ವೀರಶೈವ-ಲಿಂಗಾಯತ ಪಂಥದ ಅಸ್ಮಿತೆಗಾಗಿ ಚುನಾವಣಾ ಅಖಾಡಕ್ಕಿಳಿದ ದಿಂಗಾಲೇಶ್ವರ ಶ್ರೀ
ಇದು ಇತ್ತೀಚಿನ ರಾಜಕೀಯ ಬೆಳವಣಿಗೆಯಾದ ʼಕಾವಿಧಾರಿಗಳ ಖಾದಿ ಸೆಳೆತ ವಲ್ಲʼ; ಬಿಜೆಪಿ ನಾಯಕರು ಸತತವಾಗಿ ಸಮುದಾಯವನ್ನು ಬಳಸಿಕೊಂಡು, ನಂತರ ಅವಶ್ಯಕತೆ ಪೂರ್ಣಗೊಂಡ ನಂತರ ಪಕ್ಕಕ್ಕೆ ಸರಿಸುವ ಪರಿಪಾಠದ ವಿರುದ್ಧದ ಹೋರಾಟ. ದೇಶದ ರಾಜಕಾರಣದಲ್ಲಿ, ಕಾವಿಧಾರಿಗಳು ಅಧಿಕಾರ ರಾಜಕಾರಣದ ಅಂಗಳ ಪ್ರವೇಶಿಸಲು ಪ್ರಯತ್ನಿಸಿದ ನಿದರ್ಶನವಿದೆ. ಆದರೆ ಯಶಸ್ಸಿನ ಪ್ರಮಾಣ ಮಾತ್ರ ಬೆರಳೆಣಿಕೆಯಷ್ಟು. ಈಗ ದಿಂಗಲೇಶ್ವರ ಸ್ವಾಮೀಜಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯದ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಧಾರ್ಮಿಕ ಮಠಗಳ ಕಾವಿಧಾರಿ ಮಠಾಧಿಪತಿಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಪ್ರಯತ್ನ ಕರ್ನಾಟಕದ ರಾಜಕೀಯ ಇತಿಹಾಸಕ್ಕೇನೂ ಹೊಸತಲ್ಲ. ಅದರ ಮುಂದುವರಿದ ಭಾಗವಾಗಿ ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಫಕೀರೇಶ್ವರ ಪೀಠದ ಫಕೀರ ದಿಂಗಲೇಶ್ವರ ಸ್ವಾಮೀಜಿ, ಸ್ವತಂತ್ರ ಅಭ್ಯರ್ಥಿಯಾಗಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ.
ಈ ಹಿಂದೆ ಕಾವಿಧಾರಿಗಳು ಅಧಿಕಾರ ರಾಜಕಾರಣದ ಅಂಗಳಕ್ಕೆ ಇಳಿಯಲು ಪ್ರಯತ್ನಿಸಿದ್ದಕ್ಕೂ, ದಿಂಗಲೇಶ್ವರ ಸ್ವಾಮೀಜಿ ಅವರು ಲೋಕಸಭೆಗೆ ಸ್ಪರ್ಧಿಸುತ್ತಿರುವುದಕ್ಕೂ ವ್ಯತ್ಯಾಸವಿದೆ. “ದಿಂಗಲೇಶ್ವರ ಸ್ವಾಮೀಜಿ ವೀರಶೈವ-ಲಿಂಗಾಯತರ ಅಸ್ಮಿತೆಯ ಉಳಿವಿಗಾಗಿ” ಅಧಿಕಾರ ರಾಜಕಾರಣಕ್ಕಾಗಿ ಚುನಾವಣೆಗೆ ಇಳಿಯಲಿದ್ದಾರೆ. ಈ ಹಿಂದೆ ನಮಗೆ ಲಿಂಗಾಯತ ಮತಗಳ ಅವಶ್ಯಕತೆಯೇ ಇಲ್ಲ ಎಂದು ಹೇಳಿದ ಬಿಜೆಪಿ ನಾಯಕರ ವಿರುದ್ಧದ ಪ್ರತಿಭಟನೆಯ ಹೋರಾಟ ಇದು ಎಂದು ಎನ್ನಿಸುತ್ತಿದೆ” ಎನ್ನುವುದು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ ನಾಯಕರೊಬ್ಬರ ಅನಿಸಿಕೆ.
ಈ ಲೋಕಸಭಾ ಕ್ಷೇತ್ರದಲ್ಲಿ ಎದುರಿಸುತ್ತಿರುವುದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಎನ್ನುವುದು ಇಲ್ಲಿ ಮುಖ್ಯ. ಜೋಶಿ ಅವರ ವಿರುದ್ಧ ಅವರದು ಧರ್ಮ ಯದ್ಧವೆಂದು ಅವರು ಸಮರ್ಥಿಸಿಕೊಂಡಿರುವುದೇ ಅಲ್ಲದೆ, ಧರ್ಮದ ಉಳಿವಿಗಾಗಿ ತಾವು ರಾಜಕೀಯಕ್ಕೆ ಇಳಿಯುವುದು ಅನಿವಾರ್ಯ ಎಂದು ಘೋಷಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಜೋಶಿ ಅವರನ್ನು ಅಭ್ಯರ್ಥಿ ಮಾಡಬೇಡಿ ಅವರನ್ನು ಬದಲಾಯಿಸಿ, ಬೇರೆ ಯಾರನ್ನಾದರೂ ಅಭ್ಯರ್ಥಿ ಮಾಡಿ ಎಂದು ದಿಂಗಲೇಶ್ವರ ಹಾಗೂ ಇತರ ವೀರಶೈವ-ಲಿಂಗಾಯತ ಮಠಾಧೀಶರು ಬಿಜೆಪಿ ಪಕ್ಷಕ್ಕೆ ಒತ್ತಾಯಿಸಿದರು. ಆದರೆ ಜೋಶಿ ಅವರಿಗೆ ಹೈಕಮಾಂಡ್ ಮೇಲೆ ಇರುವ ಪ್ರಭಾವವನ್ನು ಪರಿಗಣಿಸಿ, ವೀರಶೈವ-ಲಿಂಗಾಯತ ಕೋಮಿನ ಅಘೋಷಿತ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಠಾಧೀಶರ ಒತ್ತಾಯಕ್ಕೆ ಮಣಿಯಲಿಲ್ಲ. ಜೋಶಿ ಅವರನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದಾಗ ದಿಂಗಲೇಶ್ವರ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿವಾರ್ಯವಾಯಿತು ಎನ್ನುವುದು ದಿಂಗಲೇಶ್ವರರ ವಾದ.
ಹಾಗಾದರೆ ಜೋಶಿ ಅವರ ವಿರುದ್ಧ ದಿಂಗಲೇಶ್ವರ ಅವರು ಮುನಿದಿರುವುದೇಕೆ?
“ಅಲ್ಪಸಂಖ್ಯಾತ (ಬ್ರಾಹ್ಮಣ) ಸಮುದಾಯಕ್ಕೆ ಸೇರಿದ ಜೋಶಿ ಅವರು ಬಹುಸಂಖ್ಯಾತ ವೀರಶೈವ-ಲಿಂಗಾಯತ ಮತಾನುಯಾಯಿಗಳನ್ನು ತುಳಿಯಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.” ಎನ್ನುವುದು ಸ್ವಾಮೀಜಿ ಆರೋಪವಾಗಿದೆ.
ವೀರಶೈವ-ಲಿಂಗಾಯತರು ಸತತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದರೂ, ಅವರನ್ನು ತುಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನುವುದು ಅವರ ಅನಿಸಿಕೆ. ಹಾಗೆಂದು ದಿಂಗಲೇಶ್ವರ ಸ್ವಾಮೀಜಿ ಅವರು ಕಾಂಗ್ರೆಸ್ ಪರವಾಗೇನೂ ನಿಂತಿಲ್ಲ. ಎಲ್ಲ ರಾಷ್ಟ್ರೀಯ ಪಕ್ಷಗಳೂ ತಮ್ಮ ವೀರಶೈವ-ಲಿಂಗಾಯತರ ವಿರುದ್ಧವಾಗಿ ನಿಂತಿರುವುದರಿಂದ, ತಮ್ಮ ಸಮುದಾಯದ ಹಿತಾಸಕ್ತಿ ಕಾಪಾಡಲು ಕಾವಿ ತೊರೆದು ಕಾವಿ ಬಣ್ಣದ ಖಾದಿ ತೊಡುವುದು ಅನಿವಾರ್ಯ ಎಂಬುದು ಅವರ ನಂಬಿಕೆ.
ಪ್ರಸಕ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವು ಮಠಾಧೀಶರು ರಾಜಕೀಯ ಪಕ್ಷಗಳು ಹಾಗೂ ಕೆಲವು ಆಯ್ದ ಪ್ರಭಾವಿ ರಾಜಕಾರಣಿಗಳನ್ನು ಬೆಂಬಲಿಸುವ ಮೂಲಕ ಪರೋಕ್ಷ ರಾಜಕಾರಣ ಮಾಡುತ್ತಿದ್ದರೆ ಮತ್ತೊಂದೆಡೆ ದಿಂಗಾಲೇಶ್ವರ ಸ್ವಾಮೀಜಿ ನೇರವಾಗಿ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ.
ಮಠಾಧೀಶರುಗಳ ರಾಜಕೀಯ ಪ್ರವೇಶ ದೇಶಕ್ಕೆ ಹಾಗೂ ಕರ್ನಾಟಕ್ಕೆ ಹೊಸದೇನಲ್ಲ. ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಎರಡು ಅವಧಿಗೆ ಆಯ್ಕೆಯಾದ ನಂತರವಂತೂ, ರಾಜ್ಯದಲ್ಲಿ ಮಠಾಧೀಶರ ರಾಜಕೀಯ ಪ್ರವೇಶದ ಕುರಿತ ಚರ್ಚೆ ತೀವ್ರಗೊಂಡಿದೆ.
ಇದುವರೆಗೆ ಅನೇಕ ಕಾವಿಧಾರಿಗಳು ಕರ್ನಾಟಕದಲ್ಲಿ ರಾಜಕೀಯ ಪ್ರವೇಶಿಸಿ, ಅಧಿಕಾರ ಹಿಡಿಯಲು ಪ್ರಯತ್ನಿಸಿದ್ದರೂ, ರಾಜ್ಯದಿಂದ ಇದುವರೆಗೆ ಒಬ್ಬ ಕಾವಿಧಾರಿ ಕೂಡ ಜನಪ್ರತಿನಿಧಿ ಆಗುವ ಅವಕಾಶ ಲಭಿಸಿಲ್ಲ. ಆದರೆ ಈಗ ಧಾರವಾಡ ಲೋಕಸಭಾ ಅಖಾಡಕ್ಕಿಳಿಯಲು ಸಜ್ಜಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಶತಾಗತಾಯ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ.
ಶಿರೂರು ಮಠಾಧೀಶರ ರಾಜಕೀಯ ಪ್ರವೇಶ ಯತ್ನ
ಚುನಾವಣಾ ರಾಜಕೀಯಕ್ಕೆ ಪ್ರವೇಶ ಪಡೆಯಲು ರಾಜ್ಯದಲ್ಲಿ ಅನೇಕ ಮಠಾಧೀಶರು ಪ್ರಯತ್ನಿಸಿದ್ದರು. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದರು. ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವ ಯೋಚನೆಯನ್ನೂ ಮಾಡಿದ್ದರು. ಆದರೆ ಕೊನೆಯ ಹಂತದಲ್ಲಿ ಬಿಜೆಪಿ ನಾಯಕರ ಒತ್ತಾಯಕ್ಕೆ ಮಣಿದು ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಇದೇ ರೀತಿ ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ರಾಮಾರೂಢ ಮಠದ ಪರಮ ರಾಮಾರೂಢ ಸ್ವಾಮೀಜಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಆದರೆ ಟಿಕೆಟ್ ಸಿಗದ ಹಿನ್ನೆಲೆ ಅವರು ಕೂಡ ಪಕ್ಷೇತರ ಅಭ್ಯರ್ಥಿಯಾಗುವ ಹುಮ್ಮಸ್ಸಿನಲ್ಲಿದ್ದರು. “ಆದರೆ ಮಠಾಧೀಶರೇ ರಾಜಕೀಯಕ್ಕೆ ಬಂದರೆ, ತಮ್ಮ ರಾಜಕಾರಣಕ್ಕೆ ಧಕ್ಕೆ ಎಂದು, ಬಿಜೆಪಿಯ ನಾಯಕರು ಮಠಾಧೀಶರನ್ನು ಚುನಾವಣಾ ರಾಜಕೀಯದಿಂದ ದೂರವೇ ಇರಿಸಿದರು, ಎಂಬುದು ಹೆಸರು ಬಹಿರಂಗ ಪಡಿಸಲು ಬಯಸದ ವೀರಶೈವ-ಲಿಂಗಾಯತ ಮಠಾಧೀಶರ ನೋವಿನ ಮಾತು.
ಕಾವಿಯಿಂದ ಖಾದಿಯತ್ತ ಮಠಾಧೀಶರು:-
2018ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಚಳವಳಿಯ ಹೃದಯಭಾಗ ಎನಿಸಿಕೊಂಡಿರುವ ಉತ್ತರ ಕರ್ನಾಟಕ ಭಾಗದ ವಿವಿಧ ಧಾರ್ಮಿಕ ಮಠಗಳನ್ನು ಪ್ರತಿನಿಧಿಸುವ ಕನಿಷ್ಠ 12 ಮಠಾಧೀಶರು ಚುನಾವಣಾ ರಾಜಕೀಯಕ್ಕೆ ಸೇರುವ ಆಸೆಯಿಂದ ಮೂರು ದೊಡ್ಡ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ) ಅನ್ನು ಸಂಪರ್ಕಿಸಿದ್ದರು. ಆದರೆ ಯಾರಿಗೂ ಯಾವ ಪಕ್ಷವೂ ಬೆಂಬಲಿಸಲಿಲ್ಲ.
2023ರ ವಿಧಾನಸಭಾ ಚುನಾವಣೆ ವೇಳೆ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಮತಕ್ಷೇತ್ರದಿಂದ ನೇಕಾರ ಸಮುದಾಯದ ಗುರೂಜಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ವಾಪಸ್ ಪಡೆದಿದ್ದರು.
ಆ ವೇಳೆ ಮಾತನಾಡಿದ್ದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ʻʻಖಾವಿಧಾರಿಗಳು, ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದು ಅಂತೇನಿಲ್ಲʼʼ ಎಂದು ಹೇಳಿದ್ದರು.
ಅಷ್ಟೇ ಅಲ್ಲ, “ಯೋಗಿ ಆದಿತ್ಯನಾಥ ನಮ್ಮ ಗುರುಗಳು, ನಮ್ಮ ಶಕ್ತಿ ಕೂಡ ಆಗಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯದ ಅನೇಕ ಸ್ವಾಮೀಜಿಗಳು ಯೋಗಿ ಆದಿತ್ಯನಾಥ್ ಅವರನ್ನು ಪ್ರೇರಣೆಯಾಗಿ ಪಡೆದಿರುವುದನ್ನು ಹೇಳಿಕೊಂಡಿದ್ದರು.
ರಾಜ್ಯದ ವಿವಿಧ ಭಾಗಗಳಲ್ಲಿ ರಾಜಕಾರಣದತ್ತ ಒಲವು ಹೊಂದಿರುವ ಸ್ವಾಮೀಜಿಗಳು:-
ಮಂಗಳೂರು ಸಮೀಪದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿಗಳು, ಭಟ್ಕಳ ಕ್ಷೇತ್ರದಿಂದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಧಾರವಾಡ ಜಿಲ್ಲೆಯ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮಿಗಳು; ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳಿದ್ದವು, ಆದರೆ ಇವರಿಗೆ ಪಕ್ಷಗಳು ಅವಕಾಶ ಕೊಡಲಿಲ್ಲ. ಹಾವೇರಿ ಜಿಲ್ಲೆಯ ಅರೇಮಲ್ಲಾಪುರದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮಿಗಳು, ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿ, ಶಿವಯೋಗಿ ಮಠದ ತ್ರಿನೇತ್ರ ಮಹಾಂತ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ನಾಡು ಪಕ್ಷದ ಅಭ್ಯರ್ಥಿಯಾಗಿ ದಿ. ಮಾತೆ ಮಹಾದೇವಿ ಅವರು ಸ್ಪರ್ಧಿಸಿದ್ದರಾದರೂ ಯಶಸ್ಸು ಸಿಗಲಿಲ್ಲ.
“ಉತ್ತರ ಭಾರತದ ರಾಜ್ಯಗಳಲ್ಲಿನ ಸ್ವಾಮೀಜಿಗಳಿಗೆ ರಾಜಕಾರಣದಲ್ಲಿ ಸಿಕ್ಕ ಅವಕಾಶಗಳು ಹಾಗೂ ಯಶಸ್ಸು ದಕ್ಷಿಣ ಭಾರತದ ಸ್ವಾಮೀಜಿಗಳಿಗೆ ಸಿಕ್ಕಿಲ್ಲ” ಎನ್ನುವುದು ಹಲವು ಮಠಾಧೀಶರ ಮನಸ್ಸಿನಲ್ಲಿ ಕೊರೆಯುತ್ತಿದೆ. ಅವಕಾಶ ಸಿಕ್ಕರೆ ತಾವೇಕೆ ಯೋಗಿ ಆದಿತ್ಯನಾಥರಾಗಬಾರದು” ಎಂಬ ಕನಸು ಹೊತ್ತವರೇನೂ ಕಡಿಮೆ ಇಲ್ಲ” ಎನ್ನುತ್ತಾರೆ ಬಿಜೆಪಿಯ ಹಿರಿಯ ಲಿಂಗಾಯತ ನಾಯಕ.
ಮಧ್ಯಪ್ರದೇಶ, ಹರಿಯಾಣ, ಉತ್ತರಪ್ರದೇಶ ಸೇರಿ ಉತ್ತರ ಭಾರತದ ಹಲವೆಡೆ ಈವರೆಗಿನ ಚುನಾವಣೆಗಳಲ್ಲಿ 100ಕ್ಕೂ ಹೆಚ್ಚು ಸನ್ಯಾಸಿಗಳು ರಾಜಕೀಯ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶದ ಗೊರಖಪುರ ಲೋಕಸಭಾ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ, ಅವರ ಗುರು ಮಹಾಂತ ಅವೈದ್ಯನಾಥ ಹಾಗೂ ಮಹಾಂತ ದಿಗ್ವಿಜಯನಾಥ ಸ್ವಾಮೀಜಿಗಳು 11 ಅವಧಿಗೆ ಲೋಕಸಭಾ ಪ್ರವೇಶಿಸಿದ್ದರು.
ಸಧ್ಯ ಉತ್ತರ ಭಾರತದ ಸ್ವಾಮೀಜಿಗಳಂತೆ ತಾವೂ ರಾಜಕಾರಣದಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿರುವ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೋಶಿ ಅವರನ್ನು ಸೋಲಿಸಿ, ಲೋಕಸಭೆಯನ್ನು ಪ್ರವೇಶಿಸುವರೇ? ಎಂಬುದು ವೀರಶೈವ-ಲಿಂಗಾಯತ ಸಮುದಾಯದ ಪ್ರಶ್ನೆಯಾಗಿದೆ. “ದಿಂಗಲೇಶ್ವರ ಅಕಸ್ಮಿಕವಾಗಿ ಯಶಸ್ಸು ಸಾಧಿಸಿದರೆ, ರಾಜ್ಯದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಒಂದಷ್ಟು ಕಾವಿಧಾರಿಗಳು ವಿಧಾನ ಸೌಧ ಪ್ರವೇಶಿಸುವ ಸಾಧ್ಯತೆ ಇದೆ “ಎನ್ನುವುದು ಬಿಜೆಪಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.