
ಡಿಕೆ ಸುರೇಶ್ ವಿರುದ್ಧ ಯಾರೇ ನಿಂತರು ಸ್ವಾಗತ: ಡಾ. ಮಂಜುನಾಥ್ ಸ್ಪರ್ಧೆಗೆ ಡಿಕೆಶಿ ಪ್ರತಿಕ್ರಿಯೆ
ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬುಧವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್‌ನ ಡಿಕೆ ಸುರೇಶ್ ಅವರಿಗೆ ಸೆಡ್ಡು ಹೊಡೆದಿದೆ.
ಈ ಬಗ್ಗೆ ಕಲಬುರ್ಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಡಿ.ಕೆ ಸುರೇಶ್ ಸಂಸದನಾಗಿ ಕೆಲಸ ಮಾಡುವುದಕ್ಕಿಂತ ಪಂಚಾಯಿತಿ ಸದಸ್ಯನ ರೀತಿಯಲ್ಲಿ ಹಳ್ಳಿ ಹಳ್ಳಿಯಲ್ಲಿ ತಿರುಗಿ ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಯಾರೇ ನಿಂತರೂ ನಾವು ಸ್ವಾಗತಿಸುತ್ತೇವೆʼʼ ಎಂದು ಉತ್ತರಿಸಿದರು.
ʼʼನನಗೆ ಡಾ. ಮಂಜುನಾಥ್, ಕುಮಾರಸ್ವಾಮಿ, ದೇವೇಗೌಡರ ಮೇಲೆ ಗೌರವವಿದೆ. ನಾವು ದೇವೇಗೌಡರ ವಿರುದ್ಧ ನಾನು ನಿಂತಿದ್ದೆ, ಒಬ್ಬ ಹೆಣ್ಣು ಮಗಳನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದಿದ್ದೇನೆ, ಅವರ ಧರ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ನನ್ನ ಸಹೋದರನನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಮಂಜುನಾಥ್ ಅವರ ಅಧಿಕಾರ ಅವಧಿಯನ್ನು ನಮ್ಮ ಸರ್ಕಾರವೂ ವಿಸ್ತರಣೆ ಮಾಡಿಕೊಂಡು ಬಂದಿದೆ. ನಮಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ. ನಾವು ನೀತಿ ಮೇಲೆ ಚುನಾವಣೆ ಮಾಡುತ್ತೇವೆ" ಎಂದರು.
ʼʼಮಂಜುನಾಥ್ ಅವರಿಗೆ ಸ್ಪರ್ಧೆ ಮಾಡುವ ಒಲವು ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರೇ ಹೇಳಿಕೆ ನೀಡಿದ್ದಾರೆ. ಅವರ ಮನೆ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಕುಮಾರಸ್ವಾಮಿ ಅವರ ಮಗ ಹಾಗೂ ತಂದೆ ಇಬ್ಬರ ಚುನಾವಣೆಯನ್ನು ನೋಡಿದ್ದೇವೆ" ಎಂದು ಹೇಳಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಕೇಳಿದ ಪ್ರಶ್ನೆಗೆ, "ನಾವು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ಪಕ್ಷದಿಂದ 10ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಕಾರಣ ಆ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕೆಲಸ ಮಾಡಿಲ್ಲ, ಜನರಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಜನ ಬೇಸರವಾಗಿದ್ದಾರೆ ಎಂದು ಬೇರೆಯವರನ್ನು ನಿಲ್ಲಿಸುತ್ತಿದ್ದಾರೆ" ಎಂದು ಡಿಕೆ ಶಿವಕುಮಾರ್ ಉತ್ತರಿಸಿದರು.