ನಟ ಶೃಂಗ ನಟನೆಯ ‘ಚಿಲ್ಲಿ ಚಿಕನ್’ ಟೀಸರ್‌ ಬಿಡುಗಡೆ
x
ಚಿಲ್ಲಿ ಚಿಕೆನ್‌ ಸಿನಿಮಾಸ ಪೋಸ್ಟರ್‌

ನಟ ಶೃಂಗ ನಟನೆಯ ‘ಚಿಲ್ಲಿ ಚಿಕನ್’ ಟೀಸರ್‌ ಬಿಡುಗಡೆ

‘ಚಿಲ್ಲಿ ಚಿಕನ್’ ಟೀಸರ್‌ ಬಿಡುಗಡೆಯಾಗಿದೆ


Click the Play button to hear this message in audio format

ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ‘ಚಿಲ್ಲಿ ಚಿಕನ್’. ಉತ್ತರ ಭಾರತದ ವಿವಿಧ ರಾಜ್ಯಗಳಿಂದ ದುಡಿಯಲು ಬೆಂಗಳೂರಿಗೆ ಬಂದ ಹುಡುಗರ ಕಥೆ ಇದು.

ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡು ತಾವೇ ಹೊಸದಾಗಿ ಚೈನೀಸ್ ರೆಸ್ಟೋರೆಂಟ್ ಪ್ರಾರಂಭಿಸಲು ಮುಂದಾದಾಗ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ? ಆ ಎಲ್ಲ ತೊಂದರೆಗಳಿಂದ ಪಾರಾಗಿ ಗೆಲ್ಲುತ್ತಾರಾ? ಎಂಬುದು ಸಿನಿಮಾದ ಕಥಾ ಹಂದರ.

ನಟ ಶೃಂಗ ಅಭಿನಯದ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಅದರಂತೆ ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿರುವುದು ವಿಶೇಷ. ಚಿತ್ರದ ನಿರ್ದೇಶಕರು ಕೇರಳ ಮೂಲದವರು. ನಿರ್ಮಾಪಕರು ಗುಜರಾತ್ ಹಾಗೂ ಕಲಾವಿದರು ಮಣಿಪುರ, ಮೇಘಾಲಯ, ಚೆನ್ನೈ ಹೀಗೆ ವಿವಿಧ ರಾಜ್ಯಗಳಿಂದ ಬಂದವರಾಗಿದ್ದಾರೆ.

ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ದೀಪ್ ಭೀಮಾಜಿಹಾನಿ ಮಾತಾಡಿ ʻʻನಾವು ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಶುರು ಮಾಡಿದ್ದು ಜೂನ್ ನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ.‌ ನಾನು ಹವ್ಯಾಸಿ ನಿರ್ಮಾಪಕನಾಗಿ ಹಿಂದಿಯಲ್ಲಿ ಒಂದಿಷ್ಟು ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡಿದ್ದೇನೆ’ʼ ಎಂದು ಹೇಳಿದ್ದಾರೆ.

ನಂತರ ನಟ ಶೃಂಗ ಮಾತನಾಡಿ ‘ನಾನು ಇದರಲ್ಲಿ ಆದರ್ಶ ಎಂಬ ಹೊಟೇಲ್ ಮಾಲೀಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ತುಂಬಾ ಸೂಕ್ಷ್ಮವಾದ ಅಂಶಗಳನ್ನು ಅಚ್ಚುಕಟ್ಟಾಗಿ ವ್ಯೂಮರಸ್ ಕಾಮಿಡಿ ಮೂಲಕ ಹೇಳಲಾಗಿದೆ. ಬೇರೆ ರಾಜ್ಯದಿಂದ ಬಂದ ಹುಡುಗರು ಕೆಲಸ ಮಾಡಿಕೊಂಡು ರೆಸ್ಟೋರೆಂಟ್ ಪ್ರಾರಂಭ ಮಾಡುವಾಗ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ? ನಾವು ಬೇರೆಯವರನ್ನು ಹೇಗೆ ನೋಡುತ್ತೇವೆ ಮತ್ತು ಅವರು ನಮ್ಮೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ’ ಎಂದರು.

ನಟಿ ರೀನಿ ಮಾತನಾಡಿ ‘ಉತ್ತರ ಭಾರತೀಯ ಹುಡುಗಿ ಅನು ಪಾತ್ರ ಮಾಡಿದ್ದೇನೆ. ನಾನು ಚೆನ್ನೈ ಮೂಲದವಳು. ತಮಿಳು, ತೆಲಗು, ಮಲಯಾಳಂ ಸಿನಿಮಾ ಮಾಡಿದ್ದೇನೆ’ ಎಂದರು. ಮತ್ತೋರ್ವ ನಟಿ ನಿತ್ಯಶ್ರೀ ‘ನಾನು ವರ್ಷಾ ಹೆಸರಿನಲ್ಲಿ ನಾಯಕನ ಗರ್ಲ್‌ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು.

ಚಿತ್ರವನ್ನು ಪ್ರತೀಕ್ ಪ್ರಜೋಶ್ ನಿರ್ದೇಶನ ಮಾಡಿದ್ದು ಇವರು ‘ಪದ್ಮಾವತ್’ ಸೇರಿದಂತೆ ಹಿಂದಿ, ಮಲಯಾಳಂ, ಗುಜರಾತಿ ಸೇರಿದಂತೆ ಹಲವು ಭಾಷೆ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಜತೆಗೆ ಕೆಲವು ಶಾರ್ಟ್ ಫಿಲ್ಮ್ ಮಾಡಿದ್ದು, ಇದೀಗ ಮೊದಲಬಾರಿ ‘ಚಿಲ್ಲಿ ಚಿಕನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ, ‘ನಾಲ್ಕು ಜನ ಉತ್ತರ ಭಾರತೀಯರು ಸೇರಿ ಬೆಂಗಳೂರಿನಲ್ಲಿ ಚೈನಿಸ್ ರೆಸ್ಟೋರೆಂಟ್ ವೊಂದನ್ನು ಪ್ರಾರಂಭ ಮಾಡಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದು ಆಗುತ್ತಾ, ಇಲ್ವಾ ಅನ್ನೋದೆ ಸಿನಿಮಾ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು,‌ ಬಹಳ ಇಂಟರೆಸ್ಟ್ ಆಗಿ ಕಥೆ ಸಾಗುತ್ತದೆ. ತಂಡದ ಶ್ರಮ ತುಂಬಾ ಇದ್ದು, ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಕೊರಿಯನ್ ಡ್ರಾಮಾ ಮಾದರಿಯಲ್ಲಿ ಸಿನಿಮಾ ಇದ್ದು, ನಾವು ಕನ್ನಡ ಡ್ರಾಮಾ ಸಿನೆಮಾ ಎನ್ನಬಹುದು’ ಎಂದು ಹೇಳಿದರು.

ಮೆಟನೋಯ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದೀಪ್ ಭೀಮಾಜಿಹಾನಿ ಹಾಗೂ ಸುಧಾ ನಂಭಿಯಾರ್ ನಿರ್ಮಾಣದ ಚಿತ್ರಕ್ಕೆ ಸಿದ್ದಾಂತ್ ಸುಂದರ್ ಸಂಗೀತ, ಶ್ರೀಶ್ ತೋಮರ್ ಛಾಯಾಗ್ರಹಣ, ಆಶಿಕ್ ಕೆ.ಎಸ್ ಸಂಕಲನವಿದೆ. ತಾರಾಗಣದಲ್ಲಿ ಬಿಜು ತಾಂಜಿಂ, ವಿಕ್ಟರ್ ತೋಡಂ, ಜಿಂಪಾ ಭುಟಿಯಾ, ಟಾಮ್ ಥಿನ್ ಥೋಕ್ ಚೋಮ್, ಹಿರಾಕ್ ಸೋನಾವಾಲ್, ಪದ್ಮಜಾ ರಾವ್ ಮುಂತಾದವರು ಅಭಿನಯ ಮಾಡಿದ್ದಾರೆ.

Read More
Next Story