ್ಲಿ ನಟರ ಅಥವಾ ಅಭಿನಯದ ಬಗ್ಗೆ ಚರ್ಚೆ ನಡೆಸುವುದನ್ನು ನಾನು ಬಯಸುವುದಿಲ್ಲ. ಈ ವಿಷಯಗಳನ್ನು ಥಿಯೇಟರ್‌ನಲ್ಲಿ ಚರ್ಚಿಸಿ ಅಥವಾ ಮನೆಗೆ ಹಿಂದಿರುಗುವ ಸಮಯದಲ್ಲಿ ಚರ್ಚಿಸಿ. ಸಿನಿಮಾ ಎಂದರೆ ಅಷ್ಟೇ. ಅದಕ್ಕೂ ಮಿತಿಯಿದೆ. ಸಿನಿಮಾ ನೋಡುವುದಕ್ಕಿಂತ ನೀವು ಜೀವನದಲ್ಲಿ ಇನ್ನೂ ಹೆಚ್ಚಿನದ್ದನ್ನು ಮಾಡಬಹುದು" ಎಂದು ಅವರು ಹೇಳಿದ್ದಾರೆ. ಇವರ ಮಾತುಗಳ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ನಾನು ಧರ್ಮವನ್ನು ಮುಟ್ಟುವುದಿಲ್ಲ
ಇದೇ ಸಂದರ್ಶನದಲ್ಲಿ ಫಹಾದ್ ಫಾಸಿಲ್ ತಮ್ಮ 'ಟ್ರಾನ್ಸ್' ಚಿತ್ರದ ವೈಫಲ್ಯದ ಬಗ್ಗೆಯೂ ಮಾತನಾಡಿದ್ದಾರೆ. ಇನ್ನು ಮುಂದೆ ನಾನು ಧರ್ಮದ ವಿಷಯವನ್ನು ಮುಟ್ಟುವುದಿಲ್ಲ ಎಂದು ಪ್ರತಿಪಾದಿಸಿದರು. "ಕೇರಳದಲ್ಲಿ ಧರ್ಮದೊಂದಿಗೆ ವ್ಯವಹರಿಸುವ ಬಗ್ಗೆ ನನ್ನ ಮಿತಿ ಗೊತ್ತಿದೆ. ಜನರು ನಾನು ಕಟುವಾದ ವಾಸ್ತವವನ್ನು ಹೇಳಲು ಬಯಸಿದರೆ ಅವರು ಅದನ್ನು ಕೇಳಲು ಬಯಸುವುದಿಲ್ಲ. ಏಕೆಂದರೆ ಅವರು ಮನರಂಜನೆಯನ್ನು ಬಯಸುತ್ತಾರೆ. 'ಟ್ರಾನ್ಸ್' ಸಿನಿಮಾ ಮನರಂಜನಾ ಅಂಶವನ್ನು ಹೊಂದಿರಲಿಲ್ಲ ಎಂದು ಅವರು ತಿಳಿಸಿದರು. ಫಹಾದ್ ಫಾಸಿಲ್ ನಟನೆಯ 'ಟ್ರಾನ್ಸ್' ಸಿನಿಮಾದಲ್ಲಿ ಆ ಚಿತ್ರದಲ್ಲಿ ಧರ್ಮಗುರುವಿನ ಪಾತ್ರವನ್ನು ಫಹಾದ್ ಮಾಡಿದ್ದರು. ಧರ್ಮಗಳ ಕುರಿತ ಸಾಕಷ್ಟು ವಿಚಾರಗಳು ಆ ಸಿನಿಮಾದಲ್ಲಿ ಇದ್ದವು. ಫಹಾದ್ ಫಾಸಿಲ್ ನಟನೆಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ವೀಕ್ಷಣೆ ಮಾಡಿದವರಿಂದ ಉತ್ತಮ ಪ್ರತಿಕ್ರಿಯೆ ದಕ್ಕಿತ್ತು. ಹಾಗಿದ್ದರೂ ಕೂಡ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ.
ಟ್ರಾನ್ಸ್ ಸಿನಿಮಾದಲ್ಲಿ ಫಹಾದ್ ಫಾಸಿಲ್
ಮಲಯಾಳಂ ಸಿನಿಮಾ ಸ್ವಾವಲಂಬಿ
ಮಲಯಾಳಂ ಸಿನಿಮಾ ಸ್ವಾವಲಂಬಿಯಾಗಿದೆ ಮತ್ತು ಸಿನಿಮಾ ಪೂರ್ಣಗೊಳ್ಳುವ ಮುನ್ನವೇ ತಮ್ಮ ಚಲನಚಿತ್ರಗಳನ್ನು ಖರೀದಿಸಲು ಯಾವಾ ವೇದಿಕೆಗಳ ಮೇಲೆ ಕೂಡ ಅವಲಂಬಿತವಾಗಿಲ್ಲ ಎಂಬ ವಿಚಾರಕ್ಕೆ ಫಹಾದ್ ಫಾಸಿಲ್ ಸಂತೋಷ ವ್ಯಕ್ತಪಡಿಸಿದ್ದಾರೆ. "ನಾವು ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದು, ಅದು ಪ್ರೇಕ್ಷಕರನ್ನು ತಲುಪುತ್ತದೆ. ಸಿನಿಮಾಗಳು ವಿಭಿನ್ನವಾಗಿರುವುದರಿಂದ ಅವುಗಳು ಹೆಚ್ಚು ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
100 ಕೋಟಿ ಮುಟ್ಟಿದ ಆವೇಶಂ
ಸದ್ಯ ಫಾಹಾದ್ ಫಾಸಿಲ್ ಆವೇಶಂ ಸಿನಿಮಾದ ಯಶಸ್ಸಿನಲ್ಲಿದ್ದಾರೆ. 'ಆವೇಶಂ' 2024 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಮಲಯಾಳಂ ಚಿತ್ರವಾಗಿದೆ. 20 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ತೆರೆಕಂಡ 13 ದಿನಗಳಿಗೆ 100 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. 'ರೋಮಾಂಚಂ' ಸಿನಿಮಾ ಖ್ಯಾತಿಯ ಜಿತು ಮಾಧವನ್ ನಿರ್ದೇಶಿಸಿದ ಆಕ್ಷನ್ ಕಾಮಿಡಿ ಸಿನಿಮಾದಲ್ಲಿ, ಹಿಪ್ಜ್‌ಸ್ಟರ್, ಮಿಥುನ್ ಜೈ ಶಂಕರ್, ರೋಷನ್ ಶಾನವಾಸ್, ಮಿಧುಟ್ಟಿ, ಸಜಿನ್ ಗೋಪು ಮತ್ತು ಮನ್ಸೂರ್ ಅಲಿ ಖಾನ್ ಪಾತ್ರವರ್ಗದಲ್ಲಿದ್ದಾರೆ.
ಆವೇಶಂ ಸಿನಿಮಾದಲ್ಲಿ ಫಹಾದ್ ಫಾಸಿಲ್
ಸದ್ಯ ಫಹಾದ್ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪಾ 2: ದಿ ರೂಲ್' ಚಿತ್ರದಲ್ಲಿ ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ಅಭಿನಯದ 'ವೆಟ್ಟೈಯನ್' ಮತ್ತು 'ಮಾರೇಶನ್' ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.