ಸಂವಿಧಾನಕ್ಕೆ ತಿದ್ದುಪಡಿ ತಂದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ, ಯಾಕೆ?
x
ಕಲ್ಯಾಣ ಕರ್ನಾಟಕ ಭಾಗದ ನಕ್ಷೆ

ಸಂವಿಧಾನಕ್ಕೆ ತಿದ್ದುಪಡಿ ತಂದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ, ಯಾಕೆ?

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸತತ ಹೋರಾಟಗಳ ನಂತರ ಸಂವಿಧಾನ 371 (ಜೆ) ಪರಿಚ್ಛೇದಕ್ಕೆ ತಿದ್ದುಪಡಿ ತರಲಾಗಿತ್ತು ಆದರೆ ತಿದ್ದುಪಡಿ ತಂದು 12 ವರ್ಷಗಳ ನಂತರವೂ ಆ ಭಾಗದ ಪರಿಸ್ಥಿತಿ ಹಾಗೆಯೇ ಇರುವುದಕ್ಕೆ ಕಾರಣಗಳೇನು?


ಸಂವಿಧಾನದ ಪರಿಚ್ಛೇದ 371 (ಜೆ) ಗೆ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾಂದಿ ಹಾಡಲಾಯಿತು. ಆದರೆ ಕಳೆದ 2013ರಲ್ಲಿಯೇ ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಯುಪಿಎ ಸರ್ಕಾರ ಕೊಡುಗೆ ಕೊಟ್ಟಿದೆ. ಕಳೆದ 12 ವರ್ಷಗಳಲ್ಲಿಆ ಭಾಗದಲ್ಲಿ ಅಭಿವೃದ್ಧಿ ಆಗಿದೆಯಾ ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ ಆ ಭಾಗದ ಹೋರಾಟಗಾರರು. ಅದಕ್ಕೆ ಕಾರಣಗಳನ್ನೂ ಕೂಡ ಅವರು ಕೊಟ್ಟಿದ್ದಾರೆ.

ಹೈದರಾಬಾದ್ ನಿಜಾಮರ ಆಡಳಿತದಲ್ಲಿ ಸಿಕ್ಕಿಕೊಂಡಿದ್ದೆವು. ಒಟ್ಟು 7 ಜಿಲ್ಲೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುತ್ತವೆ. ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಆ ಭಾಗದ ಜನರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದರು. ಹೀಗಾಗಿ ಈ ಭಾಗದ ಅಭಿವೃದ್ಧಿಗಾಗಿ ವಿಶೇಷವಾದ ಮುತುವರ್ಜಿಯನ್ನು ವಹಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೊನೆಗೂ ಸಂವಿಧಾನ ತಿದ್ದುಪಡಿಯ ಮೂಲಕ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರಯತ್ನ ಪಟ್ಟಿದ್ದರು. ನಂತರ 2023ರಲ್ಲಿ ಸಂಭ್ರಮದ ದಶಮಾನೋತ್ಸವನ್ನೂ ಆಚರಿಸಲಾಗಿತ್ತು. ಆದರೆ ನಿಜವಾಗಿಯೂ ಆ ಭಾಗದ ಹೋರಾಟಗಾರರು, ಜನಸಾಮಾನ್ಯರ ಅಭಿಪ್ರಾಯವೇ ಬೇರೆ ಇದೆ.

ದಶಕಗಳ ಹೋರಾಟದಿಂದ ನಮ್ಮ ಭಾಗದ ಅಭಿವೃದ್ಧಿಗೆ 2013ರ ಜನವರಿ 1 ರಂದು ಆರ್ಟಿಕಲ್ 371(ಜೆ)ಗೆ ತಿದ್ದುಪಡಿ ತರಲಾಗಿದೆ. ಆದರೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಆಗಬೇಕಾಗಿತ್ತು. ಆದರೆ ನಮ್ಮ ಭಾಗದ ಜನಪ್ರತಿನಿಧಿಗಳು ನಿಷ್ಕಾಳಜಿಯಿಂದಾಗಿ ಹಾಗೂ ಸರ್ಕಾರಗಳ ಮಲತಾಯಿ ಧೋರಣೆಯಿಂದ ಇನ್ನೂ ಕೂಡ ಅಭಿವೃದ್ಧಿ ಆಗುತ್ತಿಲ್ಲ ಎಂದು ಅಹಿಂದ ಚಿಂತಕರ ವೇದಿಕೆಯ ರಾಜ್ಯ ಅಧ್ಯಕ್ಷ ಸೈಬಣ್ಣ ಜಾಮಾದಾರ ಅವರು ದ ಫೆಡರಲ್ ಕರ್ನಾಟಕದೊಂದಿಗೆ ಮಾಹಿತಿ ಹಂಚಿಕೊಂಡರು.

ಕೇವಲ ಸಂವಿಧಾನದ ಆರ್ಟಿಕಲ್ 371 (ಜೆ)ಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಆದರೆ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿಲ್ಲ, ಶಿಕ್ಷಕರ ನೇಮಕಾತಿ ಆಗಿಲ್ಲ. ಕೆಲ ಮಟ್ಟಿಗೆ ಶಿಕ್ಷಣ ಹಾಗೂ ಉದ್ಯೋಗ ಹಾಗೂ ಮುಂಬಡ್ತಿಯಲ್ಲಿ ಅನುಕೂಲವಾಗಿದೆ. ಅದು ಕೂಡ ಕಡಿಮೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 10 ವಿಶ್ವವಿದ್ಯಾಲಯಗಳಿದ್ದಾವೆ. ಆದರೂ ಅವುಗಳಿಗೆ ಸರಿಯಾದ ಅನುದಾನ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಜೊತೆಗೆ ವಿಶೇಷ ತಿದ್ದುಪಡಿ ಮಾಡಿದ ಬಳಿಕ ನಮ್ಮ ಭಾಗದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ನಂಬಿದ್ದೆವು. ಆದರೆ ಅಂತಹ ಯಾವುದೇ ಬದಲಾವಣೆ ಆಗಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ತಂದ ನಂತರವೂ ಖಾಸಗಿ ಅಭಿವೃದ್ಧಿ ಆಗುತ್ತಿದೆ. ರಾಜಕಾರಣಿಗಳ ಕೆಟ್ಟ ಮನಃಸ್ಥಿತಿಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಜೊತೆಯಾಗಿ ಅಭಿವೃದ್ಧಿಯತ್ತ ಕೆಲಸ ಮಾಡಬೇಕಿದೆ. ಆದರೆ ಜನರು ಅಭಿವೃದ್ಧಿಯಾದರೆ ನಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ನಮ್ಮ ಭಾಗದ ರಾಜಕಾರಣಗಳೇ ಇದಕ್ಕೆ ಕಾರಣ ಎಂದು ಆರೋಪಿಸುತ್ತಾರೆ ಕಲ್ಯಾಣ ಕರ್ನಾಟಕ ಹೋರಾಟಗಾರ ವಿಜಯ್ ಜಾಧವ್.

ಉದ್ಯೋಗದಲ್ಲಿ ಮೀಸಲಾತಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 371 (ಜೆ) ತಿದ್ದುಪಡಿ ಡ್ರಾಫ್ಟಿಂಗ್ ಮಾಡುವ ಸಮಿತಿಯೇ ತಪ್ಪು ಮಾಡಿದೆ. ಟ್ರಾಫ್ಟಿಂಗ್ ಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ಸರಿಯಾಗಿ ಕಾನೂನು ಮಾಡಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಆಗುತ್ತಿಲ್ಲ. ಇನ್ನು ಮುಂದಾದರೂ ಆಗಲಿ ಎನ್ನುತ್ತಾರೆ ಆ ಭಾಗದ ಜನರು.


ಹೆಚ್ಚಿನ ವಿವರಗಳಿಗೆ ಈ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ


Read More
Next Story