ಲಷ್ಕರ್‌ ಉಗ್ರನನ್ನು ರುವಾಂಡದಿಂದ ಬೆಂಗಳೂರಿಗೆ ಬಂಧಿಸಿ ತಂದಿದ್ದೇ ರೋಚಕ ಕಾರ್ಯಾಚರಣೆ
x

ಲಷ್ಕರ್‌ ಉಗ್ರನನ್ನು ರುವಾಂಡದಿಂದ ಬೆಂಗಳೂರಿಗೆ ಬಂಧಿಸಿ ತಂದಿದ್ದೇ ರೋಚಕ ಕಾರ್ಯಾಚರಣೆ

29 ವರ್ಷದ ಆರೋಪಿ ಸಲ್ಮಾನ್‌ ರಹಮಾನ್‌ ಖಾನ್‌ ಪೋಕ್ಸೊ ಪ್ರಕರಣದಲ್ಲಿ2018ರಿಂದ 2022ರವರೆಗೆ ಜೈಲಿನಲ್ಲಿದ್ದ. ತಡಿಯಂತವಿಡೆ ನಜೀರ್‌ ಎಂಬಾತ ಆತನಿಗೆ ಉಗ್ರ ಸಂಘಟನೆಯ ನಂಟು ಸಾಧಿಸಿ ಕೊಟ್ಟಿದ್ದ.


ಬೆಂಗಳೂರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದ ಲಷ್ಕರ್‌ ಎ ತಯ್ಬಾದ (LET) ಉಗ್ರ ಸಲ್ಮಾನ್‌ ರಹಮಾನ್‌ ಖಾನ್‌ ಗುರುವಾರ ಬೆಂಗಳೂರಿಗೆ ತರಲಾಗಿತ್ತು. ಆದರೆ, ಆತನನ್ನು ಭಾರತಕ್ಕೆ ಕರೆ ತರುವುದಕ್ಕಾಗಿ ನಡೆಸಿರುವ ಕಾರ್ಯಾಚರಣೆಯೇ ರೋಚಕವಾಗಿತ್ತು. ಮೋಸ್ಟ್‌ ವಾಂಟೆಡ್‌ ಉಗ್ರನಾಗಿದ್ದ ಆತನನ್ನು ವಿದೇಶದಲ್ಲಿ ಬಂಧಿಸಿ ತರುವುದು ಸುಲಭದ ಕೆಲಸವಾಗಿರಲಿಲ್ಲ. ಸಿಬಿಐ ಮತ್ತು ಎನ್‌ಐಎ ರುವಾಂಡದಲ್ಲಿರುವ ಇಂಟರ್‌ಪೋಲ್‌ ಅಧಿಕಾರಿಗಳ ಮೂಲಕ ಆತನನ್ನು ಬಂಧಿಸಿದೆ.

29 ವರ್ಷದ ಆರೋಪಿ ಸಲ್ಮಾನ್‌ ರಹಮಾನ್‌ ಖಾನ್‌ ಪೋಕ್ಸೊ ಪ್ರಕರಣದಲ್ಲಿ2018ರಿಂದ 2022ರವರೆಗೆ ಜೈಲಿನಲ್ಲಿದ್ದ. ಈ ವೇಳೆ ಜೈಲಿನಲ್ಲಿ ಪರಿಚಯವಾಗಿದ್ದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಡಿಯಂತವಿಡೆ ನಜೀರ್‌ ಎಂಬಾತ ಆತನಿಗೆ ಉಗ್ರ ಸಂಘಟನೆಯ ನಂಟು ಸಾಧಿಸಿ ಕೊಟ್ಟಿದ್ದ. ಆತನ ವಿರುದ್ಧ ಪಿತೂರಿ, ಶಸ್ತ್ರಾಸ್ತ್ರ ಕಾಯಿದೆ, ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಕೇಸ್‌ ದಾಖಲಿಸಾಗಿದೆ. ಸಲ್ಮಾನ್‌ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂತೆಯೇ ಕಳೆದ ವರ್ಷ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.

ಉಗ್ರನಾಗಿ ಬದಲಾದ ಸಲ್ಮಾನ್‌ ಭಾರತ ಬಿಟ್ಟು ಪಲಾಯನ ಮಾಡಿದ್ದ. ನಾನಾ ದೇಶಗಳಿಗೆ ಹೋಗಿ ಉಳಿಯಲು ಯತ್ನಿಸಿದ್ದ. ಆದರೆ, ಕೇಂದ್ರೀಯ ತನಿಖಾ ದಳ (CBI) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನ ಬಂಧನಕ್ಕೆ ಬಲೆ ಬೀಸಿತ್ತು. ರುವಾಂಡ ರಾಜಧಾನಿ ಕಿಗಾಲಿಯಲ್ಲಿರುವ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಮೂಲಕ ಆತನನ್ನು ಬಂಧಿಸಲಾಗಿದೆ.

ಸಲ್ಮಾನ್‌ ಬಂಧನಕ್ಕಾಗಿ ಪೊಲೀಸರು ʼರೆಡ್‌ ನೋಟಿಸ್‌ʼ ಹೊರಡಿಸಿದ್ದರು. ಹೀಗಾಗಿ ರುವಾಂಡದ ರಾಜಧಾನಿಯಲ್ಲಿರುವ ಪೊಲೀಸರು ಉಗ್ರ ಅಲ್ಲಿಗೆ ತೆರಳುತ್ತಿದ್ದಂತೆ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಗಳನು?

ಕ್ರಿಮಿನಲ್ ಪಿತೂರಿ, ಭಯೋತ್ಪಾದಕ ಸಂಘಟನೆಯ ಸದಸ್ಯ, ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದ ಇತರ ಅಪರಾಧಗಳಲ್ಲಿ ಖಾನ್‌ ಭಾಗಿಯಾಗಿದ್ದ. . ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಪೂರೈಸಿದ್ದಕ್ಕಾಗಿ ಖಾನ್ ವಿರುದ್ಧ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಖಾನ್‌ ಮೇಲೆ ಪ್ರಕರಣ ದಾಖಲಾಗಿದೆ.

ಸಿಬಿಐನ ಕೋರಿಕೆ ಮೇರೆಗೆ, NIA ಆಗಸ್ಟ್ 2 ರಂದು ಖಾನ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (RCN) ಅನ್ನು ಜಾರಿಗೊಳಿಸಿತ್ತು. ಬಳಿಕ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರವಾಗಿಸಿಕೊಂಡು ರುವಾಂಡದಲ್ಲಿ ಆತನ್ನು ಪತ್ತೆ ಮಾಡಲಾಗಿದೆ. ರುವಾಂಡಾ ಇನ್ವೆಸ್ಟಿಗೇಶನ್ ಬ್ಯೂರೋ ಆತನ್ನು ಹಸ್ತಾಂತರ ಮಾಡಿದೆ.

ಏಳು ದಿನ ನ್ಯಾಯಾಂಗ ಬಂಧನ

ಆರೋಪಿ ಸಲ್ಮಾನ್‌ನನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿಗ ಭದ್ರತೆಯೊಂದಿಗೆ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಸಿಟಿ ಸಿವಿಲ್‌ ಕೋರ್ಟ್‌ನ 50ನೇ ಎನ್‌ಐಎ ವಿಶೇಷ ನ್ಯಾಯಾಲಯ ಆತನಿಗೆ 7 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಎನ್‌ಐಎ ಪರ ಪಿ. ಪ್ರಸನ್ನ ಕುಮಾರ್‌ ವಾದ ಮಾಡಿದರು.

ಸೌದಿಯಿಂದಲೂ ಇಬ್ಬರ ಸೆರೆ

ಇಂಟರ್‌ಪೋಲ್‌ ರೆಡ್‌ ನೋಟಿಸ್‌ ಪ್ರಕಾರ ಸೌದಿಯಿಂದಲೂ ಇಬ್ಬರನ್ನು ಬಂಧಿಸಲಾಗಿದೆ. ಕೇರಳ ಪೊಲೀಸರು ಹಾಗೂಸಿಬಿಐ ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಬರ್ಕತ್‌ ಅಲಿ ಖಾನ್‌, ರೆಹಾನ್‌ ಬಂಧಿತರು. 2012ರಲ್ಲಿ ನಡೆದ ಗಲಾಟೆ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಬರ್ಕತ್‌ ಸಿಬಿಐಗೆ ಬೇಕಾಗಿದ್ದ. ಆತನನ್ನು ನವೆಂಬರ್‌ 14ರಂದು ಸೌದಿಯಲ್ಲಿ ಬಂಧಿಸಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ರೆಹಾನ್‌ ಪೊಲೀಸರಿಗೆ ಬೇಕಾಗಿದ್ದ. ಆತನನ್ನು ನವೆಂಬರ್‌ 10ರಂದು ಬಂಧಿಸಿ ಕರೆ ತರಲಾಗಿದೆ

Read More
Next Story