
IPL 2025: ಬೌಲರ್ ಆಗಿದ್ದವ ಈಗ ಭಯಂಕರ ಬ್ಯಾಟರ್; ಡೆಲ್ಲಿ ಗೆಲ್ಲಿಸಿದ ವಿಪ್ರಜ್ ಯಾರು?
ವಿಪ್ರಜ್ ನಿಗಮ್ ಕೇವಲ 15 ಎಸೆತಗಳಲ್ಲಿ 39 ರನ್ಗಳ ಧಮಾಕಾ ಬ್ಯಾಟಿಂಗ್ ಮಾಡಿ ಚೈತನ್ಯ ತಂದರು. ಆಶುತೋಷ್ ಶರ್ಮಾ ಜೊತೆಗೆ 55 ರನ್ಗಳ ಜೊತೆಯಾಟವಾಡಿ ವಿಜಯದಲ್ಲಿ ಪ್ರಧಾನ ಪಾತ್ರ ವಹಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವು ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವಿರುದ್ಧ 1 ವಿಕೆಟ್ ರೋಮಾಂಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡಿಸಿಯ ಯುವ ಆಲ್ರೌಂಡರ್, 20 ವರ್ಷದ ವಿಪ್ರಜ್ ನಿಗಮ್ ತಮ್ಮ ಚೊಚ್ಚಲ ಪಂದ್ಯದಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 210 ರನ್ಗಳ ಗುರಿಯನ್ನು ಬೆನ್ನಟ್ಟುವಾಗ 65 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ದುರ್ಬಲ ಸ್ಥಿತಿಯಲ್ಲಿತ್ತು. ಆದರೆ, ವಿಪ್ರಜ್ ನಿಗಮ್ ಕೇವಲ 15 ಎಸೆತಗಳಲ್ಲಿ 39 ರನ್ಗಳ ಧಮಾಕಾ ಬ್ಯಾಟಿಂಗ್ ಮಾಡಿ ಚೈತನ್ಯ ತಂದರು. ಆಶುತೋಷ್ ಶರ್ಮಾ ಜೊತೆಗೆ 55 ರನ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಾದಿಗೆ ತಂದರು. ಈ ಆಟದಿಂದಾಗಿ ಡಿಸಿ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ರೋಚಕ ಗೆಲುವು ದಾಖಲಿಸಿತು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ವಿಪ್ರಜ್, ಬೌಲಿಂಗ್ನಲ್ಲೂ ತಮ್ಮ ಛಾಪು ಮೂಡಿಸಿದರು. ಎಲ್ಎಸ್ಜಿಯ ಆರಂಭಿಕ ಬ್ಯಾಟ್ಸ್ಮನ್ ಐಡೆನ್ ಮಾರ್ಕ್ರಾಮ್ರನ್ನು ಔಟ್ ಮಾಡಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು ಅವರು. ಅವರಿ 35 ರನ್ಗೆ 1 ವಿಕೆಟ್ ಉರುಳಿಸಿದ್ದರು. ಈ ಮೂಲಕ ವಿಪ್ರಜ್ ತಮ್ಮ ಆಲ್ರೌಂಡ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ.
ವಿಪ್ರಜ್ ನಿಗಮ್ ಯಾರು?
ಉತ್ತರ ಪ್ರದೇಶದಿಂದ ಮೂಲದ ವಿಪ್ರಜ್ ನಿಗಮ್, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ 50 ಲಕ್ಷ ರೂಪಾಯಿಗಳನ್ನು ಪಡೆದು ಸೇರ್ಪಡೆಯಾದರು. ಈ ಯುವ ಆಲ್ರೌಂಡರ್ ಮೊದಲು 2024ರ ಯುಪಿ ಟಿ20 ಲೀಗ್ನಲ್ಲಿ ಯುಪಿ ಫಾಲ್ಕನ್ಸ್ ಪರ 12 ಪಂದ್ಯಗಳಲ್ಲಿ 20 ವಿಕೆಟ್ಗಳನ್ನು ಪಡೆದು ಗಮನ ಸೆಳೆದಿದ್ದರು. ಆ ಟೂರ್ನಿಯಲ್ಲಿ ಅವರ ಸ್ಟ್ರೈಕ್ ರೇಟ್ 11.15 ಮತ್ತು ಎಕಾನಮಿ 7.45 ಆಗಿತ್ತು. 2024-25ರ ಸೀಸನ್ನಲ್ಲಿ ಉತ್ತರ ಪ್ರದೇಶಕ್ಕಾಗಿ ಎಲ್ಲಾ ಫಾರ್ಮ್ಯಾಟ್ಗಳಲ್ಲಿ ಚೊಚ್ಚಲ ಪಂದ್ಯವಾಡಿದ ಅವರು, ಮೂರು ಪ್ರಥಮ ದರ್ಜೆ ಪಂದ್ಯಗಳು, ಐದು ಲಿಸ್ಟ್-ಎ ಪಂದ್ಯಗಳು ಮತ್ತು ಏಳು ಟಿ20 ಪಂದ್ಯಗಳಲ್ಲಿ ಆಡಿ, 103 ರನ್ ಗಳಿಸಿ 9 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚು
2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವಿಪ್ರಜ್ ಎಂಟು ವಿಕೆಟ್ಗಳನ್ನು ಕೇವಲ 7ರಷ್ಟು ಎಕಾನಮಿಯಲ್ಲಿ ಪಡೆದಿದ್ದರು. ಬೌಲರ್ ಆಗಿ ಮಿಂಚುತ್ತಲೇ, ಅವರು ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದರು. ಆಂಧ್ರ ವಿರುದ್ಧ 157 ರನ್ಗಳ ಗುರಿಯನ್ನು ಬೆನ್ನಟ್ಟುವಾಗ, ರಿಂಕು ಸಿಂಗ್ ಜೊತೆಗೆ ಕೇವಲ 8 ಎಸೆತಗಳಲ್ಲಿ 27 ರನ್ಗಳ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಕುಲದೀಪ್ ಯಾದವ್ ಮೆಚ್ಚುಗೆ
ಪಂದ್ಯದ ಬಳಿಕ ಡಿಸಿಯ ಸ್ಪಿನ್ನರ್ ಕುಲದೀಪ್ ಯಾದವ್, ವಿಪ್ರಜ್ರನ್ನು ಶ್ಲಾಘಿಸಿದರು. "ವಿಪ್ರಜ್ ತನ್ನ ಅಂಡರ್-19 ದಿನಗಳಲ್ಲಿ ಬ್ಯಾಟರ್ ಆಗಿದ್ದ. ನಂತರ ಕ್ರಮೇಣ ಲೆಗ್-ಸ್ಪಿನ್ ಬೌಲಿಂಗ್ ಆರಂಭಿಸಿದ. ಅವನಿಗೆ ಬ್ಯಾಟಿಂಗ್ ಬಗ್ಗೆ ಆಳವಾದ ತಿಳಿವಳಿಕೆ ಇದೆ. ಅವನ ಉತ್ತಮ ಸ್ಟ್ರೋಕ್ಗಳನ್ನು ನಾನು ನೋಡಿದ್ದೇನೆ .ದೊಡ್ಡ ಶಾಟ್ಗಳನ್ನು ಆಡಲು ಹಿಂಜರಿಯುವುದಿಲ್ಲ. ಅವನ ಬೌಲಿಂಗ್ನಲ್ಲಿ ಕಠಿಣ ಪರಿಶ್ರಮ ಮಾಡುತ್ತಿದ್ದಾನೆ ಮತ್ತು ಚೆಂಡನ್ನು ಚೆನ್ನಾಗಿ ತಿರುಗಿಸುತ್ತಿದ್ದಾನೆ," ಎಂದು ಕುಲದೀಪ್ ಹೇಳಿದ್ದಾರೆ.
ಭವಿಷ್ಯದ ಭರವಸೆ
ವಿಪ್ರಜ್ ನಿಗಮ್ರ ಐಪಿಎಲ್ ಚೊಚ್ಚಲ ಪಂದ್ಯದ ಪ್ರದರ್ಶನವು ಅವರ ದೀರ್ಘಕಾಲೀನ ಯಶಸ್ಸಿಗೆ ಕಾರಣವಾಗಲಿದೆ. ಈ ಪ್ರದರ್ಶನವು ಅವರನ್ನು ಟೂರ್ನಿಯಲ್ಲಿ ಗಮನಿಸಬೇಕಾದ ಆಟಗಾರನನ್ನಾಗಿ ಮಾಡಿದೆ. ಉತ್ತರ ಪ್ರದೇಶದ ಈ ಯುವ ತಾರೆ, ಡೆಲ್ಲಿ ಕ್ಯಾಪಿಟಲ್ಸ್ಗೆ ತನ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ಸಾಮರ್ಥ್ಯದೊಂದಿಗೆ ದೊಡ್ಡ ಕೊಡುಗೆ ನೀಡುವ ಸಾಧ್ಯತೆಯಿದೆ. ಅವರ ಈ ಆರಂಭಿಕ ಯಶಸ್ಸು ಭಾರತೀಯ ಕ್ರಿಕೆಟ್ಗೆ ಹೊಸ ಪ್ರತಿಭೆಯೊಂದು ಉದಯಿಸಿದೆ ಎಂಬ ಸಂಕೇತವನ್ನು ನೀಡಿದೆ.