
IPL 2025: ಜೋಫ್ರಾ ಆರ್ಚರ್ ಕರಿಯ ಎಂದ ಹರ್ಭಜನ್; ಕ್ಷಮೆಗೆ ಒತ್ತಾಯ
ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಲಂಡನ್‌ನ 'ಕಪ್ಪು ಟ್ಯಾಕ್ಸಿ'ಗೆ ಹೋಲಿಸಿದ ಅವರು ಟೀಕೆಗೆ ಗುರಿಯಾಗಿದ್ದಾರೆ.
ಬೆಂಗಳೂರು: ವರ್ಣಭೇದದ ನೀತಿ ಮನುಕುಲಕ್ಕೆ ಮಾರಕ. ಆದರೆ, ಜನರ ಮನಸ್ಸಿನಲ್ಲಿರುವ ಕಪ್ಪು ಕೀಳೆಂಬ ಭಾವ ಇನ್ನೂ ಹೋಗುತ್ತಿಲ್ಲ. ಅನಕ್ಷರಸ್ಥರ ಕತೆ ಬಿಡಿ. ಕಲಿತವರೂ ಇದೇ ರೀತಿ ಮಾಡುವುದು ಖೇದಕರ ವಿಚಾರ. ಇದೀಗ ಅಂಥದ್ದೊಂದು ವಿವಾದ ಐಪಿಎಲ್ನಲ್ಲಿ ಸೃಷ್ಟಿಯಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ವಿವಾದ ಸೃಷ್ಟಿ ಮಾಡಿದ್ದಾರೆ. ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಲಂಡನ್‌ನ 'ಕಪ್ಪು ಟ್ಯಾಕ್ಸಿ'ಗೆ ಹೋಲಿಸಿದ ಅವರು ಟೀಕೆಗೆ ಗುರಿಯಾಗಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ (SRH vs RR) ತಂಡಗಳ ನಡುವೆ ಪಂದ್ಯ ನಡೆಯಿತು. ಹಿಂದಿ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದ ಹರ್ಭಜನ್, ವಿವಾದಾತ್ಮಕ ಪದ ಬಳಕೆ ಮಾಡಿರುವುದು ಇಡೀ ವ್ಯವಸ್ಥೆಗೆ ಕಳಂಕ ತಂದಿದೆ.
ಎಸ್‌ಆರ್‌ಎಚ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ಇನ್ನಿಂಗ್ಸ್‌ನ 18ನೇ ಓವರ್ ವೇಳೆ ಈ ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಆರ್ಚರ್ ಬೌಲಿಂಗ್ ಮಾಡುತ್ತಿದ್ದರು. ಆರ್ಚರ್ ಓವರ್‌ನ ಎರಡನೇ ಮತ್ತು ಮೂರನೇ ಎಸೆತದಲ್ಲಿ ಸತತ ಬೌಂಡರಿಗಳನ್ನು ಬಿಟ್ಟುಕೊಟ್ಟಾಗ ಟೀಕಿಸುವ ಭರದಲ್ಲಿ ಭಜಿ, ವರ್ಣ ಭೇದದ ಹೇಳಿಕೆ ನೀಡಿದ್ದಾರೆ.
ಏನಂದರು ಅವರು?
“ಲಂಡನ್ ಮೇ ಕಾಲಿ ಟ್ಯಾಕ್ಸಿ ಕಾ ಮೀಟರ್ ತೇಜ್ ಭಾಗ್ತಾ ಹೈ, ಔರ್ ಯಾಹಾ ಪೆ ಆರ್ಚರ್ ಸಾಹೇಬ್ ಕಾ ಮೀಟರ್ ಭಿ ತೇಜ್ ಭಾಗಾ ಹೈ” ಎಂದು ಹಿಂದಿಯಲ್ಲಿ ಹರ್ಭಜನ್ ಹೇಳಿದ್ದಾರೆ.
"ಲಂಡನ್‌ನಲ್ಲಿ ಕಪ್ಪು ಟ್ಯಾಕ್ಸಿಗಳ ಮೀಟರ್‌ನಂತೆ ಆರ್ಚರ್ ಅವರ ರನ್ ಕೊಡುವ ಮೀಟರ್ ಕೂಡಾ ಜೋರು ಓಡುತ್ತಿದೆ" ಎಂಬುದು ಹರ್ಭಜನ್ ಹೇಳಿಕೆ ಅರ್ಥ. ಇಲ್ಲಿ ಆರ್ಚರ್ ಅವರನ್ನು ಕಪ್ಪು ಟ್ಯಾಕ್ಸಿಗೆ ಹೋಲಿಸಿದ್ದು ಈಗ ವಿವಾದವಾಗಿದ್ದು,ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಐಪಿಎಲ್ 2025ರ ಕಾಮೆಂಟರಿ ಪ್ಯಾನೆಲ್‌ನಿಂದ ಹರ್ಭಜನ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಬಲು ದುಬಾರಿ ಎನಿಸಿಕೊಂಡರು. ಒಂದೂ ವಿಕೆಟ್ ಪಡೆಯದೆ 76 ರನ್ ಬಿಟ್ಟುಕೊಡುವ ಮೂಲಕ, ಬಲಗೈ ವೇಗಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಪಂದ್ಯದಲ್ಲಿ ಹೈದರಾಬಾದ್ ತಂಡ 44 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.