x

Belagavi Border Dispute| ಕನ್ನಡ ವಿರೋಧಿ ಎಂಇಎಸ್‌ಗೆ ಮಹಾರಾಷ್ಟ್ರದ ಅಧಿಕೃತ ಕಾನೂನು ನೆರವು

ಮಹಾರಾಷ್ಟ್ರ ಸರ್ಕಾರ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಎಂಇಎಸ್‌ ಸಂಘಟನೆಗೆ ಕಾನೂನು ನೆರವು ಘೋಷಣೆ ಮಾಡಿರುವುದು ಮತ್ತೊಮ್ಮೆ ಗಡಿ ವಿವಾದವನ್ನು ಮುನ್ನೆಲೆಗೆ ತಂದಿದೆ. ಮಹಾರಾಷ್ಟ್ರ ಸರ್ಕಾರದ ಈ ನಡೆ, ಕರ್ನಾಟಕ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.


Click the Play button to hear this message in audio format

ಮಹಾರಾಷ್ಟ್ರ ಸರ್ಕಾರ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಎಂಇಎಸ್‌ ಸಂಘಟನೆಗೆ ಕಾನೂನು ನೆರವು ಘೋಷಣೆ ಮಾಡಿರುವುದು ಮತ್ತೊಮ್ಮೆ ಗಡಿ ವಿವಾದವನ್ನು ಮುನ್ನೆಲೆಗೆ ತಂದಿದೆ. ಮಹಾರಾಷ್ಟ್ರ ಸರ್ಕಾರದ ಈ ನಡೆ, ಕರ್ನಾಟಕ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. ಬೆಳಗಾವಿ ಕೇವಲ ಒಂದು ಜಿಲ್ಲೆಯ ಹೆಸರಲ್ಲ, ಅದು ಕರ್ನಾಟಕದ ಸ್ವಾಭಿಮಾನದ ಸಂಕೇತ. ಆದರೆ, ಇದೇ ಬೆಳಗಾವಿಯನ್ನು ತನ್ನದೆಂದು ಹೇಳುತ್ತಾ ಮಹಾರಾಷ್ಟ್ರ ಕಳೆದ ಏಳು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಹೋರಾಟದ ಕೇಂದ್ರಬಿಂದುವಾಗಿರುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್). ಇಷ್ಟು ವರ್ಷಗಳಿಂದ ಎಂಇಎಸ್ ಸಂಘಟನೆಗೆ ತೆರೆಮರೆಯಲ್ಲಿ ಬೆಂಬಲ ನೀಡುತ್ತಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ಮೊದಲ ಬಾರಿಗೆ ಅಧಿಕೃತವಾಗಿಯೇ ಕಾನೂನು ನೆರವು ಘೋಷಣೆ ಮಾಡಿದೆ. ಇದಕ್ಕಾಗಿ ವಿಶೇಷ ವಕೀಲರನ್ನು ನೇಮಕ ಮಾಡುತ್ತಿದ್ದು, ಅದರ ಸಂಪೂರ್ಣ ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರವೇ ಭರಿಸುತ್ತಿದೆ. ಈ ಬೆಳವಣಿಗೆಯಿಂದಾಗಿ ದಶಕಗಳ ಇತಿಹಾಸವಿರುವ ಬೆಳಗಾವಿ ಗಡಿ ವಿವಾದ ಮತ್ತೆ ರಾಷ್ಟ್ರದ ಗಮನ ಸೆಳೆದಿದೆ.

ವಿವಾದದ ಹಿನ್ನೆಲೆ

ಸ್ವಾತಂತ್ರ್ಯಕ್ಕೂ ಮೊದಲು ಬೆಳಗಾವಿ ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. 1956ರಲ್ಲಿ ಭಾಷಾವಾರು ರಾಜ್ಯಗಳ ಮರುವಿಂಗಡಣೆ ನಡೆದಾಗ ಬೆಳಗಾವಿ, ಕಾರ್ವಾರ, ನಿಪ್ಪಾಣಿ, ಖಾನಾಪುರ ಸೇರಿದಂತೆ ಹಲವು ಪ್ರದೇಶಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ (ಇಂದಿನ ಕರ್ನಾಟಕ) ಸೇರಿಸಲಾಯಿತು. ಆದರೆ, ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ, ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳು ತನಗೆ ಸೇರಬೇಕು ಎಂದು ಹೋರಾಟ ಆರಂಭಿಸಿತು. ಈ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ 1966ರಲ್ಲಿ ನಿವೃತ್ತ ನ್ಯಾಯಮೂರ್ತಿ ಮೆಹರ್ಚಂದ್ ಮಹಾಜನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. 1967ರಲ್ಲಿ ಸಲ್ಲಿಕೆಯಾದ ಮಹಾಜನ್ ವರದಿಯ ಪ್ರಕಾರ, ಬೆಳಗಾವಿ ಸೇರಿದಂತೆ 264 ಹಳ್ಳಿಗಳನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಶಿಫಾರಸು ಮಾಡಲಾಯಿತು. ಜೊತೆಗೆ ನಿಪ್ಪಾಣಿ, ಖಾನಾಪುರದ ಕೆಲವು ಗ್ರಾಮಗಳನ್ನು ಮಹಾರಾಷ್ಟ್ರಕ್ಕೂ, ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರದ ಕೆಲವು ಗ್ರಾಮಗಳನ್ನು ಕರ್ನಾಟಕಕ್ಕೂ ಸೇರಿಸಲು ಸೂಚಿಸಲಾಯಿತು. ಆದರೆ ಮಹಾರಾಷ್ಟ್ರ ಸರ್ಕಾರ ಈ ವರದಿಯನ್ನೂ ನಿರಾಕರಿಸಿ, ವಿವಾದವನ್ನು ಸುಪ್ರೀಂ ಕೋರ್ಟ್ ಅಂಗಳಕ್ಕೆ ಎಳೆಯಿತು.

"ಕನ್ನಡಿಗರೆಲ್ಲ ಒಂದೇ, ಕನ್ನಡ ಒಂದೇ. ಯಾರು ಏನಾದರೂ ಮಾಡಲಿ, ಹೋರಾಟ ಅನಿವಾರ್ಯವಾದಾಗ ಅದಕ್ಕೆ ತಕ್ಕ ರೂಪ ಕೊಡಬೇಕಾಗುತ್ತದೆ," ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಎಂಇಎಸ್ ಚಟುವಟಿಕೆಗಳು ಮತ್ತು ಮಹಾರಾಷ್ಟ್ರದ ಬೆಂಬಲ

ಮಹಾಜನ್ ವರದಿ ಬಂದ ನಂತರ ಎಂಇಎಸ್ ಸಂಘಟನೆಯು ಈ ಗಡಿ ವಿವಾದವನ್ನು ತೀವ್ರ ಚಳುವಳಿಯ ರೂಪಕ್ಕೆ ತಂದಿತು. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು 'ಕರಾಳ ದಿನ'ವನ್ನಾಗಿ ಆಚರಿಸುವುದು, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸುವುದು, ಕನ್ನಡ ನಾಮಫಲಕಗಳಿಗೆ ಮಸಿ ಬಳಿಯುವುದು ಮತ್ತು ಗಡಿಭಾಗದಲ್ಲಿ ಬಂದ್‌ಗೆ ಕರೆ ನೀಡಿ ಉದ್ವಿಗ್ನ ವಾತಾವರಣ ನಿರ್ಮಿಸುವುದು ಎಂಇಎಸ್‌ನ ನಿರಂತರ ಚಟುವಟಿಕೆಗಳಾಗಿವೆ. ಕರ್ನಾಟಕ ಸರ್ಕಾರದ ಆರೋಪಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಗಡಿಭಾಗದ ಮರಾಠಿ ಭಾಷಿಕರಿಗೆ ವಿಶೇಷ ಯೋಜನೆಗಳು, ವಿದ್ಯಾರ್ಥಿ ವೇತನ, ಆರೋಗ್ಯ ಯೋಜನೆಗಳು ಹಾಗೂ ಎಂಇಎಸ್ ಕಾರ್ಯಕರ್ತರ ಕುಟುಂಬಗಳಿಗೆ ಮಾಸಿಕ ಪಿಂಚಣಿ ನೀಡುವ ಮೂಲಕ ಈ ಸಂಘಟನೆಗೆ ಆರ್ಥಿಕ ಮತ್ತು ರಾಜಕೀಯ ಶಕ್ತಿ ತುಂಬುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ ಎಂಇಎಸ್ ನಾಯಕರಿಗೆ ಸ್ಥಾನ ನೀಡಿರುವುದು ಮತ್ತು ಅಧಿಕೃತ ಫಂಡಿಂಗ್ ಘೋಷಿಸಿರುವುದು ಕರ್ನಾಟಕದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಉಭಯ ರಾಜ್ಯಗಳ ವಾದ ಮತ್ತು ಸದ್ಯದ ಸ್ಥಿತಿ

1956ರ ರಾಜ್ಯ ಮರುವಿಂಗಡಣೆ ಕಾಯ್ದೆಯೇ ಅಂತಿಮ ಮತ್ತು ಮಹಾಜನ್ ವರದಿಯೇ ಅದಕ್ಕೆ ಸುಪ್ರೀಂ ಸಾಕ್ಷಿ ಎಂಬುದು ಕರ್ನಾಟಕದ ದೃಢ ವಾದವಾಗಿದೆ. ಭೌಗೋಳಿಕವಾಗಿ ಮತ್ತು ಆಡಳಿತಾತ್ಮಕವಾಗಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಗಡಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕದ ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಭಾಷಾವಾರು ಆಧಾರದ ಮೇಲೆಯೇ ಗಡಿ ನಿರ್ಧಾರವಾಗಬೇಕು ಮತ್ತು ಬೆಳಗಾವಿ, ಕಾರ್ವಾರ, ನಿಪ್ಪಾಣಿ ಒಳಗೊಂಡಂತೆ ಒಟ್ಟು 865 ಹಳ್ಳಿಗಳನ್ನು ತಮಗೆ ನೀಡಬೇಕು ಎಂದು ಮಹಾರಾಷ್ಟ್ರ ವಾದಿಸುತ್ತಿದೆ. 2004ರಲ್ಲಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ಈ ಅರ್ಜಿ, ನ್ಯಾಯಪೀಠಗಳ ಬದಲಾವಣೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಎರಡು ದಶಕಗಳಿಂದ ಅಂತಿಮ ವಿಚಾರಣೆಯಾಗದೆ ಬಾಕಿ ಉಳಿದಿದೆ.

"ಅವರು ಎಂಇಎಸ್ ಸಂಘಟನೆಗೆ ಕಾನೂನಾತ್ಮಕವಾಗಿ ಬ್ಯಾಕ್ ಮಾಡಿದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ನೆಲ, ಜಲ, ಭಾಷೆಯ ವಿಚಾರ ಬಂದಾಗ ನಾವು ಹಿಂದೆ ಸರಿಯುವುದಿಲ್ಲ. ಗಡಿಯಲ್ಲಿ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು." ಎಂದು ಸ್ಥಳೀಯ ರಾಜಕೀಯ ಮುಖಂಡರು ತಿಳಿಸಿದ್ದಾರೆ.

ಕುಗ್ಗುತ್ತಿರುವ ಎಂಇಎಸ್ ಪ್ರಭಾವ ಮತ್ತು ಯುವ ಪೀಳಿಗೆಯ ಚಿಂತನೆ

ಒಂದು ಕಾಲದಲ್ಲಿ ಬೆಳಗಾವಿ ರಾಜಕೀಯವನ್ನು ಸಂಪೂರ್ಣ ನಿಯಂತ್ರಿಸುತ್ತಿದ್ದ ಎಂಇಎಸ್ ಪ್ರಭಾವ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಗ್ಗಿದೆ. ಗಡಿಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷಗಳು ಬಲಿಷ್ಠವಾಗುತ್ತಿರುವುದು ಹಾಗೂ ಕನ್ನಡಪರ ಸಂಘಟನೆಗಳ ಒಗ್ಗಟ್ಟು ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಕರ್ನಾಟಕ ಸರ್ಕಾರವು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ಪ್ರತಿವರ್ಷ ಚಳಿಗಾಲದ ಅಧಿವೇಶನ ನಡೆಸುವ ಮೂಲಕ ಈ ಭಾಗಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. 2021ರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವ ಮೂಲಕ ಎಂಇಎಸ್ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಇಂದಿನ ಯುವ ಪೀಳಿಗೆಗೆ ದಶಕಗಳ ಹಳೆಯ ಗಡಿ ವಿವಾದಕ್ಕಿಂತ ಉದ್ಯೋಗ, ಕೈಗಾರಿಕೆ ಹಾಗೂ ಆರ್ಥಿಕ ಅಭಿವೃದ್ಧಿಯೇ ಮುಖ್ಯವಾಗಿದೆ. ರಾಜಕೀಯ ಲಾಭಕ್ಕಾಗಿ ವಿವಾದವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ ನಾಯಕರಿಗೆ, ಗಡಿಭಾಗದ ಇಂದಿನ ಯುವಜನತೆ ಅಭಿವೃದ್ಧಿ ಮತ್ತು ಸೌಹಾರ್ದತೆಯ ಮೂಲಕವೇ ಉತ್ತರ ನೀಡುತ್ತಿದ್ದಾರೆ.

Read More
Next Story