MS Dhoni : ಸಿಎಸ್​ಕೆ ತಂಡಕ್ಕೆ ಮತ್ತೆ ಎಂಎಸ್​ ಧೋನಿ ನಾಯಕ!
x

ಎಂಎಸ್​ ಧೋನಿ ಬ್ಯಾಟಿಂಗ್​ಗೆ ಬರುವ ದೃಶ್ಯ. (ಸಂಗ್ರಹ ಚಿತ್ರ)

MS Dhoni : ಸಿಎಸ್​ಕೆ ತಂಡಕ್ಕೆ ಮತ್ತೆ ಎಂಎಸ್​ ಧೋನಿ ನಾಯಕ!

ಋತುರಾಜ್ ಗಾಯಕ್ವಾಡ್​ ಕೈಗೆ ಗಾಯವಾಗಿದ್ದರಿಂದ ಅವರು ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಅವರ ಬದಲಿಗೆ ಧೋನಿಯೇ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳಿವೆ.


ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಕಾಯಂ ಸದಸ್ಯ ಎಂಎಸ್ ಧೋನಿ ಐಪಿಎಲ್ 2025ರಲ್ಲಿ ತಂಡದ ನಾಯಕತ್ವ ವಹಿಸುವ ಸಾಧ್ಯತೆಗಳಿವೆ. ಶನಿವಾರ (ಏಪ್ರಿಲ್ 5) ತವರಿನಲ್ಲಿ ನಡೆಯಲಿರುವ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಕಾಯಂ ನಾಯಕ ರುತುರಾಜ್ ಗಾಯಕ್ವಾಡ್​ ತನ್ನ ಮೊಣಕೈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಗಾಯಕವಾಡ್ ಈ ಹಿಂದಿನ ಪಂದ್ಯದಲ್ಲಿ ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಗಾಯಗೊಂಡಿದ್ದರು.

ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2025 ಪಂದ್ಯದ ಮುನ್ನಾದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಸ್‌ಕೆಯ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ, ಗಾಯಕ್ವಾಡ್​ ಫಿಟ್‌ನೆಸ್ ಅನ್ನು ಶುಕ್ರವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ತರಬೇತಿ ಸೆಷನ್‌ನಲ್ಲಿ ಪರೀಕ್ಷಿಸಲಾಗುವುದು ಎಂದು ತಿಳಿಸಿದರು. ಅವರ ಭಾಗವಹಿಸುವಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ಪಂದ್ಯದ ದಿನದಂದು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ತಂಡವು ತಾತ್ಕಾಲಿಕ ನಾಯಕನನ್ನು ಪರಿಗಣಿಸಿದೆಯೇ ಎಂದು ಕೇಳಿದಾಗ, ಹಸ್ಸಿ "ವಿಕೆಟ್‌ನ ಹಿಂದೆ ಇರುವ ಒಬ್ಬ ಯುವಕ" ಶನಿವಾರದ ಪಂದ್ಯದಲ್ಲಿ ನಾಯಕತ್ವ ವಹಿಸಬಹುದು ಎಂದು ಸುಳಿವು ನೀಡಿದರು. ರುತುರಾಜ್ ಗಾಯಕ್ವಾಡ್​ ಮಾರ್ಚ್ 30, ಭಾನುವಾರದಂದು ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ವಾರದ ವಿರಾಮದ ನಂತರವೂ, ಈ ಯುವ ಆರಂಭಿಕ ಆಟಗಾರ ಸಂಪೂರ್ಣ ಫಿಟ್ ಆಗಿಲ್ಲ.

"ನಾಯಕತ್ವದ ಬಗ್ಗೆ ನಾವು ಇನ್ನೂ ಹೆಚ್ಚಾಗಿ ಯೋಚಿಸಿಲ್ಲ ಎಂದು ನನಗೆ ಅನ್ನಿಸುತ್ತದೆ. ನಾನಂತೂ ಹೆಚ್ಚು ಯೋಚಿಸಿಲ್ಲ. ಸ್ಟೀಫನ್ ಫ್ಲೆಮಿಂಗ್ ಮತ್ತು ರುತು ಈ ಬಗ್ಗೆ ಚರ್ಚಿಸಿರಬಹುದು ಎಂದು ಖಚಿತವಾಗಿದೆ," ಎಂದು ಹಸ್ಸಿ ಹೇಳಿದರು.

"ಆದರೆ ನಮ್ಮಲ್ಲಿ ಒಬ್ಬ ಯುವಕ [ಧೋನಿ] ಇದ್ದಾನೆ. ಅವನು ವಿಕೆಟ್‌ನ ಹಿಂದೆ ಇದ್ದಾನೆ. ಬಹುಶಃ ಅವನು ಈ ಕೆಲಸ ಮಾಡಬಹುದು," ಎಂದು ಹಸ್ಸಿ ಲಘುವಾಗಿ ಹೇಳಿದರು,

"ನನಗೆ ಖಚಿತವಿಲ್ಲ. ಅವನಿಗೆ ನಾಯಕತ್ವದ ಪಾತ್ರದಲ್ಲಿ ಸಾಕಷ್ಟು ಅನುಭವವಿದೆ, ಆದ್ದರಿಂದ ಬಹುಶಃ ಅವನೇ ಅದನ್ನು ಮಾಡಬಹುದು. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ನನಗೆ ನಿಖರವಾಗಿ ಗೊತ್ತಿಲ್ಲ," ಎಂದು ಮಾಜಿ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ನಗುತ್ತಾ ಹೇಳಿದ್ದಾರೆ.

ಎಂಎಸ್ ಧೋನಿ 2023ರಲ್ಲಿ ಚೆನ್ನೈ ತಂಡ ಚಾಂಪಿಯನ್​ಶಿಪ್​ ಗೆದ್ದಾಗ ಕೊನೆಯ ಬಾರಿಗೆ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಬಳಿಕ ನಾಯಕತ್ವವನ್ನು ರುತುರಾಜ್ ಗಾಯಕವಾಡ್‌ಗೆ ಹಸ್ತಾಂತರಿಸಿದ್ದರು, ಅವರು 2024 ಐಪಿಎಲ್ ಸೀಸನ್‌ನಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ.

Read More
Next Story