ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಬಂಪರ್ | ಜೋಷಿ, ನಿರ್ಮಲಾ, ಎಚ್‌ಡಿಕೆಗೆ ಸಂಪುಟ ದರ್ಜೆ, ಶೋಭಾ, ಸೋಮಣ್ಣಗೆ ರಾಜ್ಯ ದರ್ಜೆ
ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ ಅವರ ಸಂಪುಟದಲ್ಲಿ ರಾಜ್ಯದ ಐವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು(ಜೂ.9) ಸಂಜೆ 7.15 ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ, ನೂತನ ಸಂಸದರಾದ ಪ್ರಲ್ಹಾದ್ ಜೋಷಿ, ಎಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೋದಿಯವರ ಸಚಿವ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಸಿಂಹಪಾಲು ಸಿಕ್ಕಿದ್ದು, ನಿರ್ಮಲಾ ಸೀತಾರಾಮನ್ ಸೇರಿದಂತೆ ಒಟ್ಟು ಐದು ಮಂದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಆ ಪೈಕಿ ಜೋಷಿ, ನಿರ್ಮಲಾ, ಶೋಭಾ ಮತ್ತು ಸೋಮಣ್ಣ ಸೇರಿದಂತೆ ನಾಲ್ವರು ಬಿಜೆಪಿಯವರಾದರೆ, ಎಚ್ ಡಿ ಕುಮಾರಸ್ವಾಮಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ನ ರಾಜ್ಯಾಧ್ಯಕ್ಷರು.
ಹಿರಿಯರಾದ ಪ್ರಲ್ಹಾದ ಜೋಷಿ, ನಿರ್ಮಲಾ ಸೀತಾರಾಮನ್ ಅವರಿಗೆ ಸಂಪುಟ(ಕ್ಯಾಬಿನೆಟ್) ದರ್ಜೆ ನೀಡಲಾಗಿದ್ದು ಮತ್ತು ಜೆಡಿಎಸ್ ಕೋಟಾದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರಿಗೂ ಕ್ಯಾಬಿನೆಟ್ ದರ್ಜೆ ಸಿಕ್ಕಿದೆ. ಇನ್ನು ಬಿಜೆಪಿಯ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಯೂ ರಾಜ್ಯ(ಸ್ಟೇಟ್) ದರ್ಜೆ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಹಿರಿಯ ನಾಯಕ ವಿ ಸೋಮಣ್ಣ ಅವರಿಗೂ ಸ್ಟೇಟ್ ದರ್ಜೆ ನೀಡಲಾಗಿದೆ.
ಮೂರೂ ಪ್ರಭಾವಿ ಸಮುದಾಯಕ್ಕೆ ಅವಕಾಶ
ರಾಜ್ಯದಿಂದ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಕ್ಕಿದ್ದು, ಅದರಲ್ಲೂ ಜಾತಿವಾರು ಲೆಕ್ಕಾಚಾರದಂತೆ ಪ್ರಲ್ಹಾದ ಜೋಷಿ ಮತ್ತು ನಿರ್ಮಲಾ ಸೀತಾರಾಮನ್ ಅವರು ಬ್ರಾಹ್ಮಣ ಸಮುದಾಯದಿಂದ, ಶೋಭಾ ಕರಂದ್ಲಾಜೆ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಒಕ್ಕಲಿಗ ಸಮುದಾಯದಿಂದ ಮತ್ತು ಸೋಮಣ್ಣ ಅವರು ಲಿಂಗಾಯತ ಕೋಟಾದಡಿ ಅವಕಾಶ ಪಡೆದಿದ್ದಾರೆ.
ಆ ಮೂಲಕ ರಾಜ್ಯದಲ್ಲಿ ಬಿಜೆಪಿಯ ಮತಬ್ಯಾಂಕ್ ಆಗಿರುವ ರಾಜ್ಯದ ಪ್ರಭಾವಿ ಮೂರೂ ಸಮುದಾಯಗಳಿಗೆ ಮೋದಿಯವರ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಂತಾಗಿದೆ.
ಆದರೆ, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಈ ಬೆಳವಣಿಗೆ ನಿರಾಶೆ ತಂದಿದೆ. ಈ ಬಾರಿ ಮೋದಿಯವರಿಗೆ ಪಕ್ಷದ ಹಿರಿತನ ಮತ್ತು ಉತ್ತರಕರ್ನಾಟಕದ ಲಿಂಗಾಯತ ಸಮುದಾಯದ ಪ್ರಾತಿನಿಧ್ಯದ ಆಧಾರದ ಮೇಲೆ ಅವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿದ್ದವು.
ಕೃಷಿ ಖಾತೆಯ ಮೇಲೆ ಕುಮಾರಸ್ವಾಮಿ ಕಣ್ಣು
ಈಗಾಗಲೇ ಲೋಕಸಭಾ ಚುನಾವಣೆಯ ಪ್ರಚಾರ ಕಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ಕುಮಾರಸ್ವಾಮಿ ಅವರು ತಾವು ಗೆದ್ದುಬಂದರೆ ಕೇಂದ್ರದಲ್ಲಿ ಕೃಷಿ ಖಾತೆ ನೀಡುವುದಾಗಿ ಮೋದಿಯವರು ಹೇಳಿರುವುದಾಗಿ ಹೇಳಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆಯೇ ಸಿಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕುಮಾರಸ್ವಾಮಿ ಕೂಡ ಆ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿರುವ ಸಚಿವರ ಖಾತೆಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.